ಕ್ಯಾನ್ಸರ್ ಒಂದು ಸಂಕೀರ್ಣ ಕಾಯಿಲೆ. ಇದನ್ನು ಅರ್ಥ ಮಾಡಿಕೊಳ್ಳುವುದೇ ಒಂದು ಕ್ಲಿಷ್ಟಕರ ಸಂಗತಿಯಾಗಿದೆ. ಏಕೆಂದರೆ, ಇತರ ಕಾಯಿಲೆಗಳಿಗೆ ಹೋಲಿಸಿದರೆ ಇದರ ಲಕ್ಷಣಗಳು, ಹರಡುವಿಕೆ ತೀರಾ ವಿಶಿಷ್ಟವಾದದ್ದು. ಮೂಲದಲ್ಲಿ ಕ್ಯಾನ್ಸರ್ ಕೋಶಗಳು ಅತ್ಯಂತ ಕ್ರಿಯಾಶೀಲವಾಗಿರುತ್ತವೆ. ಇವು ರಕ್ತ ಬೀಜಾಸುರನ ಸೃಷ್ಟಿಯಂತೆ ಎಲ್ಲೆಲ್ಲೂ ತನ್ನ ಅಸ್ತಿತ್ವವನ್ನು ಹರಡುವ ಕೋಶಗಳಾಗಿವೆ.
ಸಿದ್ದಾರ್ಥ ಮುಖರ್ಜಿ ಅವರು ಬರೆದ 'ಎಲ್ಲ ರೋಗಗಳ ರಾಜ: ಕ್ಯಾನ್ಸರ್‌ನ ಒಂದು ಆತ್ಮಚರಿತ್ರೆ' ಎಂಬ ಪುಸ್ತಕದಲ್ಲಿ ಅರ್ಬುದ ರೋಗ (ಕ್ಯಾನ್ಸರ್) ಜನರನ್ನು ಬಾಧಿಸುತ್ತಿರುವ ಅತ್ಯಂತ ಸಂಕೀರ್ಣವಾದ ಕಾಯಿಲೆಗಳಲ್ಲಿ ಒಂದಾಗಿದೆ. ಹಾಗಾಗಿ ಇದನ್ನು ಎಲ್ಲ ಕಾಯಿಲೆಗಳ ಚಕ್ರವರ್ತಿ ಎಂದು ಕರೆದಿದ್ದಾರೆ. ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ಜನರು ಕ್ಯಾನ್ಸರ್ನಿಂದ ಮೃತಪಡುತ್ತಿದ್ದಾರೆ. ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಅಗಾಧ ಪ್ರಗತಿಯ ಹೊರತಾಗಿಯೂ ಈ ಕಾಯಿಲೆಯಿಂದ ಎಲ್ಲರನ್ನು ರಕ್ಷಿಸಬಲ್ಲ ಚಿಕಿತ್ಸೆಯನ್ನು ಪತ್ತೆ ಹಚ್ಚಲು ನಮಗಿನ್ನೂ ಸಾಧ್ಯವಾಗಿಲ್ಲ.
ಕ್ಯಾನ್ಸರ್ ಎಂದರೇನು? ಎಂಬುದನ್ನು ಅರ್ಥಮಾಡಿಕೊಳ್ಳಲು ಮೊದಲಿಗೆ ನಮ್ಮ ದೇಹ ರಚನಾ ಕ್ರಮದ ಬಗ್ಗೆ ತಿಳಿದುಕೊಳ್ಳಬೇಕು. ಜೊತೆಗೆ ನಮ್ಮ ದೇಹದಲ್ಲಿರುವ ಜೀವಕೋಶಗಳೆಂದರೇನು? ಹಾಗೂ ಅವು ಹೇಗೆ ಕಾರ್ಯನಿರ್ವಹಿಸುತ್ತದೆ? ಎಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ಜೀವಕೋಶಗಳೆಂದರೆ, ಒಂದು ಗೋಡೆಯಲ್ಲಿರುವ ಇಟ್ಟಿಗೆಯಂತೆ ನಮ್ಮ ದೇಹದ ಒಂದು ಸಣ್ಣ ಘಟಕವಾಗಿದೆ. ಈ ಜೀವಕೋಶಗಳು ನಮ್ಮ ದೇಹದಲ್ಲಿನ ನಾನಾ ಅಂಗಾಂಶಗಳು ಮತ್ತು ಅಂಗಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳು ನಮ್ಮ ದೇಹದ ಪ್ರತಿ ಅಂಗ - ಅಂಗಾಂಶಗಳೂ ವಿಭಿನ್ನ ರೀತಿಯಲ್ಲಿ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
ನಮ್ಮ ದೇಹದ ಜೀವಧಾತುಗಳು (ಜೀನ್)ಗಳನ್ನು ವಿಭಿನ್ನವಾಗಿ ವ್ಯಕ್ತಪಡಿಸುವ ಮೂಲಕ ಈ ಜೀವಕೋಶಗಳು ಕಾರ್ಯನಿರ್ವಹಿಸುತ್ತವೆ. ದೇಹದ ಕೆಂಪು ರಕ್ತ ಕಣಗಳನ್ನು ಹೊರತುಪಡಿಸಿ ನಮ್ಮ ದೇಹದ ಪ್ರತಿಯೊಂದು ಜೀವ ಕೋಶವು ಡಿಎನ್‌ಎಯ ಕ್ರಿಯಾತ್ಮಕ ಭಾಗವಾದ 20000 - 25000 ಜೀನ್‌ಗಳನ್ನು ಹೊಂದಿರುತ್ತದೆ. ಪ್ರತಿ ಜೀನ್‌ನಲ್ಲಿ ಪ್ರೋಟೀನ್ ಅನ್ನು ಸಂಶ್ಲೇಷಿಸಲು ಕೋಡ್ ಅಥವಾ ಸೂಚನೆಗಳಿವೆ. ಮತ್ತು ಕಿಣ್ವಗಳು, ಗ್ರಾಹಕಗಳು, ಲಿಗಂಡ್ ಮುಂತಾದ ಪ್ರೋಟೀನ್‌ಗಳ ಸಂಕೀರ್ಣ ವ್ಯವಸ್ಥೆ. ಜೀವಕೋಶಕ್ಕೆ ಕ್ರಿಯಾತ್ಮಕ ಶಕ್ತಿ ನೀಡುತ್ತವೆ. ಆದರೆ ಈ ವ್ಯವಸ್ಥೆ ಬರೀ ಪ್ರೋಟೀನ್‌ಗಳ ಕಾರ್ಯನಿರ್ವಹಣೆಯಲ್ಲಿ ಕೊನೆಗೊಳ್ಳುವುದಿಲ್ಲ.
ಈ ಪ್ರೋಟೀನ್‌ಗಳ ಕಾರ್ಯಗಳು ಹಲವಾರು ಚಯಾಪಚಯ ಪ್ರಕ್ರಿಯೆಗೆ ಮತ್ತು ಅವುಗಳ ಸಂಶ್ಲೇಷಣೆಗೆ ಕಾರಣವಾಗುತ್ತವೆ. ಪ್ರೋಟೀನ್‌ಗಳು ಮತ್ತು ಇತರ ಜೈವಿಕ ಅಣುಗಳ ಜೊತೆಗೆ ಈ ಚಯಾಪಚಯ ಕ್ರಿಯೆಗಳು ಜೀವಕೋಶದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತವೆ. ಇದಲ್ಲದೆ, ಸಾಮಾನ್ಯ ಕೋಶವು ನಿರ್ದಿಷ್ಟ ಸಂಖ್ಯೆಯ ಬಾರಿ ವಿಭಜಿಸಬಹುದು. ಕೋಶವು ಯಾವುದೇ ಒತ್ತಡದ ಪರಿಸರದಲ್ಲಿ ಪ್ರೇರೆಪಣೆ, ಸೂಚನೆ ಅಥವಾ ಸಿಗ್ನಲ್ ಅನ್ನು ಕಂಡುಕೊಂಡಾಗ, ಅದು ಸಂಕೀರ್ಣವಾದ ಪ್ರೋಟೀನ್ ಸಿಗ್ನಲಿಂಗ್ ಮತ್ತು ಮೆಟಾಬಾಲೈಟ್‌ಗಳ ಮೂಲಕ ಅದನ್ನು ಎದುರಿಸಲು ಪ್ರಯತ್ನಿಸುತ್ತದೆ. ಆದರೆ ಈ ಒತ್ತಡದ ಮಟ್ಟವು ಕೆಲವು ಮಿತಿಗಳನ್ನು ದಾಟಿದಾಗ ಅದು ಅಪೊಪ್ಟೋಸಿಸ್ (ಪ್ರೋಗ್ರಾಮ್ಡ್ ಡೆತ್) ಗೆ ಹೋಗಲು ಅಥವಾ ದೋಷವನ್ನು ಸರಿಪಡಿಸಲು ನಿರ್ಧರಿಸಬಹುದು.
