ದೆಹಲಿ :ರಾಷ್ಟ್ರ ರಾಜಧಾನಿಯ ಮೂರು ಪ್ರಮುಖ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕದ ಹಾಸಿಗೆಗಳ ಸಂಖ್ಯೆಯನ್ನು ಕೊರೊನಾ ಕಾರಣದಿಂದಾಗಿ ಮೂರು ಪಟ್ಟು ಹೆಚ್ಚಿಸಲಾಗಿದೆ.
ಹೆಚ್ಚುತ್ತಿರುವ ಕೊರೊನಾ ರೋಗಿಗಳ ಸಂಖ್ಯೆಯಿಂದಾಗಿ ಬದಲಾವಣೆಗೆ ಅನುಗುಣವಾಗಿ ಆಸ್ಪತ್ರೆಗಳ ವ್ಯವಸ್ಥೆ ನವೀಕರಿಸಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ದೆಹಲಿಯ ಮೂರು ಪ್ರಮುಖ ಆಸ್ಪತ್ರೆಗಳ ಐಸಿಯುಗಳಲ್ಲಿ ಹಾಸಿಗೆಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ.
ದೆಹಲಿಯ ಕೊರೊನಾ ಆಸ್ಪತ್ರೆಗಳಲ್ಲಿ ಸಾಕಷ್ಟು ಹಾಸಿಗೆಗಳಿವೆ. ಅವುಗಳಲ್ಲಿ 9 ಸಾವಿರ ಬೆಡ್ಗಳು ಇನ್ನೂ ಖಾಲಿಯಿವೆ. ಆದರೆ, ಈಗ ಕೊರೊನಾದಿಂದಾಗಿ ಈ ಹಾಸಿಗೆಗಳು ಬೇಗನೆ ತುಂಬುತ್ತಿವೆ. ರಾಜಧಾನಿಯ ಲೋಕನಾಯಕ್ ಜೈಪ್ರಕಾಶ್ ಆಸ್ಪತ್ರೆ, ಗುರು ತೇಜ್ ಬಹದ್ದೂರ್ ಆಸ್ಪತ್ರೆ ಹಾಗೂ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಹಾಸಿಗೆಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ :ಸಿಎಂ ಘೋಷಣೆ ಹಾಗೂ ಆಸ್ಪತ್ರೆಯ ಹಾಸಿಗೆಗಳಿಗೆ ನಿರಂತರ ಬೇಡಿಕೆಯಿಂದಾಗಿ ಈ ಮೂರು ಪ್ರಮುಖ ಆಸ್ಪತ್ರೆಗಳ ಐಸಿಯುಗಳ ಹಾಸಿಗೆಗಳ ಸಂಖ್ಯೆ ಮೂರು ಪಟ್ಟು ಹೆಚ್ಚಿದೆ. ಲೋಕನಾಯಕ್ ಜೈಪ್ರಕಾಶ್ ಆಸ್ಪತ್ರೆಯಲ್ಲಿ ಈಗ 60ರ ಬದಲು 180 ಹಾಸಿಗೆಗಳಿದ್ರೆ, ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 45 ಹಾಸಿಗೆಗಳ ಬದಲು 120 ಹಾಸಿಗೆಗಳಿವೆ.
ಇನ್ನೊಂದೆಡೆ ಗುರು ತೇಜ್ ಬಹದ್ದೂರ್ ಆಸ್ಪತ್ರೆಯಲ್ಲಿ 31ರ ಬದಲು 66 ಹಾಸಿಗೆಗಳಿವೆ. ಹೀಗೆ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಿದ ನಂತರ ಕೊರೊನಾ ಸಾವು-ನೋವುಗಳ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಹೇಳಲಾಗಿದೆ.