ನವದೆಹಲಿ: ಗಡಿಯಾಚೆಗಿನ ಭಯೋತ್ಪಾದನೆ ವಿಷಯದ ಬಗ್ಗೆ ಸಾರ್ಕ್ (ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘ) ಸಭೆಯಲ್ಲಿ ಭಾರತ ಸೌಹಾರ್ದತೆಯ ಧ್ವನಿ ಎತ್ತಿದೆ. ಸಭೆಯಲ್ಲಿ ಭಾಗವಹಿಸಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಾತನಾಡಿದರು.
ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಅವರು, ಇಂದು ಸಾರ್ಕ್ ಸಬೆಯಲ್ಲಿ ಭಾರತವು ಸುರಕ್ಷಿತ ಮತ್ತು ಸಮೃದ್ಧ ದಕ್ಷಿಣ ಏಷ್ಯಾ ನಿರ್ಮಿಸುವತ್ತ ಬದ್ಧತೆಯಿಂದ ಇರುತ್ತದೆ ಎಂದು ಪುನರುಚ್ಚರಿಸಿತು. ಗಡಿಯಾಚೆಗಿನ ಭಯೋತ್ಪಾದನೆ, ಸಂಪರ್ಕವನ್ನು ನಿರ್ಬಂಧಿಸುವುದು ಮತ್ತು ವ್ಯಾಪಾರವನ್ನು ತಡೆಯುವುದು ಸಾರ್ಕ್ನ ಪ್ರಮುಖ ಸವಾಲುಗಳಾಗಿವೆ. ಅದು ಸಾಧ್ಯವಾದಾಗ ಮಾತ್ರ ನಮ್ಮ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಸುರಕ್ಷತೆಯನ್ನು ಕಾಪಾಡಲು ಸಾಧ್ಯ ಎಂದು ವಿದೇಶಾಂಗ ಸಚಿವರು ಪ್ರತಿಪಾದಿಸಿದರು.
ನೆರೆಯ ಮಾಲ್ಡೀವ್ಸ್ಗೆ 150 ಮಿಲಿಯನ್ ಯುಎಸ್ಡಿ ವಿದೇಶಿ ಕರೆನ್ಸಿ, ಭೂತಾನ್ಗೆ 200 ಮಿಲಿಯನ್ ಯುಎಸ್ಡಿ ಹಾಗೆ ಈ ವರ್ಷದ ಅವಧಿಯಲ್ಲಿ ಶ್ರೀಲಂಕಾಕ್ಕೆ 400 ಮಿಲಿಯನ್ ಯುಎಸ್ಡಿ ನೀಡಿ ರಾಷ್ಟ್ರಗಳ ಅಭಿವೃದ್ಧಿಗೆ ಸಹಕಾರ ನೀಡಲಿದೆ ಎಂದು ಜೈಶಂಕರ್ ಹೇಳಿದರು.
ಇಂದು ಸಾರ್ಕ್ ಅನೌಪಚಾರಿಕ ಸಭೆಯಲ್ಲಿ ಜೈಶಂಕರ್ ಭಾಗವಹಿಸಿದ್ದರು. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದ ವಿದೇಶಾಂಗ ಮಂತ್ರಿಗಳು ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಈ ಬಾರಿ ನೇಪಾಳವು ಸಭೆಯ ಆತಿಥ್ಯ ವಹಿಸಿತ್ತು.
ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಮಿಲಿಟರಿ ನೆಲೆಯ ಮೇಲೆ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರು ದಾಳಿ ನಡೆಸಿದ ನಂತರ ಸಾರ್ಕ್ ಶೃಂಗಸಭೆ ತುಂಬಾ ವಿಳಂಬವಾಗಿ ನಡೆದಿದೆ ಎಂಬುದನ್ನು ನಾವು ಗಮನಿಸಬೇಕಿದೆ. ಪಾಕಿಸ್ತಾನವು 2016 ರಲ್ಲಿ ಶೃಂಗಸಭೆಯನ್ನು ಆಯೋಜಿಸಬೇಕಿತ್ತು. ಆದರೆ, ಉರಿ ದಾಳಿಯ ನಂತರ ಭಾರತ ಸಭೆ ಬಹಿಷ್ಕರಿಸಲು ನಿರ್ಧರಿಸಿತು. ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡವನ್ನು ಹೆಚ್ಚಿಸಲು ಭಾರತದ ನಿರ್ಧಾರವನ್ನು ಬಾಂಗ್ಲಾದೇಶ, ಭೂತಾನ್ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಇತರ ದೇಶಗಳು ಬೆಂಬಲಿಸಿದವು.