ಈ ಸಂದರ್ಭದಲ್ಲಿ ಜೀವಕೋಶಗಳ ಹಲವು ಕೆಲಸಗಳಿಗೆ ಅಡೆತಡೆಗಳು ಉಂಟಾಗಬಹುದು. ಯಾವುದೇ ವ್ಯವಸ್ಥೆಯಂತೆ ಜೀವಕೋಶಗಳ ವ್ಯವಸ್ಥೆ ಕೂಡ ದೋಷದಿಂದ ಮುಕ್ತವಾಗಿಲ್ಲ. ಅದು ಸ್ವಲ್ಪ ಬದಲಾವಣೆಗಳಿಗೆ ಒಳಗಾಗುತ್ತಿರುತ್ತದೆ. ಜೊತೆಗೆ ಅದು ಅತಿ ಸೂಕ್ಷ್ಮವಾಗಿರುತ್ತದೆ. ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದಂತೆ ಈ ಜೀವಕೋಶಗಳ ಅಸಹಜ ಕ್ರಿಯೆಯನ್ನು ಗಣನೆಗೆ ತೆಗೆದುಕೊಂಡಾಗ, ಅದು ಜೀನ್‌ಗಳನ್ನು ಅವಲಂಬಿಸಿರುತ್ತದೆ. ಜೀವನ ವ್ಯವಸ್ಥೆಯ ಯಾವುದೇ ಒಂದು ಪ್ರಕ್ರಿಯೆ, ಸ್ಥಳೀಯ ಪರಿಸರ ಮತ್ತು ವಂಶವಾಹಿಗಳ ನಡುವಿನ ಪರಸ್ಪರ ಕ್ರಿಯೆಗೆ ಸಂಬಂಧಿಸಿರುತ್ತದೆ. ಆದ್ದರಿಂದ, ಜೀನ್‌ನಲ್ಲಿನ ಬದಲಾವಣೆ (ರೂಪಾಂತರ) ಹೊಗೆ, ಮದ್ಯ, ತಂಬಾಕು ಮತ್ತು ಕೀಟನಾಶಕಗಳಂತಹ ಪರಿಸರದಲ್ಲಿ ಇರುವ ಅಂಶಗಳಿಂದ ಉಂಟಾಗಬಹುದು ಅಥವಾ ವಿಭಜನೆಯ ಸಂದರ್ಭದಲ್ಲಿ ಅದು ತಪ್ಪಾಗಬಹುದು.
ಓರ್ವ ವ್ಯಕ್ತಿ ಆರೋಗ್ಯಕರವಾಗಿದ್ದ ಸಂದರ್ಭದಲ್ಲಿ ಒಂದು ಕೋಶವು ನಿರ್ದಿಷ್ಟ ಸಂಖ್ಯೆಯಲ್ಲಿ ವಿಭಜಿಸಬಹುದು ಎಂದು ನಮಗೆ ತಿಳಿದಿದೆ. ಆದರೆ ಒಂದು ಕ್ಯಾನ್ಸರ್ ಕೋಶವು ಅನಿರ್ದಿಷ್ಟ ಪ್ರಮಾಣದಲ್ಲಿ ವಿಭಜನೆಗೊಳ್ಳಬಹುದು. ಈ ವಿಭಜನೆ ಸಾಮಾನ್ಯವಾಗಿ ಜೀವಕೋಶಗಳ ಒಂದು ರಾಶಿಯನ್ನು ಉಂಟುಮಾಡುತ್ತದೆ. ಇದನ್ನು ಸಾಮಾನ್ಯವಾಗಿ ಕ್ಯಾನ್ಸರ್ ಗಡ್ಡೆ ಎಂದು ಕರೆಯಲಾಗುತ್ತದೆ. ಆದ್ದರಿಂದ ಕ್ಯಾನ್ಸರ್ ಗಡ್ಡೆಗಳೆಂದರೆ, ನಮ್ಮ ಸಾಮಾನ್ಯ ಜೀವಕೋಶಗಳ ಜೀನ್‌ಗಳಲ್ಲಿ ಎದುರಾಗುವ ದೋಷ ಎನ್ನುಬಹುದು.
