ಪೋಷಣೆ ಅಭಿಯಾನವನ್ನು ಕೇವಲ ಹೆಸರಿಗೆ ಮಾತ್ರ ಜಾರಿಗೊಳಿಸಲಾಗಿದೆ ಹಾಗೂ ಪಶ್ಚಿಮ ಬಂಗಾಳ, ಹರಿಯಾಣ, ಪಂಜಾಬ್, ಕೇರಳ, ಒಡಿಶಾ ಮತ್ತು ಗೋವಾ ರಾಜ್ಯಗಳು ಈ ವಿಷಯದಲ್ಲಿ ಸಾಕಷ್ಟು ಹಿಂದಿವೆ. ಕೇಂದ್ರ ಸರ್ಕಾರ ಈ ಯೋಜನೆಗೆ ಇದುವರೆಗೆ ರೂ. 3,769 ಕೋಟಿ ಅನುದಾನ ನೀಡಿದ್ದರೂ ಕೇವಲ ರೂ. 1,058 (ಶೇಕಡಾ 33) ಮಾತ್ರ ಬಳಕೆಯಾಗಿದೆ. ಪಶ್ಚಿಮ ಬಂಗಾಳ, ಒಡಿಶಾ ಮತ್ತು ಗೋವಾ ರಾಜ್ಯಗಳು ಯೋಜನೆಗೆ ಚಾಲನೆ ಸಹ ನೀಡಿಲ್ಲ. ಕರ್ನಾಟಕ ಮತ್ತು ಪಂಜಾಬ್ ರಾಜ್ಯಗಳಲ್ಲಿ ಅನುದಾನದ ಕೇವಲ ಶೇಕಡಾ ಒಂದು ಭಾಗವನ್ನು ಮಾತ್ರ ವೆಚ್ಚ ಮಾಡಲಾಗಿದೆ. ಇನ್ನು, ಹರಿಯಾಣ ಮತ್ತು ಕೇರಳ ರಾಜ್ಯಗಳ ಅನುದಾನದ ಬಳಕೆಯ ಪ್ರಮಾಣ ಶೇಕಡಾ 10ಕ್ಕಿಂತ ಕಡಿಮೆ.
ಕೇಂದ್ರದ ಜೊತೆ ತೀವ್ರ ಭಿನ್ನಾಭಿಪ್ರಾಯಗಳನ್ನು ಹೊಂದಿರುವ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರ ಸದರಿ ಯೋಜನೆಯನ್ನು ಪರಿಗಣನೆಗೆ ತೆಗೆದುಕೊಳ್ಳಲು ಕೂಡಾ ಮುಂದಾಗಿಲ್ಲ. ಯೋಜನೆಯನ್ನು ಏಕೆ ಜಾರಿಗೊಳಿಸಿಲ್ಲ ಎಂಬುದಕ್ಕೆ ವಿವರಣೆ ನೀಡಿರುವ ರಾಜ್ಯದ ಸಚಿವ ಶಶಿ ಪಾಂಜಾ, ಪೋಷಣೆಗೆ ಸಂಬಂಧಿಸಿದ ತಮ್ಮ ರಾಜ್ಯದ ಯೋಜನೆ ಕೇಂದ್ರದ ಯೋಜನೆಗಿಂತ ಹೆಚ್ಚು ವಿಸ್ತೃತವಾಗಿದೆ ಎಂದಿದ್ದಾರೆ.
ಬಹುತೇಕ ಇಂಥದೇ ಪರಿಸ್ಥಿತಿ ಬಿಜೆಪಿ ಆಡಳಿತದಲ್ಲಿರುವ ಗೋವಾ ರಾಜ್ಯದಲ್ಲಿಯೂ ಇದೆ. ಸೂಕ್ತ ಕ್ಷೇತ್ರ ಸಿಬ್ಬಂದಿಯ ಕೊರತೆಯಿಂದಾಗಿ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಗೋವಾ ಸರಕಾರದ ಸಂಬಂಧಿತ ಅಧಿಕಾರಿ ದೀಪಾಲಿ ನಾಯಕ್ ಹೇಳಿದ್ದಾರೆ. ಸ್ಮಾರ್ಟ್ ಫೋನ್‌ಗಳನ್ನು ಮತ್ತು ಸಾಧನಗಳನ್ನು ಹೊಂದುವಲ್ಲಿ ವಿಳಂಬದಿಂದಾಗಿ ಅನುದಾನ ಬಳಕೆ ಕನಿಷ್ಠ ಪ್ರಮಾಣದಲ್ಲಿದೆ ಎಂಬ ಕಾರಣಗಳನ್ನು ಅವರು ನೀಡಿದ್ದಾರೆ.
