ಕರ್ನಾಟಕ

karnataka

ETV Bharat / bharat

ಚೀನಾ ಪ್ರತಿರೋಧದ ನಡುವೆಯೂ ಕೋವಿಡ್ ಕುರಿತು ಸ್ವತಂತ್ರ ಅವಲೋಕನ ಅಗತ್ಯ: ಆಸ್ಟ್ರೇಲಿಯಾ ಪ್ರತಿಪಾದನೆ

ಕಳೆದ ಕೆಲವು ವರ್ಷಗಳಿಂದ ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ವಿಪತ್ತಿನಲ್ಲಿ ಭಾರತ ನಾಯಕತ್ವವನ್ನು ವಹಿಸಿದೆ. ಕೇವಲ ನೆರೆ ದೇಶಗಳಿಗಷ್ಟೇ ಅಲ್ಲ, ಹಲವು ದೇಶಗಳಿಗೆ ಫಾರ್ಮಾಸುಟಿಕಲ್ಸ್‌, ಪಿಪಿಇಗಳು ಹಾಗೂ ಇತರ ಸಾಮಗ್ರಿಗಳನ್ನು ಪ್ರತಿ ವಾರವೂ ಒದಗಿಸುತ್ತಿದೆ.

Barry O Farrell
ಬ್ಯಾರ್ರಿ ಒಫರೆಲ್‌

By

Published : May 9, 2020, 1:10 PM IST

ಕೋವಿಡ್ 19 ಜಾಗತಿಕ ಸಾಂಕ್ರಾಮಿಕ ರೋಗ ಹುಟ್ಟಿನ ಮೂಲಕ್ಕೆ ಕಾರಣವನ್ನು ಹುಡುಕಲು ಸ್ವತಂತ್ರ ಜಾಗತಿಕ ತನಿಖೆ ನಡೆಸುವ ಬೇಡಿಕೆಯನ್ನು ಆಸ್ಟ್ರೇಲಿಯಾ ನಿರಂತರವಾಗಿ ಜಾಗತಿಕ ಸಂಸ್ಥೆಗಳ ಎದುರು ಇಡಲಿದೆ ಎಂದು ಭಾರತಕ್ಕೆ ನಿಯೋಜಿತ ಹೈ ಕಮಿಷನರ್ ಬ್ಯಾರ್ರಿ ಒಫರೆಲ್‌ ಹೇಳಿದ್ದಾರೆ.

ತನಿಖೆಗೆ ಆಸ್ಟ್ರೇಲಿಯಾ ಒತ್ತಡ ಹಾಕುವುದನ್ನು ಮುಂದುವರಿಸಿದರೆ ವೈನ್ ಮತ್ತು ದನದ ಮಾಂಸವನ್ನು ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸುವ ಬೆದರಿಕೆಯನ್ನು ಕ್ಯಾನ್‌ಬೆರಾದಲ್ಲಿನ ಚೀನಾ ರಾಯಭಾರಿ ಬೆದರಿಕೆಯನ್ನೂ ಒಡ್ಡಿದ್ದಾರೆ. ವರದಿಗಳ ಪ್ರಕಾರ ಈ ವಿಷಯದಲ್ಲಿ ಆಸ್ಟ್ರೇಲಿಯಾ ಜೊತೆಗೆ ವ್ಯಾಪಾರ ನಿರ್ಬಂಧಗಳನ್ನು ವಿಧಿಸುವುದಾಗಿ ನ್ಯೂಜಿಲ್ಯಾಂಡ್​​ಗೂ ಚೀನಾ ಬೆದರಿಕೆ ಹಾಕಿದೆ. “ ನಮ್ಮ ಸಿದ್ಧಾಂತಕ್ಕೆ ಅನುಗುಣವಾದ ವಿಚಾರಗಳ ಕುರಿತು ನಾವು ಮಾತನಾಡುತ್ತಲೇ ಇರುತ್ತೇವೆ” ಎಂದು ಹೈ ಕಮಿಷನರ್ ಹೇಳಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಷ್ಟೇ ಅಧಿಕಾರ ವಹಿಸಿಕೊಂಡ ಹೊಸ ರಾಯಭಾರಿ ಒಫರೆಲ್‌, ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಜೊತೆಗೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದು, ಈ ತನಿಖೆಯನ್ನು ಯಾವುದೇ ಒಂದು ದೇಶದ ವಿರುದ್ಧ ಗುರಿಪಡಿಸಲಾಗಿದೆ ಎಂದು ಪರಿಗಣಿಸಬಾರದು ಮತ್ತು ವಿಶ್ವಸಂಸ್ಥೆ ಮಟ್ಟದ ಸ್ವತಂತ್ರ ತನಿಖಾ ಸಂಸ್ಥೆ ನಡೆಸಬೇಕು ಎಂದು ಅವರು ಹೇಳಿದ್ದಾರೆ. ನಾಲ್ಕು ವರ್ಷಗಳ ಹಿಂದೆ ವಿಶ್ವಸಂಸ್ಥೆಯಿಂದ ತೈವಾನ್ ಅನ್ನು ಬೀಜಿಂಗ್ ಹೊರಗಿಟ್ಟ ಹಿನ್ನೆಲೆಯಲ್ಲಿ ತೈವಾನ್ ಅನ್ನು ಪುನಃ ವಿಶ್ವಸಂಸ್ಥೆಗೆ ಸೇರಿಸುವ ಬಗ್ಗೆ ಆಸ್ಟ್ರೇಲಿಯಾದ ಬೇಡಿಕೆಯ ಬಗ್ಗೆ ಮಾತನಾಡಿದ ಹೈ ಕಮೀಷನರ್ “ನೀವು ಒಂದು ದೇಶವಾಗಿದ್ದು, ಯಾವುದೇ ಒಂದು ವಿಧದ ಸರ್ಕಾರವಿದ್ದರೆ, ಆ ದೇಶದಲ್ಲಿ ಜನರು ವಾಸಿಸುತ್ತಿದ್ದರೆ ನೀವು ಡಬ್ಲ್ಯೂಎಚ್‌ಒದ ಭಾಗವಾಗಿರಲೇಬೇಕು. ನೀವು ಯಾವುದೇ ರೋಗ ಬರದಂತೆ ರೋಗನಿರೋಧಕ ಶಕ್ತಿ ಹೊಂದಿರುವುದಿಲ್ಲ. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ಒಂದು ಪ್ರತಿಕ್ರಿಯೆಯನ್ನು ರೂಪಿಸಲು ನೆರವಾಗುತ್ತದೆ” ಎಂದಿದ್ದಾರೆ. ಮುಂದಿನ ಕೆಲವು ವಾರಗಳಲ್ಲಿ ಡಬ್ಲ್ಯೂಎಚ್‌ಒದ ಕಾರ್ಯನಿರ್ವಹಣಾ ಮಂಡಳಿಯ ಮುಖ್ಯಸ್ಥನಾಗಲಿರುವ ಭಾರತವು ಅಂತಾರಾಷ್ಟ್ರೀಯ ಸಮುದಾಯಕ್ಕೆ ಧನಾತ್ಮಕ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಅವರು ನಿರೀಕ್ಷಿಸಿದ್ದಾರೆ.

