ನವದೆಹಲಿ:ಕೇಂದ್ರ ಸರ್ಕಾರದ ಎಲ್ಲ ನೌಕರರೂ ಆರೋಗ್ಯ ಸಚಿವಾಲಯದ ಆರೋಗ್ಯ ಸೇತು ಆ್ಯಪ್ ತಕ್ಷಣವೇ ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಸಿಬ್ಬಂದಿ ಸಚಿವಾಲಯ ಆದೇಶಿಸಿದೆ.
ಈ ಕುರಿತು ಸಿಬ್ಬಂದಿ ಸಚಿವಾಲಯ ಜ್ಞಾಪನಾ ಪತ್ರ ಹೊರಡಿಸಿದೆ. ಯಾವುದೇ ಸಿಬ್ಬಂದಿ ಕಚೇರಿಗೆ ಬರುವ ಮೊದಲು ಆ್ಯಪ್‌ನಲ್ಲಿ ತಮ್ಮ ಆರೋಗ್ಯ ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳಬೇಕು. ಅಪ್ಲಿಕೇಶನ್ ತಾವು ಸುರಕ್ಷಿತ ಎಂದು ಹೇಳಿದಾಗ ಮಾತ್ರ ಕಚೇರಿಗೆ ಬರಬೇಕು ಎಂದು ಸಿಬ್ಬಂದಿ ಸಚಿವಾಲಯ ಸೂಚಿಸಿದೆ.
ಅಲ್ಲದೇ ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದರೆ ಸ್ಥಳದ ಆಧಾರದ ಮೇಲೆ ಅಪ್ಲಿಕೇಶನ್ ಹೆಚ್ಚಿನ ಅಪಾಯದ ಕುರಿತು ಮುನ್ಸೂಚನೆ ನೀಡಿದರೆ, ಕೂಡಲೇ ಅಂತಹ ನೌಕರರು 14 ದಿನಗಳ ಕಾಲ ತಾವಾಗೇ ಗೃಹ ಬಂಧನಕ್ಕೆ ಒಳಪಡಬೇಕು ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಇನ್ನು ಕೊರೊನಾ ಪಾಸಿಟಿವ್ ಎಂದು ವರದಿಯಾದ ಯಾರೊಂದಿಗಾದರೂ ಸಂಪರ್ಕಕ್ಕೆ ಬಂದಲ್ಲಿ ಬಳಕೆದಾರರಿಗೆ ಮಾಹಿತಿ ನೀಡುವಂತೆ ಆರೋಗ್ಯ ಸೇತು ಅಪ್ಲಿಕೇಷನ್ ರೂಪಿತವಾಗಿದೆ. ಟ್ರ್ಯಾಕಿಂಗ್ ಅನ್ನು ಬ್ಲೂಟೂತ್ ಮತ್ತು ಸೋಷಿಯಲ್ ಗ್ರಾಫ್ ಮೂಲಕ ಈ ಆ್ಯಪ್ ಕಾರ್ಯನಿವಹಿಸುತ್ತೆ. ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಇದನ್ನು ಅಭಿವೃದ್ಧಿಗೊಳಿಸಲಾಗಿದೆ.