ಹೈದರಾಬಾದ್(ತೆಲಂಗಾಣ): ಹೈದರಾಬಾದ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಸಂಶೋಧಕರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(ಕೃತಕ ಬುದ್ಧಿಮತ್ತೆ) ಚಾಲಿತ ಕೋವಿಡ್-19 ಪರೀಕ್ಷಾ ಕಿಟ್ ಅಭಿವೃದ್ಧಿಪಡಿಸಿದ್ದು, ಇದನ್ನು ಕಡಿಮೆ ವೆಚ್ಚದಲ್ಲಿ ನಿರ್ವಹಿಸಬಹುದಾಗಿದೆ.
ರೋಗಲಕ್ಷಣ ಹೊಂದಿರುವ ಮತ್ತು ಲಕ್ಷಣರಹಿತ ರೋಗಿಗಳ ಪರೀಕ್ಷಾ ಫಲಿತಾಂಶವನ್ನು ಈ ಕಿಟ್ ಸುಮಾರು 20 ನಿಮಿಷಗಳಲ್ಲಿ ನೀಡುತ್ತದೆ.
ಹೈದರಾಬಾದ್‌ನ ಇಎಸ್ಐಸಿ ವೈದ್ಯಕೀಯ ಕಾಲೇಜಿನಲ್ಲಿ ಈ ಟೆಸ್ಟ್ ಕಿಟ್‌ನ ಸಾಮರ್ಥ್ಯದ ಪರೀಕ್ಷೆಯನ್ನು ಈಗಾಗಲೇ ನಡೆಸಲಾಗಿದೆ. ಇದನ್ನು ತ್ವರಿತವಾಗಿ ಸಾಗಿಸಬಹುದಾಗಿದ್ದು, ತಕ್ಷಣ ಪರೀಕ್ಷೆ ನಡೆಸಲು ಅನುಕೂಲವಾಗಿದೆ.
ಈ ಪರೀಕ್ಷಾ ಕಿಟ್‌ನ ಪ್ರಮುಖ ಪ್ರಯೋಜನವೆಂದರೆ ಇದಕ್ಕೆ ಆರ್‌ಟಿ-ಪಿಸಿಆರ್ (ರಿವರ್ಸ್ ಟ್ರಾನ್ಸ್‌ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್) ಅಗತ್ಯವಿಲ್ಲ. ಪ್ರತಿ ಪರೀಕ್ಷೆಯ ಬೆಲೆ ಸುಮಾರು 600ರೂ. ಆಗಲಿದೆ. ಆದರೆ ಪರೀಕ್ಷಾ ಕಿಟ್‌ನ ಸಾಮೂಹಿಕ ಉತ್ಪಾದನೆಯು ಪ್ರತಿ ಪರೀಕ್ಷೆಯ ವೆಚ್ಚವನ್ನು ಸುಮಾರು 350ರೂ.ಗೆ ಇಳಿಸುವ ಸಾಧ್ಯತೆ ಇದೆ.
ಐಐಟಿ ಹೈದರಾಬಾದ್‌ನ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಶಿವ ಗೋವಿಂದ್ ಸಿಂಗ್ ನೇತೃತ್ವದ ತಂಡವು ಈ ಪರೀಕ್ಷಾ ಕಿಟ್ ಅಭಿವೃದ್ಧಿಪಡಿಸಿದೆ. ಪೋಸ್ಟ್‌ಡಾಕ್ಟರಲ್ ಸಹವರ್ತಿ ಡಾ. ಸೂರ್ಯಸ್ನಾತಾ ತ್ರಿಪಾಠಿ, ನಾಲ್ಕನೇ ವರ್ಷದ ಡಾಕ್ಟರೇಟ್ ವಿದ್ಯಾರ್ಥಿ ಪಟ್ಟಾ ಸುಪ್ರಜಾ ಮತ್ತು ಪ್ರೊ. ಶಿವ ಗೋವಿಂದ್ ಸಿಂಗ್ ಅವರ ಸಂಶೋಧನಾ ತಂಡದೊಂದಿಗೆ ಇತರೆ ವಿದ್ಯಾರ್ಥಿಗಳು ಕಿಟ್ ತಯಾರಿಸಿದ್ದಾರೆ. ಇವರಿಗೆ ಸಂಸ್ಥೆಯ ಅಧ್ಯಾಪಕರು ಮತ್ತು ಧನಸಹಾಯ ಸಂಸ್ಥೆಗಳು ಸಹಾಯ ನೀಡಿವೆ.