ಕೋವಿಡ್ 19 ಅನ್ನು ನಿರ್ವಹಿಸುವ ನಿಟ್ಟಿನಲ್ಲಿ ಆರಂಭದಲ್ಲೇ ದಿಟ್ಟ ಕ್ರಮ ಕೈಗೊಂಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯನ್ನು ಮೆಚ್ಚಿದ ಅವರು, ಕೊರೊನಾದಿಂದ ಹೊರಬಂದು ಸಾಮಾನ್ಯ ಪ್ರಗತಿಯನ್ನು ಸಾಧಿಸಲಿದೆ ಎಂದು ನಿರೀಕ್ಷಿಸಿದ ದೇಶಗಳ ಪೈಕಿ ಭಾರತವೂ ಒಂದಾಗಿದೆ ಮತ್ತು ಇದು ಇಂಡೋ ಪೆಸಿಫಿಕ್‌ನಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ. “ಪ್ರಧಾನಿ ಮೋದಿ ಆರಂಭದಲ್ಲೇ ಕೈಗೊಂಡ ಕ್ರಮಗಳು ಮತ್ತು ಲಾಕ್‌ಡೌನ್‌ಗೆ ಜನರು ನೀಡಿದ ಪ್ರತಿಕ್ರಿಯೆ ಅತ್ಯಂತ ಅಭೂತಪೂರ್ವವಾಗಿತ್ತು. ಸರ್ವಾಧಿಕಾರ ಇರುವ ದೇಶಗಳಲ್ಲಿ ಲಾಕ್‌ಡೌನ್‌ ಅನ್ನು ಜಾರಿಗೊಳಿಸುವುದು ಅತ್ಯಂತ ಸುಲಭ. ಚೀನಾ ಕೆಲವೇ ನಗರಗಳು ಮತ್ತು ಕೆಲವೇ ಪ್ರಾಂತ್ಯಗಳಲ್ಲಿ ಲಾಕ್‌ಡೌನ್‌ ವಿಧಿಸಿತ್ತು. ಆದರೆ ಭಾರತದಲ್ಲಿ ಇಡೀ ದೇಶವೇ ಸ್ವಯಂಪ್ರೇರಿತವಾಗಿ ಲಾಕ್‌ಡೌನ್ ಆಗಿತ್ತು ಎಂದು ಹೈಕಮಿಷನರ್ ಹೇಳಿದ್ದಾರೆ. ಜಾಗತಿಕ ಪೂರೈಕೆ ವಲಯದಲ್ಲಿ ಭಾರತ ಮಹತ್ವದ ಪಾತ್ರ ವಹಿಸುವ ಮಹತ್ವಾಕಾಂಕ್ಷೆಗೆ ಆಸ್ಟ್ರೇಲಿಯಾ ಬೆಂಬಲ ನೀಡುತ್ತದೆ ಮತ್ತು ಜಾಗತಿಕ ಉತ್ಪಾದನೆ ಕೇಂದ್ರವಾಗಿ ಹೊರಹೊಮ್ಮಲು ಇದು ಉತ್ತಮ ಸಮಯ ಎಂದು ಅವರು ಹೇಳಿದ್ದಾರೆ.

ಹಲವು ವಿಶ್ವವಿದ್ಯಾಲಯಗಳು ಕ್ಯಾಂಪಸ್‌ನಿಂದ ಆನ್‌ಲೂನ್‌ಗೆ ಬದಲಾದರೂ ಉಭಯ ದೇಶಗಳ ಸಂಬಂಧ ಸುಧಾರಣೆಯಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸಲಿದೆ ಎಂದು ಆಸ್ಟ್ರೇಲಿಯಾ ಹೈ ಕಮಿಷನರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊರೊನಾ ವೈರಸ್ ಅನ್ನು ನಿರ್ವಹಣೆ ಮಾಡುತ್ತಿರುವ ವಿಧಾನವನ್ನು ಗಮನಿಸಿದರೆ ಲಾಕ್‌ಡೌನ್‌ ನಂತರದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​​​​​‌ಗೆ ಭಾರತ ವಿಮಾನ ಸೇವೆಗಳನ್ನು ಮೊದಲು ಆರಂಭಿಸಲಿದೆ ಎಂದು ಅವರು ಆಶಿಸಿದ್ದಾರೆ. ವಿಶೇಷ ಸಂದರ್ಶನದ ಆಯ್ದ ತುಣುಕು ಇಲ್ಲಿದೆ.

ಪ್ರಶ್ನೆ- ಕೋವಿಡ್ ನಂತರದಲ್ಲಿ ಇಂಡೋ ಪೆಸಿಫಿಕ್‌ನಲ್ಲಿ ಉಂಟಾಗಬಹುದಾದ ಮಹತ್ವದ ಬದಲಾವಣೆಗಳು ಯಾವುವು? ಪಶ್ಚಿಮದಿಂದ ಪೂರ್ವಕ್ಕೆ ಶಕ್ತಿಕೇಂದ್ರ ಬದಲಾಗಲಿದೆಯೇ?

ಉತ್ತರ- ಮಹತ್ವದ ಬದಲಾವಣೆಗಳಲ್ಲಿ ಭಾರತವೂ ಒಳಗೊಂಡಿರಲಿದೆ. ಕೋವಿಡ್ ಹರಡುವುದನ್ನು ನಿರೀಕ್ಷಿಸಿದ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ. ಕಳೆದ ಕೆಲವು ವರ್ಷಗಳಿಂದ ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ವಿಪತ್ತಿನಲ್ಲಿ ಭಾರತ ನಾಯಕತ್ವವನ್ನು ವಹಿಸಿದೆ. ಕೇವಲ ನೆರೆ ದೇಶಗಳಿಗಷ್ಟೇ ಅಲ್ಲ, ಹಲವು ದೇಶಗಳಿಗೆ ಫಾರ್ಮಾಸುಟಿಕಲ್ಸ್‌, ಪಿಪಿಇಗಳು ಹಾಗೂ ಇತರ ಸಾಮಗ್ರಿಗಳನ್ನು ಪ್ರತಿ ವಾರವೂ ಒದಗಿಸುತ್ತಿದೆ. ಭಾರತವು ಮಹತ್ವದ ಪಾತ್ರ ವಹಿಸುತ್ತಿರುವುದು ಈ ವಲಯಕ್ಕೆ ಅತ್ಯಂತ ಉತ್ತಮ ಬೆಳವಣಿಗೆಯಾಗಿದೆ ಮತ್ತು ಇಂಡೋ ಪೆಸಿಫಿಕ್‌ ಕೂಡ ಹಲವು ವಿಧದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಪ್ರಮುಖ ರಕ್ಷಣಾ ವೆಚ್ಚ ಮಾಡುವ ಆರನೇ ಪ್ರಮುಖ ದೇಶವಷ್ಟೇ ಅಲ್ಲ, ಒಂದು ದಶಕದೊಳಗೆ ಆರನೇ ಪ್ರಮುಖ ಜಾಗತಿಕ ಆರ್ಥಿಕತೆಯಾಗಿಯೂ ಇದು ಹೊರಹೊಮ್ಮಲಿದೆ. ಆಸ್ಟ್ರೇಲಿಯಾ ಮತ್ತು ಭಾರತದ ಜೊತೆಗೆ ಬಹುಶಃ ಇಂಡೋನೇಷ್ಯಾ ಈ ಹಿಂದೂ ಮಹಾಸಾಗರ ಮತ್ತು ಆಗ್ನೇಯ ಏಷ್ಯಾದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ನಾನು ಊಹಿಸಿದ್ದೇನೆ.

