ನವದೆಹಲಿ :ಸರ್ಕಾರಿ ಸೌಲಭ್ಯಗಳು ಆನ್‌ಲೈನ್ ಮೂಲಕ ಸಿಕ್ಕಿ ಜನರ ಜೀವನವನ್ನು ಸುಲಭಗೊಳಿಸಲು ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ. ಇದೀಗ ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ಸರ್ಕಾರದ ವಿವಿಧ ಇಲಾಖೆಗಳ ಮಾಹಿತಿ ನೀಡುವ ಉಮಾಂಗ್ ಆ್ಯಪ್‌ನಲ್ಲಿ ಭಾರತದ ಹವಾಮಾನ ಇಲಾಖೆ (ಐಎಂಡಿ) ಸೇವೆಗಳನ್ನು ಸೇರಿಸಲಾಗಿದೆ.
ಐಎಂಡಿಯನ್ನು ಉಮಾಂಗ್ ಆ್ಯಪ್ಗೆ ಸೇರಿಸಿದ್ದರಿಂದ ಹವಾಮಾನಕ್ಕೆ ಸಂಬಂಧಪಟ್ಟಂತೆ ಸುಮಾರು 7 ಬಗೆಯ ಮಾಹಿತಿಗಳು ಮೊಬೈಲ್ ಅಪ್ಲಿಕೇಶನ್ನಲ್ಲಿ ಲಭ್ಯವಾಗಲಿದೆ.
ಪ್ರಸ್ತುತ ಹವಾಮಾನ :ದೇಶದ ಸುಮಾರು 150 ನಗರಗಳ ಪ್ರಸ್ತುತ ತಾಪಮಾನ, ತೇವಾಂಶ, ಗಾಳಿಯ ವೇಗ , ಸೂರ್ಯೋದಯ / ಸೂರ್ಯಾಸ್ತ ಮತ್ತು ಚಂದ್ರೋದಯ ಸೇರದಂತೆ ಎಲ್ಲಾ ಮಾಹಿತಿಗಳು ಉಮಾಂಗ್ನಲ್ಲಿ ಲಭ್ಯವಾಗಲಿದೆ. ಈ ಮಾಹಿತಿಗಳನ್ನು ದಿನಕ್ಕೆ 8 ಬಾರಿ ಮಾರ್ಪಾಡು ಮಾಡಲಾಗುತ್ತದೆ.
ಸ್ಥಳೀಯ ಹವಾಮಾನ :ಸ್ಥಳೀಯ ಹವಾಮಾನ ಮಾಹಿತಿಯನ್ನು ಸುಮಾರು 800 ಹವಾಮಾನ ಕೇಂದ್ರಗಳ ಮೂಲಕ ಉಮಾಂಗ್ ಒದಗಿಸಲಿದ್ದು, ಏನಾದರೂ ಹವಾಮಾನ ವೈಪರೀತ್ಯ ಸಂಭವಿಸುವುದಾದರೆ ಮೂರು ಗಂಟೆಗಳ ಮುಂಚಿತವಾಗಿ ಎಚ್ಚರಿಕೆಯನ್ನೂ ನೀಡಲಿದೆ.
ನಗರ ಮುನ್ಸೂಚನೆ : ಭಾರತದ 450 ನಗರಗಳಲ್ಲಿ ಸುಮಾರು 24 ಗಂಟೆಗಳ ಮತ್ತು 7 ದಿನಗಳ ಹವಾಮಾನ ಪರಿಸ್ಥಿತಿಗಳ ಮುನ್ಸೂಚನೆಯನ್ನು ಉಮಾಂಗ್ ನೀಡಲಿದೆ.
ಮಳೆ ಮಾಹಿತಿ : ದೇಶದ ಎಲ್ಲಾ ಜಿಲ್ಲೆಗಳ ಮಳೆ ಮಾಹಿತಿಯನ್ನು ಪ್ರತಿದಿನ, ವಾರಕ್ಕೆ, ತಿಂಗಳಿಗೆ ಮತ್ತು ಸಂಚಿತ ಸರಣಿಗಳ ಮೂಲಕ ನೀಡಲಿದೆ.
