ನವದೆಹಲಿ: ಕೊರೊನಾ ಸಂಕಷ್ಟದ ವಿರುದ್ಧ ಲಸಿಕೆ ಹುಡುಕಾಟ ತೀವ್ರವಾಗಿರುವ ಸಂದರ್ಭದಲ್ಲಿಯೇ ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಡಿ ಆರಂಭವಾಗಿದ್ದ ಎರಡು ಸ್ಟಾರ್ಟ್ಅಪ್ಗಳು ಜಂಟಿಯಾಗಿ ಆ್ಯಂಟಿ ವೈರಲ್ (ಸೋಂಕು ತಡೆ) ಟಿ-ಶರ್ಟ್ಗಳು ಮತ್ತು ಕೋವಿಡ್ ಪ್ರೊಟೆಕ್ಷನ್ ಲೋಷನ್ ಅನ್ನು ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಿವೆ.
ಇ-ಟೆಕ್ಸ್ ಮತ್ತು ಕ್ಲೆನ್ಸ್ಟಾ ಎಂಬ ಎರಡು ಸ್ಟಾರ್ಟ್ಅಪ್ಗಳು ಈ ಆ್ಯಂಟಿ ವೈರಲ್ ಕಿಟ್ ಅಭಿವೃದ್ಧಿ ಪಡಿಸಿದ್ದು, ಇನ್ಸ್ಸ್ಟಿಟ್ಯೂಟ್ನ ನಿರ್ದೇಶಕ ವಿ.ರಾಮಗೋಪಾಲ್ ರಾವ್ ಲೋಕಾರ್ಪಣೆ ಮಾಡಿದರು.
ಈ ಕಿಟ್ನೊಳಗೆ ಕ್ಲೆನ್ಸ್ಟಾ ಪ್ರೊಟೆಕ್ಷನ್ ಲೋಷನ್, ಹ್ಯಾಂಡ್ ಸ್ಯಾನಿಟೈಸರ್, ಇ-ಟೆಕ್ಸ್ ಕವಚ, ಆ್ಯಂಟಿ ವೈರಲ್ ಟಿ-ಶರ್ಟ್ ಮತ್ತು ಮಾಸ್ಕ್ ಸಹ ಒಳಗೊಂಡಿದೆ. ಈ ಉತ್ಪನ್ನಕ್ಕೆ ಐಐಟಿಯ ರಾಸಾಯನಿಕ ಮತ್ತು ಟೆಕ್ಸ್ಟೈಲ್ ವಿಭಾಗದ ತಜ್ಞರು ಸಹಮತ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಇ-ಟೆಕ್ಸ್ ಸ್ಟಾರ್ಟ್ಅಪ್ನಿಂದ ಸೋಂಕು ತಡೆ ಬಟ್ಟೆಯನ್ನು ಸುಧಾರಿತ ತಂತ್ರಜ್ಞಾನವನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ. ಇದು ವ್ಯಕ್ತಿಯ ಸಂಪರ್ಕಕ್ಕೆ ಬರುವ ಸೂಕ್ಷ್ಮ ಜೀವಿಗಳನ್ನು ನಾಶಮಾಡುವ ಮೂಲಕ ಸೋಂಕು ಹರಡುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಆ್ಯಂಟಿ ಮೈಕ್ರೊಬಿಯಲ್ ಬಟ್ಟೆಯು 30 ಬಾರಿ ನೀರಿನಿಂದ ತೊಳೆದರೂ ಸಹ ಬಳಕೆಗೆ ಯೋಗ್ಯವಾಗಿರಲಿದೆ. ಅಲ್ಲದೆ ಇದು ಸ್ಥಳಿಯ ಗಾರ್ಮೆಂಟ್ ಹಾಗೂ ಒಟ್ಟೆ ಉದ್ಯಮದ ಆರ್ಥಿಕತೆಯನ್ನು ಮೇಲೆತ್ತಲೂ ಸಹಾಯ ಮಾಡುತ್ತದೆ ಎಂದು ಐಐಟಿ ದೆಹಲಿ ಇಂಜಿನಿಯರಿಂಗ್ ಹಾಗೂ ಜವಳಿ ಮತ್ತು ಫೈಬರ್ ವಿಭಾಗದ ಮುಖ್ಯಸ್ಥ ಬಿಪಿನ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ ಕ್ಲೆನ್ಸ್ಟಾ ಹೆಸರಿನ ಕೋವಿಡ್ ಲೋಷನ್ 24 ಗಂಟೆಗಳ ಸುರಕ್ಷತೆ ನೀಡುವುದಲ್ಲದೆ ಶೇ. 99.9ರಷ್ಟು ವೈರಸ್ಗಳಿಂದಲೂ ರಕ್ಷಣೆ ನೀಡಲಿದೆ ಎಂದಿದ್ದಾರೆ.
ಇದು ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿ ಮಾಡದೆ ಬ್ಯಾಕ್ಟೀರಿಯಾ, ವೈರಸ್ಗಳನ್ನು ತಡೆಗಟ್ಟಲು ತಯಾರಾದ ಮೊದಲ ದೀರ್ಘಕಾಲದ ಆ್ಯಂಟಿವೈರಲ್ ತಂತ್ರಜ್ಞಾನ (ಪಿಎಪಿ-ಪ್ರೊಲಾಂಗ್ ಆ್ಯಂಟಿ ವೈರಲ್ ಟೆಕ್ನಾಲಜಿ) ಇದಾಗಿದೆ. ಇದರಿಂದಾಗಿ ಪರಿಣಾಮಕಾರಿಯಾಗಿ ಸೋಂಕು ತಡೆಗಟ್ಟಬಹುದು ಎಂದಿದ್ದಾರೆ.