ಪ್ರಶ್ನೆ- ಅಮೆರಿಕದಲ್ಲಿ ಇದು ಚುನಾವಣೆ ವರ್ಷ. ಜಾಗತಿಕ ನಾಯಕತ್ವದ ವಿಚಾರದಲ್ಲಿ ಅಮೆರಿಕ ಹೆಚ್ಚು ಎಚ್ಚರಿಕೆ ಹೊಂದಿರುತ್ತದೆಯೇ ಅಥವಾ ಸ್ಥಿತಪ್ರಜ್ಞನಾಗಿರುತ್ತದೆಯೇ?

ಕಳೆದ ಕೆಲವು ವರ್ಷಗಳಿಂದ ಅಮೆರಿಕದ ವಿವಿಧ ಆಡಳಿತವನ್ನು ಗಮನಿಸಿದರೆ ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಅಮೆರಿಕವು ಜಾಗತಿಕವಾಗಿ ತೊಡಗಿಸಿಕೊಳ್ಳಲು ಕಡಿಮೆ ಆಸಕ್ತಿ ತೋರುತ್ತಿದೆ. ಮಾರ್ಚ್‌ನಲ್ಲಿ ಬ್ರನೈನಲ್ಲಿ ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ಅವರ ಮಾತನ್ನು ನಾನು ಇಲ್ಲಿ ಉಲ್ಲೇಖಿಸುತ್ತೇನೆ. ರಾಷ್ಟ್ರೀಯತೆ ಮತ್ತು ಪ್ರತಿಸ್ಫರ್ಧೆಯಿಂದಾಗಿ ವಿಶ್ವದ ಅನುಕ್ರಮ ಬದಲಾಗುವ ಬಗ್ಗೆ ಅವರು ಮಾತನಾಡಿದ್ದರು. ಈಗಿನ ಸನ್ನಿವೇಶವನ್ನು ಗಮನಿಸಿದರೆ, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರತ್ಯೇಕವಾದ ಸಂಬಂಧಗಳು ಹೆಚ್ಚು ಹೆಚ್ಚು ಬೆಳೆಯುತ್ತಿರುವುದನ್ನು ನೀವು ನೊಡಬಹುದು.

ಪ್ರಶ್ನೆ- ಕೋವಿಡ್‌ನಿಂದಾಗಿ ಇಡೀ ವಿಶ್ವವು ದೀರ್ಘಾವಧಿಯಲ್ಲಿ ರಾಷ್ಟ್ರೀಯತೆ ಮತ್ತು ರಕ್ಷಣಾತ್ಮಕ ಮನೋಸ್ಥಿತಿಗೆ ಬದಲಾಗುತ್ತದೆ ಎಂದು ನೀವು ನಿರೀಕ್ಷಿಸುತ್ತೀರಾ? ದೇಶಗಳು ಹೆಚ್ಚು ತಮ್ಮ ಬಗ್ಗೆಯೇ ಯೋಚಿಸುವಂತಾಗುತ್ತದೆಯೇ?

ರಾಯಭಾರಿಗಳಿಗೆ ಮುಖ್ಯವಾದ ಸಂಗತಿ ಎಂದರೆ ನ್ಮಮ ಸಮಾಜಕ್ಕೆ ಅನುಕೂಲವಾಗಲು ವಿವಿಧ ಹಂತಗಳಲ್ಲಿ ನಾವು ಹೊಂದಿರುವ ನಿಯಮಗಳು ಮತ್ತು ರೀತಿ ನೀತಿಗಳಾಗಿರುತ್ತವೆ. ನಾವು ನೌಕಾವಲಯವನ್ನು ಗಮನಿಸಿದರೆ, ಯುಎನ್‌ಸಿಎಲ್‌ಒಎಸ್ (ವಿಶ್ವಸಂಸ್ಥೆಯ ಸಮುದ್ರ ಕಾನೂನು ನಿಬಂಧನೆ) ಅಡಿಯಲ್ಲಿ ರೂಪಿಸಿದ ನಿಯಮಗಳು ಮತ್ತು ನೀತಿಗಳನ್ನು ಆಧರಿಸಿ ಹಡಗು ಸಂಚಾರ ನಡೆಯುತ್ತದೆ. ಯಾವುದೇ ಒಂದು ದೇಶವು ಸ್ಫರ್ಧಾತ್ಮಕ ಅನುಕೂಲ ಅಥವಾ ರಾಷ್ಟ್ರೀಯತೆಯ ಉದ್ದೇಶಕ್ಕೆ ಇದನ್ನು ಅಡ್ಡಿಪಡಿಸಿದರೆ, ಆಗ ವಿಶ್ವ ಸಮಸ್ಯೆಗೆ ಸಿಲುಕುತ್ತದೆ. ನಾವು ಈಗ ಗಮನಿಸುತ್ತಿರುವುದು ಮರುಸಮತೋಲನ ಮತ್ತು ಬದಲಾವಣೆಯನ್ನು ಮಾತ್ರ. ಮುಂದಿನ ಕೆಲವು ವರ್ಷಗಳವರೆಗೂ ಸಹಾಯವಾಗಬಹುದಾದ ಅನುಕೂಲಗಳ ಸಹಿತ ಎರಡನೇ ವಿಶ್ವ ಯುದ್ಧದಿಂದ ನಾವು ಹೊರಕ್ಕೆ ಬಂದಿದ್ದೇವೆ. ಆಗ ನಾವು ಕೈಗೊಂಡ ಕೆಲವು ನಿಯಮಗಳಲ್ಲಿ ಬದಲಾವಣೆ ಉಂಟಾಗಬಹುದು.

