ನವದೆಹಲಿ: ಇಡೀ ವಿಶ್ವ ಉಗ್ರವಾದ ಹತ್ತಿಕ್ಕಲು ಒಗ್ಗಟ್ಟಾಗಿದೆ. ಪಾಕ್‌ನಲ್ಲೂ ಉಗ್ರವಾದ ಮಟ್ಟ ಹಾಕಲು ಜಾಗತಿಕ ಸಮುದಾಯ ಇಮ್ರಾನ್ ಖಾನ್ ಕಿವಿ ಹಿಂಡಿದೆ. ಹಾಗಾಗಿ ಜೆಇಎಂ ಚೀಫ್ ಮೌಲಾನಾ ಮಸೂದ್ ಅಜರ್‌ನ ವಿರುದ್ಧ ಈಗ ಇಮ್ರಾನ್ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದ್ದಾರಂತೆ.
ಮೌಲಾನಾ ಮಸೂದ್ ಅಜರ್‌ನ ಪಾಕ್‌ನ ISI ಹದ್ದಿನ ಕಣ್ಣಿಟ್ಟು ಕಾಯುತ್ತಿದೆ. ಆದ್ರೇ, ಪಾಕ್ ಈಗ ಅಜರ್ ಭವಿಷ್ಯ ನಿರ್ಧರಿಸುವ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಭಾರತ ವಿಶ್ವ ಸಮುದಾಯದ ಮೂಲಕ ಪಾಕ್ ಮೇಲೆ ಹಾಕಿದ ಒತ್ತಡ ಪರಿಣಾಮ ಬೀರಿದಂತೆ ಕಾಣುತ್ತಿದೆ. ಜೈಷೆ ಮೊಹಮ್ಮದ್ ಚೀಫ್ ಮಸೂದ್ ಅಜರ್ ಮೇಲೆ ಕ್ರಮಕೈಗೊಳ್ಳಲು ಸಿದ್ಧತೆ ನಡೆಸಿದೆ. ಸಂಯುಕ್ತ ರಾಷ್ಟ್ರ ಸುರಕ್ಷಾ ಪರಿಷತ್ (UNSC )ನಲ್ಲಿ ಈ ಬಾರಿ ಭಾರತ ಮೌಲಾನಾ ಮಸೂದ್ ಅಜರ್‌ನ, ಜಾಗತಿಕ ಉಗ್ರನೆಂದು ಘೋಷಿಸುವ ಪ್ರಸ್ತಾವ ಮುಂದಿಟ್ಟರೇ, ಆಗ ಅದಕ್ಕೆ ಪಾಕ್ ವಿರೋಧಿಸದಿರಲು ತೀರ್ಮಾನಿಸಿದೆ.
'ಪಾಕ್ ಸರ್ಕಾರ ಸೈದ್ಧಾಂತಿಕ ಹಿನ್ನೆಲೆಯಲ್ಲಿ ಯಾವುದೇ ಸಮಯದಲ್ಲಾದರೂ ಆದಷ್ಟು ಶೀಘ್ರ ಜೆಇಎಂ ಉಗ್ರ ಸಂಘಟನೆ ಮೇಲೆ ಕ್ರಮಕೈಗೊಳ್ಳಲಿದೆ ಎನ್ನಲಾಗುತ್ತಿದೆ. ವಿಂಗ್ ಕಮಾಂಡರ್ ಅಭಿನಂದನ್ ಅವರನ್ನ ತವರಿಗೆ ಹಸ್ತಾಂತರಿಸಿ, ಖಾನ್ ತಮ್ಮ ಮೇಲಿನ ಭಾರತದ ಒತ್ತಡ ಕಡಿಮೆ ಮಾಡಿಕೊಳ್ಳುವ ನಡೆ ಅನುಸರಿಸಿದ್ದರು.
ಪಾಕ್‌ನ The Express Tribune ಪತ್ರಿಕೆ ವರದಿ ಅನುಸಾರ, ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮಸೂದ್ ಅಜರ್ ಮೇಲೆ ಕಠಿಣ ಕ್ರಮಕೈಗೊಳ್ಳಬೇಕಿದೆ. ಹಾಗೇ ಜಾಗತಿಕ ಉಗ್ರನೆಂಬ ಘೋಷಣೆ ಪ್ರಸ್ತಾವನೆಗೆ ಸಲ್ಲಿಸಿದ್ದ ವಿರೋಧ ವಾಪಸ್ ಪಡೆಯಬೇಕಿದೆ. ವ್ಯಕ್ತಿಗಿಂತ ಇಡೀ ರಾಷ್ಟ್ರದ ಹಿತವೇ ಪ್ರಾಮುಖ್ಯ ಅಂತ ಪಾಕ್‌ನ ರಕ್ಷಣಾ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ.