ಪ್ರವಾಸೋದ್ಯಮ ಮುನ್ಸೂಚನೆ : ದೇಶದ ಸುಮಾರು 100 ಪ್ರವಾಸಿ ನಗರಗಳ ಹವಾಮಾನ ಪರಿಸ್ಥಿತಿಗಳ ಹಿಂದಿನ 24 ಗಂಟೆಗಳ ಮತ್ತು ವಾರದ ಮುನ್ಸೂಚನೆಯನ್ನು ಒದಗಿಸುತ್ತದೆ.
ಎಚ್ಚರಿಕೆ : ಹವಾಮಾನದ ವೈಪರೀತ್ಯದ ಬಗ್ಗೆ ನಾಗರಿಕರಿಗೆ ಎಚ್ಚರಿಸಲು ಈ ಅಪ್ಲಿಕೇಷನ್‌ನಲ್ಲಿ ಎಚ್ಚರಿಕೆ ಆಯ್ಕೆಯನ್ನು ನೀಡಲಾಗಿದೆ. ಇದು ಕೆಂಪು, ಕಿತ್ತಳೆ ಮತ್ತು ಹಳದಿ ಬಣ್ಣಗಳಲ್ಲಿ ಕೋಡೆಡ್ ಆಗಿದೆ, ಇಲ್ಲಿ ಕೆಂಪು ಬಣ್ಣವನ್ನು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಮುಂದಿನ ಐದು ದಿನಗಳವರೆಗೆ ಎಲ್ಲಾ ಜಿಲ್ಲೆಗಳಲ್ಲಿ ದಿನಕ್ಕೆ ಎರಡು ಬಾರಿ ಈ ಸೂಚನೆಯನ್ನೂ ನೀಡಲಾಗುತ್ತದೆ.
ಚಂಡಮಾರುತ : ಚಂಡಮಾರುತದ ಎಚ್ಚರಿಕೆಯನ್ನೂ ನೀಡಲಿದ್ದು, ಬಿರುಗಾಳಿಯ ಟ್ರ್ಯಾಕ್ ಜೊತೆಗೆ ಕರಾವಳಿಯನ್ನು ದಾಟುವ ಸಮಯ ಮತ್ತು ಕೇಂದ್ರಬಿಂದು ಒದಗಿಸಲಿದೆ. ಅಲ್ಲದೆ ಚಂಡಮಾರುತದ ಕುರಿತ ಎಚ್ಚರಿಕೆಯನ್ನು, ಪ್ರದೇಶ , ಜಿಲ್ಲಾವಾರು ನೀಡಲಿದೆ. ಇದರಿಂದ ಅಸುರಕ್ಷಿತ ಪ್ರದೇಶಗಳ ಜನರನ್ನು ಸ್ಥಳಾಂತರಿಸಲು ಮತ್ತು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಹಕಾರಿಯಾಗಲಿದೆ.
ಇತ್ತೀಚೆಗೆ ಉಮಾಂಗ್ ಆ್ಯಪ್‌ನಲ್ಲಿ ಐಎಂಡಿ ಸೇವೆಗಳನ್ನು ಎಂಒಇಎಸ್ ಕಾರ್ಯರ್ಶಿ ಉದ್ಘಾಟಿಸಿದರು. ಉಮಾಂಗ್ ಮೊಬೈಲ್ ಅಪ್ಲಿಕೇಶನ್ ( ಯುನಿಫೈಡ್ ಮೊಬೈಲ್ ಅಪ್ಲಿಕೇಶನ್ ಫಾರ್ ನ್ಯೂ-ಏಜ್ ಗವರ್ನೆನ್ಸ್) ಇದು ಭಾರತದ ಸರ್ಕಾರದ ಬಹುಭಾಷಾ, ಬಹುಸೇವಾ ಮೊಬೈಲ್ ಅಪ್ಲಿಕೇಶನ್ ಆಗಿದೆ. 2017ರಲ್ಲಿ ಪ್ರಧಾನಿ ಮೋದಿ ಈ ಮೊಬೈಲ್ ಆ್ಯಪ್ ಲೋಕಾರ್ಪಣೆ ಮಾಡಿದ್ದರು.
25 ರಾಜ್ಯಗಳಿಂದ 27 ಇಲಾಖೆಗಳ 6 ಪಾವತಿ ಸೇರಿದಂತೆ 60 ಸೇವೆಗಳು ಲಭ್ಯವಿದೆ. ಆಂಡ್ರಾಯ್ಡ್, ಐಒಎಸ್‌ನ ಒಟ್ಟು 2.1 ಕೋಟಿ ಬಳಕೆದಾರರಿದ್ದಾರೆ.