ಪ್ರಶ್ನೆ- ಕೊರೊನಾವೈರಸ್‌ನ ಮೂಲ ಹುಡುಕಲು ತನಿಖೆ ನಡೆಸುವಂತೆ ಆಸ್ಟ್ರೇಲಿಯಾ ಒತ್ತಡ ಹಾಕುವುದನ್ನು ಮುಂದುವರಿಸಿದರೆ ವೈನ್‌ ಮತ್ತು ದನದ ಮಾಂಸದ ಆಮದು ಮಾಡಿಕೊಳ್ಳುವುದನ್ನು ಬೀಜಿಂಗ್ ನಿಲ್ಲಿಸಲಿದೆ ಎಂದು ಆಸ್ಟ್ರೇಲಿಯಾದಲ್ಲಿರುವ ಚೀನಾ ರಾಯಭಾರಿ ಎಚ್ಚರಿಕೆ ನೀಡಿದ್ದಾರೆ. ವ್ಯಾಪಾರ ನಿರ್ಬಂಧ ಹೇರುವುದಾಗಿ ನ್ಯೂಜಿಲ್ಯಾಂಡ್​​​​​‌ಗೂ ಬೆದರಿಕೆ ಒಡ್ಡಲು ಚೀನಾ ಪ್ರಯತ್ನಿಸಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಭಾರತದ ರೀತಿಯಲ್ಲೇ ಆಸ್ಟ್ರೇಲಿಯಾ ಕೂಡ ಡಬ್ಲ್ಯೂಎಚ್‌ಒ ಸ್ನೇಹಿಯಾಗಿದೆ. ವಿಶೇಷವಾಗಿ ಪೆಸಿಫಿಕ್‌ನಲ್ಲಿ ಮತ್ತು ನೆರೆ ದೇಶಗಳಲ್ಲಿ ಅಪಾರ ಶ್ರಮ ವಹಿಸಿರುವುದನ್ನು ನಾವು ಗಮನಿಸಿದ್ದೇವೆ. ಈ ಸಾಂಕ್ರಾಮಿಕ ರೋಗದ ವ್ಯಾಪ್ತಿಯನ್ನು ಗಮನಿಸಿದರೆ ನಾವು ಇದನ್ನು ಮತ್ತು ಮುಂದಿನ ಸಾಂಕ್ರಾಮಿಕ ರೋಗವನ್ನು ತಡೆಯಲು ಸಿದ್ಧವಾಗಿದ್ದೇವೆಯೇ ಎಂಬುದನ್ನು ವಿಶ್ಲೇಷಿಸಿಕೊಳ್ಳಬೇಕಿದೆ. ಕೋವಿಡ್‌ ಪರಿಸ್ಥಿತಿ ಸುಧಾರಿಸಿದ ನಂತರದಲ್ಲಿ ಸೂಕ್ತ ಸಮಯದಲ್ಲಿ ಸ್ವತಂತ್ರ ಅಂತಾರಾಷ್ಟ್ರೀಯ ತನಿಖೆ ಮಾಡಲು ಆಸ್ಟ್ರೇಲಿಯಾ ಬೆಂಬಲ ನೀಡಿದೆ. ರೋಗದ ಹರಡುವಿಕೆಯನ್ನು ವಿಶ್ಲೇಷಿಸುವುದು, ಇದಕ್ಕೆ ದೇಶಗಳು ತೆಗೆದುಕೊಂಡ ವಿವಿಧ ಕ್ರಮಗಳು, ಈ ಅನುಸಂಧಾನಗಳಿಗೆ ಅನುಗುಣವಾಗಿ ಮಾಹಿತಿಯನ್ನು ಹೇಗೆ ಹಂಚಿಕೊಳ್ಳಬೇಕು ಮತ್ತು ಜಾಗತಿಕ ಪ್ರತಿಕ್ರಿಯೆಗೆ ಡಬ್ಲ್ಯೂಎಚ್‌ಒ ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ಈ ತನಿಖೆ ವಿಶ್ಲೇಷಿಸಬೇಕು. ಇದು ಯಾವುದೇ ನಿರ್ದಿಷ್ಟ ದೇಶ ಅಥವಾ ಸಂಸ್ಥೆಗೆ ಸಂಬಂಧಿಸಿದ್ದಲ್ಲ. ಇದು ಟೀಕೆಯ ಸಮಯವೂ ಅಲ್ಲ. ಆದರೆ, ಇದು ಪಾರದರ್ಶಕತೆ ಮತ್ತು ಮುಕ್ತವಾಗಿ ಚಿಂತಿಸುವ ಕಾಲ. ಇದರಿಂದ ಮುಂದಿನ ಬಾರಿ ವಿಶ್ವ ಇದೇ ರೀತಿಯ ಸನ್ನಿವೇಶವನ್ನು ಎದುರಿಸಿದರೆ ನಿಯಂತ್ರಿಸಲು ಸಹಾಯವಾಗಲಿದೆ.

ಪ್ರಶ್ನೆ- ತನಿಖೆಯ ಆಗ್ರಹವು ಯಾವುದೇ ನಿರ್ದಿಷ್ಟ ದೇಶವನ್ನು ಉದ್ದೇಶಿಸಿಲ್ಲ ಎಂದಾದರೆ, ನಿರ್ದಿಷ್ಟವಾಗಿ ಚೀನಾದ ಮೇಲೆ ಕತ್ತಿ ಮಸೆಯಲಾಗಿದೆ ಎಂದು ರಾಯಭಾರಿ ಯಾಕೆ ಪ್ರತಿಕ್ರಿಯಿಸಿದರು. ಅಷ್ಟೇ ಅಲ್ಲ, ಅವರು ಪ್ರತೀಕಾರದ ಮಾತನ್ನೂ ಆಡಿದರು. ಇಷ್ಟಾದ ಮೇಲೂ ಸ್ವತಂತ್ರ ತನಿಖೆಗೆ ಆಸ್ಟ್ರೇಲಿಯಾ ಆಗ್ರಹಿಸಲಿದೆಯೇ?

ಜಿ20 ಸಮ್ಮೇಳನವನ್ನು ವರ್ಚುವಲ್ ಆಗಿ ನಡೆಸಲು ಪ್ರಧಾನಿ ಮೋದಿ ಕರೆ ನೀಡಿದಾಗ ಅವರು ಪ್ರಸ್ತಾಪಿಸಿದ ಒಂದು ವಿಷಯವು ಡಬ್ಲ್ಯೂಎಚ್‌ಒ ಅನ್ನು ಪುನಃಶ್ಚೇತನಗೊಳಿಸುವುದೂ ಆಗಿತ್ತು. ಸಾವಿರಾರು ಜನರನ್ನು ಬಲಿತೆಗೆದುಕೊಂಡು ಇಡೀ ವಿಶ್ವದ ಆರ್ಥಿಕತೆಯನ್ನೇ ಬುಡಮೇಲು ಮಾಡಿದ ಈ ಸಾಂಕ್ರಾಮಿಕ ರೋಗದ ಪರಿಸ್ಥಿತಿ ಮುಗಿದ ನಂತರದಲ್ಲಿ ಮುಂದಿನ ಬಾರಿ ಇದೇ ರೀತಿಯ ಪರಿಸ್ಥಿತಿ ಎದುರಾದಾಗ ನಾವು ಅದನ್ನು ಎದುರಿಸಲು ನಾವು ಸಿದ್ಧವಾಗಿರಬೇಕು ಮತ್ತು ಇದೇ ರೀತಿಯ ಪರಿಣಾಮ ಎದುರಿಸಬಾರದು ಎಂಬ ಬಗ್ಗೆ ಹಲವು ಧ್ವನಿಗಳು ಆ ಸಮ್ಮೇಳನದಲ್ಲಿ ಕೇಳಿಬಂದಿದ್ದವು. ಚೀನಾ ಯಾಕೆ ಈ ರೀತಿ ಪ್ರತಿಕ್ರಿಯಿಸಿದೆ ಎಂದು ನೀವು ತಿಳಿದುಕೊಳ್ಳಬೇಕಾದರೆ, ಬಹುಶಃ ನೀವು ಭಾರತದಲ್ಲಿರುವ ಚೀನಾದ ರಾಯಭಾರಿಯನ್ನು ಈ ಬಗ್ಗೆ ಕೇಳಬಹುದು. ವ್ಯಾಪಾರದಲ್ಲಾಗಲೀ, ರಾಜಕೀಯದಲ್ಲಾಗಲೀ ಅಥವಾ ವೈಯಕ್ತಿಕ ಜೀವನದಲ್ಲೇ ಆಗಲಿ, ಒಂದು ವಿಪತ್ತು ಮುಗದಿ ನಂತರ ನಾವು ಸುಮ್ಮನೆ ಕುಳಿತು ಇದನ್ನು ಹೇಗೆ ಇನ್ನೂ ಚೆನ್ನಾಗಿ ನಿರ್ವಹಿಸಬಹುದಿತ್ತು ಎಂದು ಯೋಚಿಸುತ್ತೇವೆ. ಇದು ಯಾಔಉದೇ ಒಂದು ದೇಶಕ್ಕೆ ಸಂಬಂಧಿಸಿದ್ದಲ್ಲ. ವಿಶ್ವದ ಬಹುತೇಕ ಕಡೆ ಇದು ತನ್ನ ಕಬಂಧ ಬಾಹುವನ್ನು ಚಾಚಿದೆ. ಭಾರತ ಉತ್ತಮವಾಗಿ ನಿರ್ವಹಿಸುತ್ತಿದೆ. ಆಸ್ಟ್ರೇಲಿಯಾ ಕೂಡ ಉತ್ತಮವಾಗಿ ನಿರ್ವಹಿಸುತ್ತಿದೆ. ಆದರೆ ಕೆಲವು ದೊಡ್ಡ, ಶ್ರೀಮಂತ ಮತ್ತು ಅಭಿವೃದ್ಧಗೊಳ್ಳುತ್ತಿರುವ ದೇಶಗಳು, ಉತ್ತಮ ಆರೋಗ್ಯ ವ್ಯವಸ್ಥೆಯನ್ನು ಹೊಂದಿದ್ದೂ ವಿಫಲವಾಗಿವೆ. ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗವನ್ನು ತಡೆಯಲು ಮತ್ತು ಮುನ್ನೆಚ್ಚರಿಕೆ ವಹಿಸಲು ನಾವು ಈ ಪಾಠಗಳನ್ನು ಕಲಿಯಬಹುದು.

ಪ್ರಶ್ನೆ- 16 ಸಂಸ್ಥೆಗಳನ್ನು ಒಳಗೊಂಡ ಅಮೆರಿಕದ ಗುಪ್ತಚರ ಸಮುದಾಯವು ಕೋವಿಡ್ 19 ವೈರಸ್ “ಮಾನವ ನಿರ್ಮಿತವಲ್ಲ ಅಥವಾ ವಂಶವಾಹಿಗಳನ್ನು ಬದಲಿಸಲಿಲ್ಲ” ಎಂದು ಹೇಳಿದೆ. ಆದರೆ, ಪ್ರಾಣಿಗಳಿಂದ ಸೋಂಕು ಹರಡಿದೆಯೇ ಅಥವಾ ಲ್ಯಾಬ್‌ನಲ್ಲಿ ನಡೆದ ಅಪಘಾತದಿಂದ ಸಂಭವಿಸಿದೆಯೇ ಎಂದು ತನಿಖೆ ನಡೆಸುವುದನ್ನು ಮುಂದುವರಿಸುತ್ತೇವೆ ಎಂದು ಅದು ಹೇಳಿದೆ. ಈ ಬಗ್ಗೆ ನೀವು ಏನು ಹೇಳುತ್ತೀರಿ?

ನನ್ನ ಪ್ರಕಾರ ಇಂತಹ ಕೆಲಸವನ್ನು ವಿಶ್ವಸಂಸ್ಥೆಯಂತಹ ಸಂಸ್ಥೆಗಳು ನಡೆಸಬೇಕು. ಬದಲಿಗೆ ಯಾವುದೇ ನಿರ್ದಿಷ್ಟ ದೇಶ ಮಾಡಬಾರದು. ಹಲವು ದೇಶಗಳಿಗೆ ಹರಡಿದ ಸಾಂಕ್ರಾಮಿಕ ರೋಗದ ಬಗ್ಗೆ ಸೂಕ್ತ ಸಂಸ್ಥೆಯಿಂದ ಅಂತಾರಾಷ್ಟ್ರೀಯ ತನಿಖೆಯನ್ನು ನಡೆಸಿದರೆ, ಆಗ ಆ ತನಿಖೆ ಮುಕ್ತ, ಪಾರದರ್ಶಕ ಮತ್ತು ನಿಖರವಾಗಿದೆ ಎಂದು ಭರವಸೆ ಇಡಬಹುದು. ಅಮೆರಿಕ ಸುಳ್ಳು ಹೇಳುತ್ತದೆ ಎಂದು ನಾನು ಹೇಳಲಾರೆ. ಆದರೆ, ಆಸ್ಟ್ರೇಲಿಯಾ, ಭಾರತ ಅಥವಾ ಅಮೆರಿಕ ಪ್ರತ್ಯೇಕವಾಗಿ ತನಿಖೆ ನಡೆಸಿದರೆ, ಯಾವುದೋ ಅಜೆಂಡಾವನ್ನು ಸಾಬೀತು ಮಾಡಲು ಹೊರಟಿದ್ದೀರಿ ಎಂಬ ಆರೋಪ ಕೇಳಿಬರಬಹುದು. ಹೀಗಾಗಿ, ಸೂಕ್ತ ಅನುಮೋದಿತ ಅಂತಾರಾಷ್ಟ್ರೀಯ ತನಿಖೆಯನ್ನು ಸೂಕ್ತ ಸಮಯದಲ್ಲಿ ಮಾಡಬೇಕಿದೆ.

ಪ್ರಶ್ನೆ- ಡಬ್ಲ್ಯೂಎಚ್‌ಒಗೆ ತೈವಾನ್‌ ವಾಪಸಾತಿಯ ಕುರಿತು ಆಸ್ಟ್ರೇಲಿಯಾದ ಆಗ್ರಹದ ಬಗ್ಗೆ ನೀವು ಏನು ಹೇಳುತ್ತೀರಿ?

