ನವದೆಹಲಿ: ಇಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದ ಹಿರಿಯ ವಕೀಲ ಹಾಗೂ ಮಾಜಿ ಕೇಂದ್ರ ಸಚಿವ ರಾಮ್ ಜೇಠ್ಮಲಾನಿ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ಹಿರಿಯ ವಕೀಲ ರಾಮ್ ಜೇಠ್ಮಲಾನಿ ಇನ್ನಿಲ್ಲ...
ಜೇಠ್ಮಲಾನಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ದೇಶವಿಂದು ಅತ್ಯಂತ ಪ್ರಖರ ವಕೀಲರೊಬ್ಬರನ್ನು ಕಳೆದುಕೊಂಡಿದೆ. ಜೇಠ್ಮಲಾನಿ ಕೋರ್ಟ್ ಮತ್ತು ಸಂಸತ್ತಿನಲ್ಲಿ ಸೇವೆ ಸಲ್ಲಿಸಿದ ಪ್ರಮುಖ ವ್ಯಕ್ತಿ. ಯಾವುದೇ ವಿಷಯವನ್ನು ನಿರ್ಭೀತಿಯಿಂದ ಮಂಡಿಸುವ ಚಾತುರ್ಯ ಜೇಠ್ಮಲಾನಿಗೆ ಸಿದ್ಧಿಸಿತ್ತು ಎಂದು ಮೋದಿ ಟ್ವೀಟ್ ಮೂಲಕ ಹೇಳಿದ್ದಾರೆ. ಸರಣಿ ಟ್ವೀಟ್ ಮೂಲಕ ಜೇಠ್ಮಲಾನಿ ಜೊತೆಗಿನ ಒಡನಾಟವನ್ನು ಸ್ಮರಿಸಿದ್ದಾರೆ.
ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಜೇಠ್ಮಲಾನಿ ನಿವಾಸಕ್ಕೆ ಆಗಮಿಸಿದ ಗೃಹ ಸಚಿವ ಅಮಿತ್ ಶಾ ಅವರು ಅಂತಿಮ ನಮನ ಸಲ್ಲಿಸಿದ್ದಾರೆ. ದೇಶ ಇಂದು ಪ್ರಮುಖ ವಕೀಲ ಹಾಗೂ ಸಹೃದಯಿಯನ್ನು ಕಳೆದುಕೊಂಡಿದೆ. ಇದು ಕಾನೂನು ಕ್ಷೇತ್ರಕ್ಕೆ ಬಹುದೊಡ್ಡ ನಷ್ಟ ಎಂದು ಟ್ವೀಟ್ನಲ್ಲಿ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಸ್ವಾತಂತ್ರ್ಯ ನಂತರದಲ್ಲಿ ಅಪರಾಧ ಕಾನೂನಿಗೆ ಹೊಸ ಅರ್ಥ ಕೊಟ್ಟಿದ್ದರು. ಜೇಠ್ಮಲಾನಿ ಸ್ಥಾನವನ್ನು ಮತ್ತೊಬ್ಬರಿಂದ ತುಂಬಲು ಅಸಾಧ್ಯ ಮತ್ತು ಕಾನೂನು ಇತಿಹಾಸದಲ್ಲಿ ಹೆಸರು ಶಾಶ್ವತವಾಗಿರಲಿದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಕಾನೂನು ವಿಚಾರದಲ್ಲಿ ಜೇಠ್ಮಲಾನಿ ಹೊಂದಿದ್ದ ಆಳವಾದ ಜ್ಞಾನ, ವಾದ ಮಂಡನೆ ಮುಂಬರುವ ಪ್ರತಿಯೊಬ್ಬ ವಕೀಲರಿಗೂ ಮಾರ್ಗದರ್ಶಿ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ಮುಖಾಂತರ ಜೇಠ್ಮಲಾನಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.