ನಿತ್ಯದ ವಹಿವಾಟಿನಲ್ಲಿ ವ್ಯಾಪಾರವು ಹಲವಾರು ಗಂಡಾಂತರಗಳು, ಸಮಸ್ಯೆಗಳು ಹಾಗೂ ಸವಾಲುಗಳನ್ನು ಎದುರಿಸುತ್ತದೆ. ಈ ಪೈಕಿ ಹಲವಾರು ವಿಷಯಗಳು ಅದರ ಲಾಭ ಮತ್ತು ನಷ್ಟಗಳ ಮೇಲೆ ನೇರ ಪ್ರಭಾವ ಹೊಂದಿರುತ್ತದಲ್ಲದೇ ಕೆಲವೊಮ್ಮೆ ಅವುಗಳ ಅಸ್ತಿತ್ವಕ್ಕೇ ಧಕ್ಕೆ ತರಬಹುದು. ಸಾಮಾನ್ಯವಾಗಿ ಯಾವುದೇ ವ್ಯಾಪಾರವು ತನ್ನ ಪ್ರಾರಂಭಿಕ ಹಂತದಲ್ಲಿ, ಭವಿಷ್ಯದಲ್ಲಿ ಅವು ತರಬಹುದಾದ ಸಂಭವನೀಯ ಲಾಭಗಳು ಮತ್ತು ನಷ್ಟಗಳ ಜೊತೆಗೆ ಸಂಭವನೀಯ ಗಂಡಾಂತರಗಳ ಕುರಿತು ವಿಶಾಲ ನಿರೀಕ್ಷೆಗಳನ್ನು ಹೊಂದಿರುತ್ತವೆ. ಇಂತಹ ಗಂಡಾಂತರಗಳು ಸಾಮಾನ್ಯವಾಗಿ ಅವುಗಳ ಕಾರ್ಯನಿರ್ವಹಣಾ ತಂತ್ರಗಳಲ್ಲಿ ಹುದುಗಿರುತ್ತವೆ. ಆದರೆ, ಎಷ್ಟೋ ಗಂಡಾಂತರಗಳು, ವಿಷಯಗಳು ಮತ್ತು ಸವಾಲುಗಳು ತಮ್ಮ ಶುದ್ಧ ಸಂಕೀರ್ಣತೆ ಮತ್ತು ಇಂತಹ ಚಟುವಟಿಕೆಗಳಿಗೆ ಇರಬಹುದಾದ ಅವಕಾಶಗಳಿಂದಾಗಿ ನೇರವಾಗಿ ವ್ಯಕ್ತವಾಗುವುದಿಲ್ಲ. ವಂಚನೆ ಅಂತಹ ಒಂದು ಚಟುವಟಿಕೆಯಾಗಿದ್ದು, ದೊಡ್ಡ ಸಂಖ್ಯೆಯ ಆರ್ಥಿಕ ಚಟುವಟಿಕೆಗಳನ್ನು ಆವರಿಸಿಕೊಂಡಿದೆ.
ವಂಚನೆ ಮತ್ತು ವಂಚನಾ ಚಟುವಟಿಕೆಗಳನ್ನು ನಮ್ಮ ಕಾನೂನುಗಳು ನಿರ್ದಿಷ್ಟವಾಗಿ, ಹಲವಾರು ಸಲ ವ್ಯಾಖ್ಯಾನಿಸಿವೆ. ಆರ್ಥಿಕ ಅಪರಾಧಗಳ ಪೈಕಿ ವಂಚನೆ ಎಂಬುದು ಅತಿ ದೊಡ್ಡ ಹಾಗೂ ಅವಶ್ಯಕ ಭಾಗವೇ ಆಗಿದೆ. ವಂಚನೆಯ ಪ್ರಮುಖ ಸಮಸ್ಯೆ ಏನೆಂದರೆ, ಸಮಾಜದಲ್ಲಿ ಅಸ್ತಿತ್ವದಲ್ಲಿರುವ ವಿಶ್ವಾಸವನ್ನೇ ಅದು ಕುಂದಿಸಿಬಿಡುತ್ತದೆ. ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಗಳು ಮತ್ತು ಸರಕಾರಗಳ ಪಾಲಿಗೆ ಈ ವಿಶ್ವಾಸ ಎಂಬುದು ಅವಿಭಾಜ್ಯ ಅಂಗ.
ವಿವಿಧ ರೀತಿಯ ವಂಚನೆಗಳಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯಲ್ಲಿ (ಐಪಿಸಿ) ವಿವಿಧ ವಿಭಾಗಗಳಿವೆ. ʼವಂಚನೆʼ ಎಂದು ವರ್ಗೀಕರಿಸಲಾದ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಭಾರತದ ನ್ಯಾಯಾಲಯಗಳು ಸುದೀರ್ಘ ಕಾಲದಿಂದ ವಿವಿಧ ರೀತಿಯ ತೀರ್ಪುಗಳನ್ನು ನೀಡುತ್ತಲೇ ಬಂದಿವೆ. ವಂಚನೆಯ ಪ್ರಮುಖ ಅಂಶವೆಂದರೆ, ಚರ ಅಥವಾ ಸ್ಥಿರ ಆಸ್ತಿಗೆ ಸಂಬಂಧಿಸಿದಂತೆ ಇನ್ನೊಬ್ಬ ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ ವಂಚಿಸುವುದು. ವಂಚನೆಯಲ್ಲಿ ಎರಡು ವಿಧಗಳನ್ನು ನ್ಯಾಯಾಲಯಗಳು ಗುರುತಿಸಿವೆ: ಮೋಸ ಹಾಗೂ ಗಾಯಗೊಳಿಸುವುದು. ಸುಳ್ಳು ಹೇಳಿಕೆಯನ್ನು, ಅದು ಸರಿ ಅಥವಾ ತಪ್ಪು ಎಂಬುದನ್ನು ಗಮನಿಸದೇ (೧) ಉದ್ದೇಶಪೂರ್ವಕವಾಗಿ ಅಥವಾ (೨) ಅದರ ಸತ್ಯ ಕುರಿತು ನಂಬಿಕೆಯಿಲ್ಲದೇ ಅಥವಾ (೩) ಬೇಕಾಬಿಟ್ಟಿಯಾಗಿ, ನಿರ್ಲಕ್ಷ್ಯದಿಂದ ಮಾಡುವುದು. ಮುಖ್ಯವಾದ ಅಂಶವೆಂದರೆ, ವಂಚನೆ ಮತ್ತು ನ್ಯಾಯ ಎಂದಿಗೂ ಜೊತೆಯಾಗಿ ಇರಲು ಸಾಧ್ಯವಿಲ್ಲ. ಏಕೆಂದರೆ, ವಂಚನೆ ಎಂಬುದು ಉದ್ದೇಶಪೂರ್ವಕವಾದ ಮೋಸವಾಗಿದ್ದು, ಇನ್ನೊಬ್ಬ ವ್ಯಕ್ತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಏನಾದರೂ ಗಳಿಸಲಿಕ್ಕೆ ಮಾಡಿದ ತಂತ್ರವಾಗಿರುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇನ್ನೊಬ್ಬನಿಗೆ ನಷ್ಟ ಉಂಟು ಮಾಡಿ ಲಾಭ ಗಳಿಸುವ ಮೋಸದ ಕೃತ್ಯ ಅದು. ಹೀಗೆ, ಅದು ಎರಡು ಅಂಶಗಳನ್ನು ಹೊಂದಿರುತ್ತದೆ: ಲಾಭವನ್ನು ಹೊಂದುವ ಉದ್ದೇಶ ಅಥವಾ ಅನುಕೂಲ ಸಾಧಿಸಿಕೊಳ್ಳುವುದು ಒಂದೆಡೆಯಾದರೆ, ನಷ್ಟ ಉಂಟು ಮಾಡುವುದು ಇನ್ನೊಂದೆಡೆ.
ದೇಶದಲ್ಲಿ ಎಷ್ಟು ರೀತಿಯ ಮತ್ತು ಸಂಖ್ಯೆಯ ವಂಚನೆಗಳಿವೆ ಎಂಬುದನ್ನು ನಿರ್ದಿಷ್ಟವಾಗಿ ಹಾಗೂ ನಿಖರವಾಗಿ ಹೇಳುವುದು ಕಷ್ಟ. ಸಾಮಾನ್ಯವಾಗಿ, ವಿವಿಧ ರೀತಿಯ ವಂಚನೆ ಪ್ರರಣಗಳೊಂದಿಗೆ ವ್ಯವಹರಿಸುವುದು ನ್ಯಾಯಾಲಯಗಳ ಕೆಲಸ. ಸಾಕಷ್ಟು ವಿಸ್ತೃತವಾದ ಮೋಸ, ಇನ್ನೊಬ್ಬರ ಆಸ್ತಿಯನ್ನು ದುರ್ಮಾರ್ಗದ ದಾರಿಗಳಿಂದ ಲಪಟಾಯಿಸಿದ್ದು, ನಕಲಿ ದಾಖಲೆಗಳ ಸೃಷ್ಟಿ, ಪಿರಾಮಿಡ್ ಯೋಜನೆಗಳು, ಗ್ರಾಹಕರ ವಂಚನೆ, ವಂಚನೆ ಮಾರಾಟದಂತಹ ನಾನಾ ರೀತಿಯ ವಂಚನೆಗಳನ್ನು ಅದು ಒಳಗೊಂಡಿದೆ.
ವ್ಯಾಪಾರ ಮತ್ತು ಆರ್ಥಿಕತೆಯ ಮೇಲೆ ವಂಚನೆಯ ಪ್ರಭಾವ
ಭಾರತದ ಆರ್ಥಿಕತೆಯ ಬೆಳವಣಿಗೆ ಕೇವಲ ಆರ್ಥಿಕ ಅವಕಾಶಗಳ ಸ್ಫೋಟವನ್ನಷ್ಟೇ ಅಲ್ಲ, ವಿವಿಧ ರೀತಿಯ ವಂಚನೆಗಳಲ್ಲಿಯೂ (ಕೇವಲ ಭ್ರಷ್ಟಾಚಾರ ಮತ್ತು ಕಪ್ಪು ಹಣಕ್ಕೆ ಮಾತ್ರ ಸಂಬಂಧಿಸಿದ್ದಲ್ಲ) ತೀವ್ರ ಏರಿಕೆಯನ್ನೂ ತಂದಿದೆ. ವ್ಯಂಗ್ಯದ ಸಂಗತಿ ಏನೆಂದರೆ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗಳು ವಂಚನೆಯ ಏರಿಕೆಗೂ ಕಾರಣವಾಗಿರುವುದು.
ವಂಚನೆ ಮತ್ತು ಅದು ಸೃಷ್ಟಿಸುವ ಗಂಡಾಂತರಗಳು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಜಗತ್ತಿನಾದ್ಯಂತ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆ. ವಂಚನೆಯ ಮೇಲೆ ನಡೆಸಿರುವ ನಾನಾ ಅಧ್ಯಯನಗಳು ಜಾಗತಿಕ ವ್ಯಾಪಾರ ವಂಚನೆ ಮತ್ತು ವಂಚನೆಯೊಂದಿಗೆ ಸೇರಿಕೊಂಡಿರುವ ಗಂಡಾಂತರಗಳ ಕುರಿತು ಆಸಕ್ತಿಕರ ಒಳದೃಷ್ಟಿಯನ್ನು ಒದಗಿಸಿವೆ.
ಕಳೆದ ವರ್ಷದಲ್ಲಿ ಇದ್ದಂತಹವೇ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ವಂಚನೆಗಳನ್ನು ಎದುರಿಸಿದ್ದಾಗಿ ಕಳೆದ ವರ್ಷದ ಜಾಗತಿಕವಾಗಿ ಬಹುತೇಕ ೬೨% ವಹಿವಾಟುಗಳು ಹೇಳಿಕೊಂಡಿವೆ. ಭಾರತಕ್ಕೆ ಸಂಬಂಧಿಸಿದಂತೆ ಮೂರನೇ ಒಂದು ಭಾಗದಷ್ಟು ವಹಿವಾಟುಗಳು ಆಂತರಿಕ ಅಥವಾ ಬಾಹ್ಯ ವಂಚನೆಗಳಿಂದಾಗಿ ತೊಂದರೆ ಅನುಭವಿಸಿವೆ. ಕೆಲ ರೀತಿಯ ವಂಚನೆ ಅಥವಾ ಆರ್ಥಿಕ ಅಪರಾಧಗಳಿಂದಾಗಿ ತಮ್ಮ ಕಂಪನಿಗಳು ತೊಂದರೆ ಎದುರಿಸಬೇಕಾಯಿತು ಎಂದು ೨೦೧೮ರಲ್ಲಿ ಶೇಕಡಾ ೪೯ರಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದು, ೨೦೧೬ರಲ್ಲಿ ಈ ಪ್ರಮಾಣ ಶೇಕಡಾ ೩೬ರಷ್ಟಿತ್ತು ಎಂಬುದನ್ನು ಇತ್ತೀಚಿನ ಸಮೀಕ್ಷೆಯೊಂದು ಬೊಟ್ಟು ಮಾಡಿ ತೋರಿಸಿದೆ.
ವಂಚನೆ ವಿಧಾನಗಳ ಶುದ್ಧ ಸಂಕೀರ್ಣತೆ ಮತ್ತು ಮಾದರಿಗಳು ಪ್ರತಿ ವರ್ಷ ಯಾವ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆಯೆಂದರೆ, ತಮ್ಮನ್ನು ಮತ್ತು ತಮ್ಮ ಗ್ರಾಹಕರನ್ನು ವಂಚನೆಯಿಂದ ರಕ್ಷಿಸಿಕೊಳ್ಳುವ ವಿಶ್ವಾಸ ಈಗ ಕೆಲವೇ ಉದ್ಯಮಿಗಳಲ್ಲಿ ಮಾತ್ರ ಉಳಿದಿದೆ. ಇದರ ಪರಿಣಾಮವಾಗಿ, ವಂಚನೆ ಸಾಧ್ಯತೆ ಪ್ರಮಾಣವನ್ನು ತಗ್ಗಿಸಲು ಕೈಗೊಳ್ಳಬೇಕಾದ ಕ್ರಮಗಳಿಗೆ ಕಂಪನಿಗಳು ಹೆಚ್ಚು ಹಣ ಹೂಡುವ ಒತ್ತಡಕ್ಕೆ ಸಿಲುಕಿದ್ದು, ಇದು ಅವುಗಳ ಬಂಡವಾಳ ಹೂಡಿಕೆಗಳ ಮೇಲೆ ಏಟು ಕೊಡುತ್ತಿದೆ.
ವಂಚನೆಯ ಒಂದು ಪ್ರಮುಖ ಹಾಗೂ ಸಮಸ್ಯಾತ್ಮಕ ಅಂಶ ಏನೆಂದರೆ, ಇತ್ತೀಚಿನ ದಿನಗಳಲ್ಲಿ ವಂಚನೆ ಮತ್ತು ಆರ್ಥಿಕ ಅಪರಾಧಗಳು ಸಂಸ್ಥೆಯ ಒಳಗಿನ ಕುತಂತ್ರಿಗಳು ಅಥವಾ ಪರಸ್ಪರ ಚೆನ್ನಾಗಿ ಪರಿಚಯ ಇರುವವರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿರುವುದು. ವಾಣಿಜ್ಯದ ಅತಿ ದೊಡ್ಡ ಗಂಡಾಂತರಗಳಲ್ಲಿ ಆಂತರಿಕ ಮಾಹಿತಿಯ ಸೋರಿಕೆ (ಶೇ. ೩೯), ದತ್ತಾಂಶ ಕಳವು (ಶೇ. ೨೮), ಮೂರನೇ ಪಕ್ಷಗಾರರಿಂದಾಗುವ ಪ್ರತಿಷ್ಠೆ ನಾಶ (ಶೇ. ೨೯), ಬಾಹ್ಯ ವ್ಯಕ್ತಿಗಳಿಂದ ವಂಚನೆ (ಶೇ. ೨೮), ಆಂತರಿಕ ವ್ಯಕ್ತಿಗಳಿಂದ ವಂಚನೆ (ಶೇ. ೨೭), ಬೌದ್ಧಿಕ ಹಕ್ಕುಗಳ ಕಳವು (ಶೇ. ೨೪), ನಕಲು ಮಾಡುವುದು (ಶೇ. ೧೭), ಕಪ್ಪು ಹಣ ಬಿಳಿಯಾಗಿಸುವುದು (ಶೇ. ೧೬) ಸೇರಿವೆ ಎಂಬುದನ್ನು ಇತ್ತೀಚಿನ ಜಾಗತಿಕ ಸಮೀಕ್ಷೆಯೊಂದು ಬೊಟ್ಟು ಮಾಡಿ ತೋರಿಸಿದೆ.
ಭಾರತದಲ್ಲಿ ಕೂಡಾ ಇದು ತೀರಾ ಭಿನ್ನವಾಗೇನೂ ಇಲ್ಲ. ಬಹುತೇಕ ಪ್ರಕರಣಗಳಲ್ಲಿ (ಶೇ. ೪೫) ಆಂತರಿಕ ವಂಚನೆಯಿಂದಾಗಿ ವ್ಯಾಪಾರದ ಮೇಲೆ ಪರಿಣಾಮ ಆಗುವಲ್ಲಿ ಉದ್ಯೋಗಿಗಳ ಪಾತ್ರವೇ ಪ್ರಮುಖವಾಗಿದ್ದರೆ, ಶೇ. ೨೯ರಷ್ಟು ಪರಿಣಾಮ ಸಂಬಂಧಿಸಿದ ವ್ಯಕ್ತಿಗಳು ಅಥವಾ ಮೂರನೇ ಪಕ್ಷಗಾರರಿಂದ ಆಗಿದೆ. ಕೇವಲ ಶೇ. ೩ರಷ್ಟು ಆಂತರಿಕ ವಂಚನೆಗಳು ಹಾಗೂ ಶೇ. ೭ರಷ್ಟು ಬಾಹ್ಯ ವಂಚನೆಗಳು ಮಾತ್ರ ಗೊತ್ತಿರದ ಅಥವಾ ಬಿಡಿ ವ್ಯಕ್ತಿಗಳಿಂದಾಗಿ ಆಗಿವೆ. ಇನ್ನೊಂದು ಸಮಸ್ಯಾತ್ಮಕ ಅಂಶವೇನೆಂದರೆ, ಕಂಪನಿಯ ವಂಚನೆಗಳ ಹೆಚ್ಚಳಕ್ಕೆ ಹಿರಿಯ ಮ್ಯಾನೇಜರ್‌ಗಳೇ ಕಾರಣವಾಗುತ್ತಿರುವುದು. ೨೦೧೬ರಲ್ಲಿ ಶೇ. ೧೬ರಷ್ಟಿದ್ದ ಇಂತಹ ಪ್ರಕರಣಗಳು ೨೦೧೮ರಲ್ಲಿ ಶೇ. ೨೪ಕ್ಕೆ ಏರಿಕೆಯಾಗಿವೆ.