ನಾವು ಈಗ ಗಮನಿಸಿದಂತೆ ಸಾಂಕ್ರಾಮಿಕ ರೋಗವು ಯಾವುದೇ ರಾಷ್ಟ್ರೀಯ ಗಡಿಗೆ ಸೀಮಿತವಾಗಿಲ್ಲ. ಆಸ್ಟ್ರೇಲಿಯಾದಂತಹ ದ್ವೀಪ ರಾಷ್ಟ್ರಕ್ಕೂ ಇದು ಹರಡಿದೆ. ವಿಶ್ವದ ಯಾವುದೇ ದೇಶವೂ ಇಂತಹ ಸಾಂಕ್ರಾಮಿಕ ರೋಗವು ತಮ್ಮ ದೇಶದ ಒಳಗೆ ಬರುವುದನ್ನು ತಡೆಯಲಾರವು. ಹೀಗಾಗಿ ಸಾರ್ಸ್‌, ಎಬೋಲಾ ಮತ್ತು ಇತರ ಎಲ್ಲ ಸಾಂಕ್ರಾಮಿಕ ರೋಗಗಳ ಹಿನ್ನೆಲೆಯಲ್ಲಿ ವಿಶ್ವದ ಎಲ್ಲ ದೇಶಗಳನ್ನೂ ಡಬ್ಲ್ಯೂಎಚ್‌ಒ ಪ್ರತಿನಿಧಿಸಬೇಕು. ತೈವಾನ್‌ ಆಗಲೀ ಅಥವಾ ಭಾರತವೇ ಆಗಲಿ. ಒಂದು ದೇಶವಾಗಿದ್ದು,ಯಾವುದೋ ಒಂದು ರೀತಿಯ ಸರ್ಕಾರ ಹೊಂದಿದ್ದರೆ, ನಮ್ಮ ಗಡಿಯೊಳಗೆ ಜನರು ವಾಸಿಸುತ್ತಿದ್ದಾರೆ ಎಂದಾದರೆ, ಆಗ ನೀವು ಡಬ್ಲ್ಯೂಎಚ್‌ಒದ ಭಾಗವಾಗಿರಬೇಕು. ಯಾಕೆಂದರೆ ಯಾವುದೇ ದೇಶವೂ ರೋಗವನ್ನು ಬರದಂತೆ ತಡೆಯಲಾಗದು. ವಿಶ್ವಸಂಸ್ಥೆಯು ಇಂತಹ ಸಾಂಕ್ರಾಮಿಕ ರೋಗವನ್ನು ಎದುರಿಸುವುದಕ್ಕೆ ಸಹಾಯ ಮಾಡಲಿದೆ.

ಪ್ರಶ್ನೆ- ಆದರೆ ಡಬ್ಲ್ಯೂಎಚ್‌ಒ ನಾಯಕತ್ವದ ಬಗ್ಗೆ ಮತ್ತು ಚೀನಾದ ಕಡೆಗೆ ಡಬ್ಲ್ಯೂಎಚ್‌ಒ ಒಲವು ತೋರಿದ ಬಗ್ಗೆ ಪ್ರಶ್ನೆಗಳು ಎದ್ದಿವೆ. ವಿಶ್ವಸಂಸ್ಥೆಯ ಹಲವು ಮಂಡಳಿಗಳಲ್ಲಿ ಇಂದು ಚೀನಾ ಮೂಲದವರು ನಾಯಕತ್ವ ವಹಿಸಿದ್ದಾರೆ. ವಿಶ್ವಸಂಸ್ಥೆಗೆ ತೈವಾನ್‌ ಮರಳುವುದು ಸಾಧ್ಯ ಎಂದು ನಿಮಗೆ ಅನಿಸುತ್ತದೆಯೇ?

ಡಬ್ಲ್ಯೂಎಚ್‌ಒಗೆ ಆಸ್ಟ್ರೇಲಿಯಾ ಸ್ನೇಹಿತ. ನಾವು ಅದಕ್ಕೆ ಹಣ ನೀಡುತ್ತೇವೆ. ನಾವು ಹಣ ನೀಡುವುದನ್ನು ಮುಂದುವರಿಸುತ್ತೇವೆ. ಯಾಕೆಂದರೆ, ನಮ್ಮ ಪ್ರಾಂತ್ಯದಲ್ಲಿ ವಿಶ್ವ ಆರೋಗ್ಯಸಂಸ್ಥೆ ಮಾಡಿದ ಕೆಲಸಗಳನ್ನು ನಾವು ನೋಡಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆಯ ಬಗ್ಗೆ ನನ್ನ ಗೌರವ ಹೆಚ್ಚುತ್ತಿದೆ. ಯಾಕೆಂದರೆ, ಈ ವರ್ಷದ ಕೊನೆಯಲ್ಲಿ ಭಾರತವು ಈ ಸಂಸ್ಥೆಯ ನಾಯಕತ್ವ ವಹಿಸಲಿದೆ. ಹಲವು ಸಾಂಕ್ರಾಮಿಕ ರೋಗಗಳನ್ನು ತನ್ನ ಇತಿಹಾಸದಾದ್ಯಂತ ನಿರ್ವಹಿಸಿದ ಹೆಗ್ಗಳಿಕೆ ಹೊಂದಿರುವ ಭಾರತದಂತಹ ದೇಶವು ಡಬ್ಲ್ಯೂಎಚ್‌ಒದ ಕೌನ್ಸಿಲ್‌ನ ನೇತೃತ್ವ ವಹಿಸುತ್ತಿರುವುದು ನಮ್ಮೆಲ್ಲರಿಗೂ ಉತ್ತಮ ಸಂಗತಿಯಾಗಿದೆ.

ಪ್ರಶ್ನೆ- ಆದರೆ ದೇಶಗಳು ತಮ್ಮ ಅಧಿಕಾರವನ್ನು ಬಲವಂತದಿಂದ ಪ್ರಯೋಗಿಸಲು ನಿರ್ಧರಿಸಿರುವುದರಿಂದ, ಸಂಸ್ಥೆಯು ಸಮತೂಕದ ನಿರ್ಣಯವನ್ನು ಕೈಗೊಳ್ಳಲು ವಿಫಲವಾದರೆ ಅದರ ಪರಿಣಾಮ ಏನಾಗಬಹುದು? ಪರ್ಯಾಯ ತಾಂತ್ರಿಕತೆಯೊಂದು ಹುಟ್ಟಿಕೊಳ್ಳುವ ಸಾಧ್ಯತೆ ಇದೆಯೇ?