ನಮಗೆ ತಿಳಿದಿರುವಂತೆ ಪ್ರತಿ ಕೋಶದಲ್ಲಿ 20000 - 25000 ವಂಶವಾಹಿಗಳಿರುತ್ತವೆ. ಆದರೆ ಕ್ಯಾನ್ಸರ್ ಗೆಡ್ಡೆಗಳಲ್ಲಿ ಇಂತಹ ವಂಶವಾಹಿನಿಗಳು ಬದಲಾಗಿರುವುದು ಕಂಡು ಬರುತ್ತದೆ. ನಾನಾ ಅಂಶಗಳ ಕಾರಣಕ್ಕಾಗಿ ವಿಭಿನ್ನ ರೀತಿಯ ಕ್ಯಾನ್ಸರ್ ನಮ್ಮ ದೇಹದಲ್ಲಿ ಕಾಣಿಸಿಕೊಳ್ಳಬಹುದು. ಉದಾಹರಣೆಗೆ, ಧೂಮಪಾನಿಗಳಲ್ಲಿ, ತಂಬಾಕು ಹೊಗೆಯಿಂದ ಶ್ವಾಸಕೋಶದ ಕ್ಯಾನ್ಸರ್ ಉಂಟಾಗಬಹುದು. ಯಕೃತ್ತಿನ ಕ್ಯಾನ್ಸರ್ ಸಾಮಾನ್ಯವಾಗಿ ಮದ್ಯಸಾರ- ಆಲ್ಕೋಹಾಲ್ ನಿಂದ ಉಂಟಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯನ್ನು ಕ್ಯಾನ್ಸರ್ ಎಂದು ಸರಳವಾಗಿ ವಿಶ್ಲೇಷಿಸಬಹುದು.
ಇದು ಕ್ಯಾನ್ಸರ್ ಬಗೆಗಿನ ಸರಳ ಮಾಹಿತಿ. ಹಾಗಾದರೆ ಇದರಿಂದ ಸಂಪೂರ್ಣವಾಗಿ ಗುಣಮುಖ ಏಕೆ ಸಾಧ್ಯವಿಲ್ಲ? ಇದು ಸದಾ ಎಲ್ಲರ ಮನಸ್ಸಿನಲ್ಲಿ ಕೊರೆಯುತ್ತಿರುತ್ತದೆ. ಕ್ಯಾನ್ಸರ್‌ಗೆ ಈಗ ಹಲವಾರು ಚಿಕಿತ್ಸೆಗಳು ಲಭ್ಯವಿವೆ. ಆದರೆ ಕಿಮೋಥೆರಪಿ ಸೇರಿದಂತೆ ಯಾವುದೇ ಒಂದು ನಿರ್ದಿಷ್ಟ ಚಿಕಿತ್ಸೆಯು 100 ಪ್ರತಿಶತ ಪರಿಣಾಮಕಾರಿಯಾಗಿಲ್ಲ. ಈ ಕ್ಯಾನ್ಸರ್ ಔಷಧಿ-ಚಿಕಿತ್ಸೆಗಳ ವಿಶೇಷತೆ ಎಂದರೆ, ಅವುಗಳು, ಪ್ರತಿ ರೋಗಿಗಳಲ್ಲಿ, ಒಬ್ಬರಿಂದ ಇನ್ನೊಬ್ಬರಿಗೆ ನಾನಾ ಪರಿಣಾಮವನ್ನು ಬೀರುತ್ತಿರುತ್ತವೆ. ಪ್ರತಿ ವ್ಯಕ್ತಿಯೂ ಜೈವಿಕವಾಗಿ ಮತ್ತೊಬ್ಬರಿಗಿಂತ ಭಿನ್ನ. ಹೀಗಾಗಿ ಕ್ಯಾನ್ಸರ್ ಒಂದೇ ರೀತಿಯ ರೋಗವಾದರೂ ಸಹ, ಒಬ್ಬ ರೋಗಿಗಿಂತ ಇನ್ನೊಬ್ಬರಿಗೆ ಔಷಧದ ಪರಿಣಾಮ ಬೀರುವುದು ವಿಭಿನ್ನವಾಗಿರುತ್ತದೆ.