UNSCಯ ಐದು ಸ್ಥಾಯಿ ಸಮಿತಿ ಸದಸ್ಯ ರಾಷ್ಟ್ರಗಳಲ್ಲಿ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್, ಮಸೂದ್ ಅಜರ್‌ನ ಜಾಗತಿಕ ಉಗ್ರನೆಂದು ಘೋಷಿಸುವ ಪ್ರಸ್ತಾವದ ಪರವಾಗಿವೆ. ಆದ್ರೇ, ಚೀನಾ ಈ ಇದಕ್ಕೆ ಪದೇ ಪದೆ ಅಡ್ಡಿಯಾಗಿದೆ. ಒಂದು ವೇಳೆ ಜಾಗತಿಕ ಉಗ್ರನೆಂಬ ಹಣೆಪಟ್ಟಿ ಬಿದ್ರೇ, ಮಸೂದ್ ಅಜರ್ ವಿಶ್ವದ ಯಾವುದೇ ದೇಶಕ್ಕೂ ಪ್ರಯಾಣ ಬೆಳೆಸಲಾಗಲ್ಲ. ಹಾಗೇ ಎಲ್ಲಿಯೂ ನೆಲೆ ನಿಲ್ಲಲು ಸಾಧ್ಯವಾಗಲ್ಲ. ಆತನ ಎಲ್ಲ ಸಂಪತ್ತು ಸೀಜ್ ಮಾಡಬೇಕಾಗುತ್ತದೆ. ಕಳೆದ 10 ವರ್ಷದಿಂದ ಭಾರತ ಅಜರ್‌ನ ಜಾಗತಿಕ ಉಗ್ರನೆಂಬ ಹಣೆಪಟ್ಟಿ ಅಂಟಿಸಲು ಸರ್ಕಸ್ ಮಾಡುತ್ತಿದೆ. 2009ರಲ್ಲೇ UNSCಯಲ್ಲಿ ಮೊದಲ ಬಾರಿಗೆ ಭಾರತ ಪ್ರಸ್ತಾವ ಮುಂದಿಟ್ಟಿತ್ತು.
'ಸರ್ಕಾರ ಜೆಇಎಂ ಸಹಿತ ನಿಷೇಧಿತ ಉಗ್ರ ಸಂಘಟನೆಗಳ ವಿರುದ್ಧವಾಗಿದೆ. ಮುಂದೆ ಭವಿಷ್ಯದಲ್ಲೂ ಆರ್ಥಿಕ ಪ್ರತಿಬಂಧ ಸೇರಿ ಯಾವುದೇ ರೀತಿಯ ಕ್ರಮಕೈಗೊಂಡರೂ ಅದು ರಾಷ್ಟ್ರೀಯ ಕಾರ್ಯಸೂಚಿ ಅನುಸಾರವಾಗಿರುತ್ತೆ. ನಿಷೇಧಿತ ಉಗ್ರ ಸಂಘಟನೆಗಳ ವಿರುದ್ಧ ಯಾವುದೇ ಕಠಿಣ ಕ್ರಮಕೈಗೊಂಡರೂ ರಾಷ್ಟ್ರೀಯ ಕಾರ್ಯಸೂಚಿ ಅನುಸಾರವೇ ನಡೆಯುತ್ತೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಹಾವಲಪುರದಲ್ಲಿರುವ ಒಂದು ಮದರಸಾ ಹಾಗೂ ಮಸೀದಿಯನ್ನೂ ಸರ್ಕಾರ ಸಂಪೂರ್ಣ ಹತೋಟಿಗೆ ಪಡೆದಿದೆ' ಅಂತ ಪಾಕ್‌ನ ಪ್ರಸಾರ ಖಾತೆ ಸಚಿವ ಫವಾದ್ ಚೌಧರಿ ಹೇಳಿದ್ದಾರೆ.
ಭಾರತ ಹಾಗೂ ಜಾಗತಿಕ ಸಮುದಾಯದ ಒತ್ತಡದಿಂದ ಮುಕ್ತರಾಗಲು ಮಸೂದ್ ಅಜರ್‌ನ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಅನಿವಾರ್ಯತೆಯಂತೂ ಪಾಕ್‌ಗೆ ಸೃಷ್ಟಿಯಾಗಿದೆ. ಅದಕ್ಕೀಗ ಬೇರೆ ದಾರಿಯೇ ಇಲ್ಲ.