ವಿಶ್ವಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯಂತಹ ಸಂಘಟನೆಗಳಲ್ಲಿ ಈಗ ಇರುವ ನೀತಿ ನಿಯಮಗಳನ್ನು ಸಶಕ್ತಗೊಳಿಸುವ ಪ್ರಯತ್ನವನ್ನು ನಾವು ಮಾಡಬೇಕಿದೆ. ನಾವು ನಮ್ಮ ಪ್ರಾಂತ್ಯ ಮತ್ತು ದಕ್ಷಿಣ ಚೀನಾ ಸಮುದ್ರವನ್ನು ಪರಿಗಣಿಸಿದರೆ, ಅಲ್ಲಿ ಕೆಲವು ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನಗಳನ್ನು ಕಾಣಬಹುದು. ಜಲ ಮಾರ್ಗದ ಜೊತೆಗೆ ಜಲಮಾರ್ಗವನ್ನು ನಿಯಂತ್ರಿಸುವ ನೀತಿಗಳ ಬಗ್ಗೆಯೂ ಆಸಕ್ತಿ ಹೊಂದಿರುವ ದೇಶವಾಗಿ, ಈ ವಲಯದಲ್ಲಿ ನಾವು ಕಾಣುತ್ತಿರುವ ಸೇನಾ ಕ್ರಮಗಳ ಬಗ್ಗೆ ಆತಂಕ ಹೊಂದಿದ್ದೇವೆ. ಇತ್ತೀಚಿನ ದಿನಗಳಲ್ಲಿ ವಿಯೆಟ್ನಾಮ್ ಬೋಟ್ ಮುಳುಗಿತು. ಈ ವಲಯದಲ್ಲಿ ಎರಡು ದೇಶಗಳ ತೈಲ ಮತ್ತು ನೈಸರ್ಗಿಕ ಅನಿಲ ಉತ್ಖನನ ಪ್ರಕ್ರಿಯೆಗೆ ಅಡ್ಡಿ ಉಂಟಾಯಿತು. ಇದನ್ನು ನಾವು ಒಪ್ಪಲಾಗದು. ಅದರಲ್ಲೂ ಯುಎನ್‌ಸಿಎಲ್‌ಒಎಸ್‌ ಇದ್ದು, ನಿರ್ದಿಷ್ಟ ನೀತಿ ನಿಯಮಗಳನ್ನು ಇದು ರೂಪಿಸಿದ್ದು, ದೇಶಗಳು ಇದಕ್ಕೆ ಬದ್ಧವಾಗಿರಬೇಕು. ಒಂದು ದೇಶವು ಅದನ್ನು ಸಮ್ಮತಿಸದೇ ಇದ್ದಾಗ ಅದನ್ನು ನಾವು ಒಪ್ಪಲಾಗದು. ಇಂತಹ ಸಮಸ್ಯೆಯನ್ನು ಪರಿಹರಿಸುವ ಸೂಕ್ತ ವೇದಿಕೆ ವಿಶ್ವಸಂಸ್ಥೆಯೇ ಆಗಿರಬೇಕು ಎಂದು ನಾನು ಭಾವಿಸಿದ್ದೇನೆ.

ಪ್ರಶ್ನೆ- ಜರ್ಮನಿ, ಆಸ್ಟ್ರೇಲಿಯಾ, ಜಪಾನ್, ಭಾರತದಂತಹ ದೇಶಗಳು ಇನ್ನಷ್ಟು ಅಧಿಕಾರಯುತ ಮತ್ತು ಸ್ಪಷ್ಟ ನಿರ್ದಿಷ್ಟ ಪಾತ್ರವನ್ನು ವಹಿಸುವುದನ್ನು ಮತ್ತು ಹೆಚ್ಚು ಅನುದಾನ ನೀಡುವುದನ್ನು ನೀವು ನಿರೀಕ್ಷಿಸಿದ್ದೀರಾ?

ಭಾರತವು ಹಿಂದೂ ಮಹಾಸಾಗರದಲ್ಲಿ ಮಹತ್ವದ ಪಾತ್ರ ವಹಿಸಿದಂತೆಯೇ ಹಲವು ದೇಶಗಳು ಈ ಬೆಳವಣಿಗೆಯನ್ನು ಗಮನಿಸುತ್ತವೆ. ನಾವು ಕೂಡ ಪೆಸಿಫಿಕ್‌ನಲ್ಲಿ ಮಹತ್ವದ ಪಾತ್ರ ವಹಿಸುತ್ತೇವೆ. ಈ ಸನ್ನಿವೇಶದಲ್ಲಿ ನಾವು ಭಾರತ, ಜಪಾನ್‌, ಕೊರಿಯಾ, ನ್ಯೂಜಿಲೆಂಡ್‌ ಮತ್ತು ಅಮೆರಿಕದ ಮಧ್ಯೆ ಪ್ರತಿ ವಾರ ಇಂಡೋ ಪೆಸಿಫಿಕ್ ಸಹಕಾರ ಸಂವಹನವನ್ನು ನಡೆಸುತ್ತಿದ್ದೇವೆ. ಕೋವಿಡ್ 19 ಕ್ಕೆ ನಮ್ಮ ದೇಶಗಳ ಅನುಸಂಧಾನದ ಬಗ್ಗೆ ವರದಿ ಮಾಡುತ್ತಿದ್ದೇವೆ ಮತ್ತು ಕೋವಿಡ್ ನಂತರದ ಸನ್ನಿವೇಶದ ಬಗ್ಗೆಯೂ ಚರ್ಚೆ ನಡೆಸುತ್ತಿದ್ದೇವೆ. ಕೋವಿಡ್ ನಂತರದಲ್ಲಿ ಇಂಡೋ ಪೆಸಿಫಿಕ್ ಮತ್ತು ವಿಶ್ವದ ಇತರ ಭಾಗಗಳೊಂದಿಗೆ ಸಂಬಂಧವು ಹೆಚ್ಚು ಮಹತ್ವ ಪಡೆಯಲಿದೆ. ಇಂಡೋ ಪೆಸಿಫಿಕ್ ಸಹಜ ಮತ್ತು ಸಾಂಪ್ರದಾಯಿಕ ವಿಧಾನದಲ್ಲಿ ವಹಿಸುವ ಪಾತ್ರದಲ್ಲಿ ಹಲವು ದೇಶಗಳು ಒಳಗೊಳ್ಳಳಿವೆ ಮತ್ತು ಅಂತಾರಾಷ್ಟ್ರೀಯ ಸಮುದಾಯದ ನೀತಿಗಳು ಮುಕ್ತ ಮತ್ತು ಪಾರದರ್ಶಕ ಸಮುದಾಯಕ್ಕೆ ಬೆಂಬಲ ನೀಡಲಿದೆ. ಇದು ಸರ್ವಾಧಿಕಾರ ಮತ್ತು ಕ್ಷುದ್ರ ರಾಜಕೀಯಕ್ಕೆ ವಿದಾಯ ಹೇಳಲಿದೆ.

ಪ್ರಶ್ನೆ- ವಿದೇಶಾಂಗ ವ್ಯವಹಾರಗಳ ಸಚಿವರ ಮಟ್ಟದಲ್ಲಿ ನಡೆಯುತ್ತಿರುವ ಕ್ವಾಡ್ರಿಲಾಟರಲ್‌ ಸೆಕ್ಯುರಿಟಿ ಡೈಲಾಗ್‌ನ ಭವಿಷ್ಯ ಹೇಗಿರಬಹುದು? ಹಿಂದೂ ಮಹಾಸಾಗರದ ವ್ಯಾಪ್ತಿಯಲ್ಲಿರುವ ಫ್ರಾನ್ಸ್‌ನಂತಹ ದೇಶಗಳನ್ನೂ ಸೇರಿಸಿಕೊಳ್ಳುವ ಸಾಧ್ಯತೆ ಇದೆಯೇ?

ಸೈಬರ್ ಭಯೋತ್ಪಾದನೆ, ಭಯೋತ್ಪಾದನೆ ತಡೆ, ಸೈಬರ್ ಮತ್ತು ಜಲಗಡಿ ಭದ್ರತೆಯಂತಹ ವಿಚಾರದಲ್ಲಿ ವಿಷಯಗಳನ್ನು ಹಂಚಿಕೊಳ್ಳಲು ಸಮಾನ ಮನಸ್ಕ ಪ್ರಜಾಪ್ರಭುತ್ವ ದೇಶಗಳಿಗೆ ಕ್ವಾಡ್‌ ಉತ್ತಮ ವೇದಿಕೆ ಎಂಬುದಾಗಿ ಸಾಬೀತಾಗಿದೆ. ಕಳೆದ ವರ್ಷ ಸಚಿವರ ಮಟ್ಟಕ್ಕೆ ಕ್ವಾಡ್‌ ಏರಿಕೆ ಕಂಡಿದ್ದು, ಕ್ವಾಡ್‌ನ ಮೌಲ್ಯ ಹೆಚ್ಚಳವಾಗುತ್ತಿರುವುದರ ಸಂಕೇತವಾಗಿದೆ.

ಪ್ರಶ್ನೆ- ಭಾರತದಲ್ಲಿ ದೇಶಾದ್ಯಂತ ವಿಧಿಸಿರುವ ಲಾಕ್‌ಡೌನ್‌ ಬಗ್ಗೆ ಹೇಳಿ

ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಅಭೂತಪೂರ್ವ ಕೆಲಸ ಮಾಡಿದೆ. ಫೆಬ್ರವರಿಯಲ್ಲಿ ನಾನು ಇಲ್ಲಿಗೆ ಆಗಮಿಸಿದಾಗ ರೋಗದ ಮತ್ತು ಭಾರತದಲ್ಲಿ ಇದರ ಪರಿಣಾಮದ ಬಗ್ಗೆ ವ್ಯತಿರಿಕ್ತ ಊಹೆಗಳನ್ನು ಮಾಡಲಾಗುತ್ತಿತ್ತು. ಕಳೆದ ವಾರ, ಪ್ರಮುಖ ಆರ್ಥಿಕ ತಜ್ಞ ಶಮಿಕಾ ರವಿ ಹೇಳಿದಂತೆ, ಪ್ರಧಾನಿ ಮೋದಿ ದೇಶಾದ್ಯಂತ ಲಾಕ್‌ಡೌನ್‌ ಹೇರದೇ ಇದ್ದರೆ, ಭಾರತದಲ್ಲಿ ಕೋವಿಡ್ ಪ್ರಕರಣಗಳು 850,000 ಕ್ಕೆ ಏರಿಕೆಯಾಗುತ್ತಿತ್ತು. ಈಗ ಇದು 33 ಸಾವಿರಕ್ಕೆ ಮಿತಿಗೊಂಡಿದೆ.

ಪ್ರಧಾನಿ ಮೋದಿ ಕೈಗೊಂಡ ಕ್ರಮಗಳು ಮತ್ತು ಈ ಅಭೂತಪೂರ್ವ ರಾಷ್ಟ್ರೀಯ ಲಾಕ್‌ಡೌನ್‌ಗೆ ಪ್ರಜಾಪ್ರಭುತ್ವದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅತ್ಯಂತ ವಿಶಿಷ್ಟವಾಗಿದೆ. ಸರ್ವಾಧಿಕಾರ ಇರುವ ದೇಶಗಳಲ್ಲಿ ಲಾಕ್‌ಡೌನ್‌ಗಳನ್ನು ಜಾರಿ ಮಾಡುವುದು ಸುಲಭ. ಚೀನಾ ಕೆಲವು ಪ್ರಾಂತ್ಯಗಳು ಮತ್ತು ಕೆಲವು ನಗರಗಳನ್ನು ಲಾಕ್‌ಡೌನ್ ಮಾಡಿರುವುದನ್ನು ನಾವು ಗಮನಿಸಿದ್ದೇವೆ. ಆದರೆ, ಅತಿದೊಡ್ಡ ಪ್ರಜಾಪ್ರಭುತ್ವದ ಜನರೇ ಸ್ವಯಂಪ್ರೇರಿತವಾಗಿ ಲಾಕ್‌ಡೌನ್‌ ಮಾಡಿಕೊಂಡಿದ್ದಾರೆ. ಕರ್ಫ್ಯೂ ವಿಧಿಸಿದಾಗ ಪ್ರಧಾನಿ ಮೋದಿಗೆ ಜನರು ಬೆಂಬಲ ವ್ಯಕ್ತಪಡಿಸಿದ್ದರು. ಇದರ ಪರಿಣಾಮ ಅತ್ಯಂತ ಅದ್ಭುತವಾಗಿತ್ತು.

ಪ್ರಶ್ನೆ- ಆರ್‌ಸಿಇಪಿ ಭವಿಷ್ಯವೇನು ? ಆರ್‌ಸಿಇಪಿಗೆ ಭಾರತ ಸಹಿ ಮಾಡದೇ ಇರುವುದು ಉತ್ತಮವೇ ಆಗಿದೆ ಎಂದು ಹಲವು ಹೇಳುತ್ತಿದ್ದಾರೆ.

ಆರ್‌ಸಿಇಪಿಗೆ ಭಾರತ ಯಾವಾಗ ಬೇಕಾದರೂ ಸೇರಬಹುದು. ಹಿಂದೆಂದಿಗಿಂತ ಆರ್‌ಸಿಇಪಿಗೆ ಸೇರಲು ಈಗಿನ ಸನ್ನಿವೇಶ ಹೆಚ್ಚು ಸೂಕ್ತವಾಗಿದೆ ಎಂಬ ಮಾತೂ ಇದೆ. ಜಾಗತಿಕ ಪೂರೈಕೆ ವಲಯದಲ್ಲಿ ಭಾರತ ದೊಡ್ಡ ಮಟ್ಟದ ಪಾತ್ರ ವಹಿಸುವುದನ್ನು ಆಸ್ಟ್ರೇಲಿಯಾ ಬೆಂಬಲಿಸುತ್ತದೆ. ಈಗ ಆರ್‌ಸಿಇಪಿಗೆ ಭಾರತ ಸೇರಲು ಬಯಸಿದರೆ, ಜಾಗತಿಕ ಉತ್ಪಾದನೆ ಕೇಂದ್ರವಾಗಿ ಹೊರಹೊಮ್ಮಲು ಭಾರತ ಉತ್ತಮ ಸ್ಥಳ ಎಂಬ ಸಂಕೇತವನ್ನು ವಿಶ್ವಕ್ಕೆ ನೀಡುತ್ತದೆ. ಮೇಕ್ ಇನ್ ಇಂಡಿಯಾ ಉಪಕ್ರಮವೂ ಸಾಧಿಸಿದಂತಾಗುತ್ತದೆ. ಭಾರತದಲ್ಲಿ ಈ ವಿಪತ್ತಿನ ಸನ್ನಿವೇಶದಲ್ಲಿ ಒಂದು ಉತ್ತಮ ಬೆಳವಣಿಗೆಯಾಗುತ್ತದೆ. ಆದರೆ ತನ್ನ ಹಿತಾಸಕ್ತಿಗೆ ಅನುಗುಣವಾಗಿ ಆರ್‌ಸಿಇಪಿಗೆ ಸೇರುವುದು ಅಥವಾ ಸೇರದೇ ಇರುವುದನ್ನು ನಿರ್ಧರಿಸುವ ಆಯ್ಕೆ ಭಾರತದ ಬಳಿಯೇ ಇದೆ.

ABOUT THE AUTHOR

...view details