ನವದೆಹಲಿ:ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವ ಮುನ್ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ (ನ್ಯಾಷನಲ್ ವಾರ್ ಮೆಮೋರಿಯಲ್) ಗೌರವ ನಮನ ಸಲ್ಲಿಸಲಿದ್ದಾರೆ.
ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿ ಪಥ ಸಂಚಲನ ಸಮಾರಂಭಕ್ಕೆ ಆಗಮಿಸುವ ಮೋದಿ ಅವರನ್ನು 'ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥ' (ಭೂ ಸೇನೆ, ವಾಯುಪಡೆ, ನೌಕಾಪಡೆ) ಜನರಲ್ ಬಿಪಿನ್ ರಾವತ್ ಅವರು ಸ್ವಾಗತ ಮಾಡಿಕೊಳ್ಳಲಿದ್ದಾರೆ.
ಈ ಕುರಿತು ಗಣರಾಜ್ಯೋತ್ಸವದ ಉಪ ಕಮಾಂಡರ್ ಮೇಜರ್ ಜನರಲ್ ಅಲೋಕ್ ಕಕ್ಕರ್ ಅವರು ಮಾಹಿತಿ ನೀಡಿದ್ದಾರೆ.
2019ರ ಫೆಬ್ರವರಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಮೋದಿ ಅವರೇ ಉದ್ಘಾಟಿಸಿದ್ದರು. ದೇಶಕ್ಕಾಗಿ ಪ್ರಾಣ ಅರ್ಪಿಸಿದ ಭಾರತೀಯ ಸೈನಿಕರ ನೆನಪಿಗಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ.
ಚೀಫ್ ಡಿಫೆನ್ಸ್ ಸ್ಟಾಫ್ ('ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥ') ಹುದ್ದೆಯನ್ನು ಮೋದಿ ಸರ್ಕಾರ 2019ರ ಡಿಸೆಂಬರ್ನಲ್ಲಿ ಸೃಷ್ಟಿಸಿದ್ದು, ಅದಕ್ಕೆ ಜನರಲ್ ರಾವತ್ ಅವರನ್ನು (ಮೊದಲ ಅಧಿಕಾರಿ) ನೇಮಿಸಿದೆ. ರಾವತ್ ನೇಮಕವಾದ ಮೊದಲ ಗಣರಾಜ್ಯೋತ್ಸವದ ಪಥ ಸಂಚಲನ ಇದಾಗಿದೆ. ಗಣರಾಜ್ಯೋತ್ಸವ ಪರೇಡ್ನಲ್ಲಿ ಭೂ ಸೇನೆ, ನೌಕಾ ಪಡೆ, ವಾಯು ಪಡೆ ಮತ್ತು ಅರೆಸೈನಿಕ ಪಡೆಗಳ 16 ತಂಡಗಳು 31 ಬ್ಯಾಂಡ್‌ಗಳೊಂದಿಗೆ ಭಾಗವಹಿಸಲಿವೆ ಎಂದು ಕಕ್ಕರ್ ಮಾಹಿತಿ ನೀಡಿದ್ದಾರೆ.