ಇನ್ನೇನು 2019 ನೇ ವರ್ಷ ಮುಗಿಯಲು ಕ್ಷಣಗಣನೆ ಆರಂಭವಾಗಿದೆ. 2020 ರ ಶುಭಾರಂಭಕ್ಕೆ ಎಲ್ಲ ಸಿದ್ಧತೆಗಳು ನಡೆದಿವೆ. ಈ ನಡುವೆ 2019 ಅನ್ನು ತಿರುಗಿ ನೋಡಿದಾಗ ಮೋದಿ ಸರ್ಕಾರ ಮತ್ತು ದೇಶದಲ್ಲಿ ಈ ವರ್ಷ ನಡೆದ ಕೆಲವು ಒಳ್ಳೆಯ ಹಾಗೂ ಕೆಟ್ಟ ಸುದ್ದಿಗಳ ದೊಡ್ಡ ಸರಮಾಲೆಯೇ ಇದೆ.
ದೇಶದಲ್ಲಿ 2019 ಹಲವು ಕ್ರಾಂತಿಕಾರಕ ನಿರ್ಧಾರಗಳನ್ನ ಕೈಗೊಂಡ ವರ್ಷವಾಗಿದೆ. ಅಸಾಧ್ಯ ಎಂಬ ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಬದಲಾವಣೆಗಳು ದೇಶದಲ್ಲಿ ಘಟಿಸಿವೆ. ಅಷ್ಟೇ ಅಲ್ಲ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕವಾಗಿ ಸರ್ಕಾರ ಹಲವು ಮಹತ್ವದ ನಿರ್ಧಾರಗಳನ್ನ ತೆಗೆದುಕೊಂಡಿದೆ. ಇದು ತಮಗೆಲ್ಲ ಗೊತ್ತಿರುವ ವಿಚಾರವೂ ಹೌದು.
ವಿಶೇಷ ಎಂದರೆ ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಸ್ಥಾಪಿಸಿದ್ದ ಕೆಲವು ಸಂಸ್ಥೆ, ಕಾನೂನು, ನೀತಿಗಳನ್ನ ಬದಲಾಯಿಸಿ ಹೊಸ ಭಾಷ್ಯ ಬರೆಯಿತು ಮೋದಿ ಸರ್ಕಾರ. ಕೆಲವು ಅಚ್ಚರಿ ನಿರ್ಧಾರಗಳನ್ನ ಪ್ರಕಟಿಸುವ ಮೂಲಕ ಮೋದಿ ಸರ್ಕಾರ ದೇಶಕ್ಕೆ ಅಚ್ಚರಿಗಳ ಮೇಲೆ ಅಚ್ಚರಿ ನೀಡಿತು. ಇದರಲ್ಲಿ ಸಿಎಎ ಹೊರತುಪಡಿಸಿ ಎಲ್ಲವೂ ಅಚ್ಚರಿಗೆ ದೂಡುವ ವಿಷಯಗಳೇ ಆಗಿದ್ದವು.
ಇಂತಹ ಅಚ್ಚರಿಗಳಲ್ಲೊಂದು ತ್ರಿವಳಿ ತಲಾಖ್. ಸುಪ್ರೀಂನಿಂದ ಬಂದ ತ್ರಿವಳಿ ತಲಾಖ್ ನಿಷೇಧ, ಆ ಬಳಿಕ ಕೇಂದ್ರ ಸರ್ಕಾರ ಈ ಬಗ್ಗೆ ಹೊಸ ಕಾನೂನು ಮಾಡಿ ಎರಡೂ ಸದನಗಳಲ್ಲಿ ಅನುಮೋದನೆ ಪಡೆದು ಜಾರಿಗೆ ತಂದಿತು. ಇದಕ್ಕೆ ಭಾರತೀಯ ಮುಸ್ಲಿಂ ಸಮಾಜದಿಂದ ಅಷ್ಟೇನೂ ವಿರೋಧ ಕಂಡು ಬರಲಿಲ್ಲ. ಈ ಹಿಂದಿನ ಸರ್ಕಾರಗಳು ಧಾರ್ಮಿಕ ವಿಷಯದಲ್ಲಿ ಇಂತಹ ನಿರ್ಧಾರಗಳನ್ನ ಕೈಗೊಳ್ಳುವುದರಿಂದ ದೂರವೇ ಉಳಿದಿದ್ದವು. ಆದರೆ ಮೋದಿ ಸರ್ಕಾರ ಇಂತಹ ನಿರ್ಧಾರಗಳನ್ನ ತೆಗೆದುಕೊಂಡು ಇತಿಹಾಸ ಬರೆಯಿತು.