ಎಲ್ಲರ ಮನಸ್ಸಿನಲ್ಲಿ ಸುಳಿದಾಡುವ ಇನ್ನೊಂದು ಪ್ರಶ್ನೆಯೆಂದರೆ, ಕ್ಯಾನ್ಸರ್ ನಮ್ಮ ದೇಹದಲ್ಲಿ ಯಾವ ಹಂತದಲ್ಲಿದೆ ಎನ್ನುವುದು? ಈ ನಿರ್ದಿಷ್ಟ ಹಂತಗಳಾವುವು? ಎಂಬುದು. ಕ್ಯಾನ್ಸರ್‌ನ ಹಂತಗಳನ್ನು 1, 2, 3 ಮತ್ತು 4 ನೇ ಹಂತಗಳಾಗಿ ವಿಂಗಡಿಸಲಾಗಿದೆ ಎಂದು ನಾವು ಕೇಳಲ್ಪಟ್ಟಿದ್ದೇವೆ. ಈ ಹಂತಗಳು ಯಾವುವು ಮತ್ತು ಮುಂದುವರಿದ ಅಥವಾ 3 ಮತ್ತು 4 ನೇ ಹಂತದಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡಲು ಏಕೆ ಕಷ್ಟ ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ಸಾಮಾನ್ಯವಾಗಿ ಒಂದು ಕ್ಯಾನ್ಸರ್ ಗಡ್ಡೆಯಲ್ಲಿನ ಜೀವಕೋಶಗಳು ಅನಿರ್ದಿಷ್ಟ ಪ್ರಮಾಣದಲ್ಲಿ ಬೆಳೆಯುವ ಸಾಮರ್ಥ್ಯ ಹೊಂದಿವೆ ಎಂಬುದನ್ನು ನಾವು ಮೊದಲೇ ತಿಳಿದುಕೊಂಡಿದ್ದೇವೆ. ಈ ಗಡ್ಡೆಗಳ ಕೋಶಗಳು ನಮ್ಮ ದೇಹದ ಒಂದು ನಿರ್ದಿಷ್ಟ ಭಾಗದಲ್ಲಿ ಅಭಿವೃದ್ಧಿಹೊಂದಲಾರಂಭಿಸುತ್ತವೆ. ಅವುಗಳು ಆರಂಭದಲ್ಲಿ ದ್ರವ್ಯರಾಶಿ (ಮಾಸ್) ರೂಪದಲ್ಲಿರುತ್ತವೆ. ಅವುಗಳ ಸಾಂದ್ರತೆ ಹಾಗೂ ಪ್ರಮಾಣ ತೀರಾ ಚಿಕ್ಕದಾಗಿರುತ್ತದೆ ಹಾಗೂ ಅವುಗಳು ಸುತ್ತಲಿನ ಪ್ರದೇಶವನ್ನು ಆಕ್ರಮಿಸಿಕೊಂಡಿಲ್ಲದಿದ್ದರೆ ಅವುಗಳನ್ನು ಕ್ಯಾನ್ಸರ್‌ನ 1ನೇ ಹಂತ ಎಂದು ಕರೆಯಲಾಗುತ್ತದೆ. ಇದನ್ನು ತೆಗೆದುಹಾಕಿ, ಅಲ್ಲಿದ್ದ ಮಾಸ್ ಅನ್ನು ನಾಶಪಡಿಸಿದರೆ, ಕ್ಯಾನ್ಸರ್ ಹರಡುವುದನ್ನು ತಪ್ಪಿಸಲು ಸುಲಭವಾಗಿ ಸಾಧ್ಯವಾಗುತ್ತದೆ. ಆದರೆ ಉಳಿದ ಹಂತಗಳಲ್ಲಿ ಇದು ಬೇರೆನೆ ತೆರನಾಗಿರುತ್ತದೆ. ಈ ಹಂತಗಳಲ್ಲಿ ಈ ಮಾಸ್ ಒಂದು ನಿರ್ದಿಷ್ಟ ಆಕಾರದಲ್ಲಿ, ತನ್ನ ಹತ್ತಿರದ ಅಂಗಾಂಗಳ ಮೇಲೂ ಹರಡಿಕೊಂಡಿರುತ್ತವೆ. ಅಲ್ಲಿ ಅವುಗಳು ದೇಹದ ಅಂಗಾಂಶ-ಅಂಗಗಳ ಮೇಲೆ ದಾಳಿ ಮಾಡಿರುತ್ತವೆ. ಇದನ್ನು ಕ್ಯಾನ್ಸರ್‌ನ 2 ಮತ್ತು 3 ನೇ ಹಂತ ಎಂದು ಕರೆಯುತ್ತೇವೆ. ಇನ್ನು 4 ನೇ ಹಂತದಲ್ಲಿ ಕ್ಯಾನ್ಸರ್ ಕೋಶಗಳು ದೇಹದ ವಿವಿಧ ಅಂಗಗಳನ್ನು ತಮ್ಮ ವಸಾಹತುವನ್ನಾಗಿ ಮಾಡಲು ಆರಂಭಿಸಿರುತ್ತವೆ. ಉದಾಹರಣೆಗೆ ಸ್ತನ ಕ್ಯಾನ್ಸರ್ ಮೆದುಳಿನಲ್ಲಿ ಹರಡುವುದು.