ಇತರ ರಾಜ್ಯಗಳಿಗೆ ಹೋಲಿಸಿದರೆ ಪಂಜಾಬ್‌ನಲ್ಲಿ ಪರಿಸ್ಥಿತಿ ಕೊಂಚ ಉತ್ತಮವಾಗಿದೆ. ಸದ್ಯದ ಪ್ರಗತಿಯ ಗತಿ ನೋಡಿದರೆ ಯೋಜನೆ ಹಿಂದುಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹಲವಾರು ಸಮೀಕ್ಷೆಗಳ ವರದಿಗಳು ಸ್ಪಷ್ಟಪಡಿಸಿವೆ. ಅಂತಾರಾಷ್ಟ್ರೀಯ ವೈದ್ಯಕೀಯ ಪತ್ರಿಕೆ ಲಾನ್ಸೆಟ್ ತನ್ನ ಸಮೀಕ್ಷೆಯಲ್ಲಿ ಈ ಕುರಿತು ಭಾರತಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದ್ದು, ಮಹಿಳೆಯರು ಮತ್ತು ಮಕ್ಕಳಲ್ಲಿ ಕಡಿಮೆ ತೂಕ, ಜನನ ಸಂದರ್ಭದಲ್ಲಿ ಕಡಿಮೆ ತೂಕ ಹಾಗೂ ರಕ್ತಹೀನತೆಯಂತಹ ದೋಷಗಳನ್ನು ನಿಯಂತ್ರಿಸದಿದ್ದರೆ, ಪೋಷಣೆ ಅಭಿಯಾನದ ಗುರಿಗಳನ್ನು 2022ರ ಹೊತ್ತಿಗೆ ತಲುಪುವುದು ಸಾಧ್ಯವಾಗದು ಎಂದು ಹೇಳಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಕೂಡಾ ಇಂಥದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ದೊಡ್ಡ ಸಂಖ್ಯೆಯ ಯೋಜನೆಗಳಿದ್ದಾಗ್ಯೂ ಮತ್ತು ಶಿಶುಗಳು, ಗರ್ಭಿಣಿಯರು ಹಾಗೂ ಹಾಲು ಕುಡಿಯುವ ಆರು ವರ್ಷದೊಳಗಿನ ಮಕ್ಕಳ ಪೌಷ್ಠಿಕ ಮಟ್ಟದ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪರಿಣಾಮ ಬೀರುವಂತಿದ್ದರೂ, ಸಾಕಷ್ಟು ಪ್ರಮಾಣದ ಪೋಷಕಾಂಶಗಳ ಸರಬರಾಜಿಗೆ ಸಂಬಂಧಿಸಿದ ಸಮಸ್ಯೆಗಳು ಹಲವಾರು ರಾಜ್ಯಗಳನ್ನು ಈಗಲೂ ದೊಡ್ಡ ಪ್ರಮಾಣದಲ್ಲಿ ಬಾಧಿಸುತ್ತಿವೆ. ಪೌಷ್ಠಿಕಾಂಶಗಳಿಗೆ ಸಂಬಂಧಿಸಿದ ಇತರೆಲ್ಲ ಯೋಜನೆಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ಪೋಷಣೆ ಅಭಿಯಾನ ಉದ್ಘಾಟನೆಯಾಗಿದ್ದು 2018ರಲ್ಲಿ. ವಿವಿಧ ಸಚಿವಾಲಯಗಳೊಂದಿಗೆ ಸಮನ್ವಯವಾಗಿ ಕೆಲಸ ಮಾಡುವ ರೀತಿ ಅದನ್ನು ರೂಪಿಸಲಾಗಿದೆ. ಅಂಗನವಾಡಿ ಕೇಂದ್ರಗಳ ಸೇವೆಯನ್ನು ಬಳಸಿಕೊಳ್ಳುವ ಮೂಲಕ ಪೋಷಕಾಂಶ ಕೊರತೆಯನ್ನು 2022ರ ಹೊತ್ತಿಗೆ ಸಮಗ್ರವಾಗಿ ತೊಡೆದುಹಾಕುವುದು ಯೋಜನೆಯ ಮುಖ್ಯ ಧ್ಯೇಯ. ಈ ಕುರಿತು ಎಲ್ಲಾ ರಾಜ್ಯಗಳಿಗೆ ಗುರಿಯನ್ನು ನಿಗದಿಪಡಿಸಿರುವ ನೀತಿ ಆಯೋಗ, ಈ ಯೋಜನೆಯ ಲಾಭ ಬಳಸಿಕೊಂಡು ಬೆಳವಣಿಗೆಗೆ ಸಂಬಂಧಿಸಿದಂತೆ ಶೇಕಡಾ ಎರಡು, ಎತ್ತರದ ಕೊರತೆ ಶೇಕಡಾ ಎರಡು, ಶಿಶುಗಳು, ಮಹಿಳೆಯರು ಮತ್ತು ಹದಿವಯಸ್ಕರಲ್ಲಿಯ ರಕ್ತಹೀನತೆ ಶೇಕಡಾ ಮೂರು ಹಾಗೂ ಹುಟ್ಟುವಾಗಿನ ತೂಕದ ಕೊರತೆ ಶೇಕಡಾ ಎರಡರಷ್ಟು ಪ್ರಮಾಣ ಪ್ರತಿ ವರ್ಷ ಕಡಿಮೆಯಾಗಬೇಕೆಂದು ವಿಧಿಸಿದೆ.