ಇದಾದ ಮೇಲೆ ಬಿಜೆಪಿ ಸರ್ಕಾರ ಕೈ ಹಾಕಿದ್ದು, ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನ ತೆಗೆದು ಹಾಕಲು.ಸುಮಾರು 70 ವರ್ಷಗಳಿಂದ ಹಾಗೇ ಮುಂದುವರೆದಿದ್ದ ಈ ಸ್ಥಾನಮಾನವನ್ನ ಮೋದಿ ಸರ್ಕಾರ ಸರಳವಾಗಿ ತೆಗೆದು ಹಾಕಿ ಅಚ್ಚರಿಗೆ ಕಾರಣವಾಯ್ತು. ಇದಕ್ಕಾಗಿ ಹಲವು ತಿಂಗಳುಗಳ ಮೊದಲೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದ ಸರ್ಕಾರ ಮುಂಜಾಗ್ರತೆಯಾಗಿ ಕಾಶ್ಮೀರದಲ್ಲಿ ಸೇನೆ ಜಮಾವಣೆ ಮಾಡಿತ್ತು. ಪ್ರಮುಖ ನಾಯಕರನ್ನ ಬಂಧನದಲ್ಲಿಟ್ಟಿತ್ತು. ಆ ಮೂಲಕ ಈ ಬಗ್ಗೆ ಪ್ರತಿಪಕ್ಷಗಳು ದೊಡ್ಡ ಮಟ್ಟದ ಪ್ರತಿಭಟನೆ ನಡೆಸದಂತೆ ನೋಡಿಕೊಂಡಿತ್ತು. ಕಾಶ್ಮೀರದಾದ್ಯಂತ ಇಂಟರ್ನೆಟ್ ಸಂಪರ್ಕ ಕಡಿತ ಮಾಡುವ ಹಾಗೂ ಪ್ರತ್ಯೇಕತಾವಾದಿಗಳ ಬಂಧನ ಮಾಡುವ ಮೂಲಕ ಎಲ್ಲ ಅಡ್ಡಿಗಳನ್ನ ನಿವಾರಿಸಿತ್ತು. ರಾಷ್ಟ್ರಪತಿಗಳ ಸಹಿ ಮೂಲಕ ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ತೆಗೆದು ಹಾಕಿ, ಕಾಶ್ಮೀರ ಹಾಗೂ ಲಡಾಖ್ ಎಂಬ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ನಿರ್ಧಾರ ಕೈಗೊಂಡಿತು. ಇನ್ನೂ ಕೆಲವೆಡೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಟೀಕೆಗಳು ಬಂದವು. ಈ ವಿಷಯವನ್ನ ಪಾಕಿಸ್ತಾನ ವಿಶ್ವಸಂಸ್ಥೆಗೂ ಕೊಂಡೊಯ್ಯಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಈ ವರ್ಷದ ಪ್ರಮುಖ ಘಟ್ಟಗಳಲ್ಲಿ ಅತಿ ಪ್ರಮುಖವಾದದ್ದು, ಶತಮಾನಗಳ ಕಾಲ ದೇಶವನ್ನ ಕಾಡಿದ ಪ್ರಮುಖ ಸಮಸ್ಯೆಯೊಂದು ಬಗೆಹರಿದ ವರ್ಷವಿದು. ಅದೇ ರಾಮಜನ್ಮಭೂಮಿ- ಬಾಬ್ರಿ ಮಸೀದಿ ವಿವಾದ ಬಗೆಹರಿದ ವಿಷಯ. ಈ ವಿವಾದಕ್ಕೆ ಅಂತ್ಯ ಹಾಡುವ ಮುನ್ನ ಸರ್ಕಾರ, ಯೋಜನೆ ಕಾರ್ಯಗತಗೊಳಿಸುವ ಮೊದಲು ಹಲವು ಪೂರಕ ಕ್ರಮಗಳನ್ನ ಯೋಜನಾಬದ್ಧ ತೀರ್ಮಾನ ಕೈಗೊಳ್ಳಲು ಪೂರಕ ವಾತಾವರಣ ಸೃಷ್ಟಿಸಿತ್ತು. ಸುಪ್ರೀಂಕೋರ್ಟ್ ತೀರ್ಪು ಹೊರ ಬೀಳುವ ಒಂದು ವಾರಗಳ ಮುನ್ನವೇ, ಹೆಚ್ಚಿನ ಮುಸ್ಲಿಂ ವಿದ್ವಾಂಸರು ಸೌಹಾರ್ದಯುತವಾಗಿ ವಿವಾದ ಬಗೆಹರಿಸಿಕೊಳ್ಳುವ ಮಾತನಾಡಿದ್ದರು. ಕೆಲವರು ರಾಮಮಂದಿರ ನಿರ್ಮಾಣಕ್ಕಾಗಿ ಹಿಂದೂಗಳಿಗೆ ಭೂಮಿಯನ್ನು ಹಸ್ತಾಂತರಿಸಬೇಕು ಎಂಬ ಮಾತುಗಳನ್ನ ಸಾರ್ವಜನಿಕವಾಗಿ ಆಡಿದ್ದರು.
ಅಂದುಕೊಂಡಂತೆಯೇ ಸುಪ್ರೀಂ ತೀರ್ಪು ಬಂದ ಮೇಲೆ ಅಷ್ಟೊಂದು ವಿರೋಧ ವ್ಯಕ್ತವಾಗಲಿಲ್ಲ. ಬಹುತೇಕರು ತೀರ್ಪನ್ನ ಸ್ವಾಗತಿಸಿದರು. ಇವೆಲ್ಲ ಈ ವರ್ಷದ ಅಚ್ಚರಿಯ ನಿರ್ಧಾರಗಳು...ಆದರೆ, ಸರ್ಕಾರ ಯಾವಾಗ ಪೌರತ್ವ ತಿದ್ದುಪಡಿ ಕಾಯಿದೆ ಸಿಎಎ ಜಾರಿಗೆ ಮುಂದಾಯಿತೋ ದೇಶದ್ಯಾಂತ ಪ್ರತಿಭಟನೆಯ ಕಾವು ವ್ಯಾಪಿಸಿತು.