ಪಣಜಿ: 50ನೇ ಭಾರತೀಯ ಚಲನಚಿತ್ರೋತ್ಸವ ಪಣಜಿಯ ಡಾ. ಶ್ಯಾಮಪ್ರಸಾದ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಚಾಲನೆಗೊಂಡಿತು. ಭಾರತೀಯ ಚಿತ್ರರಂಗದ ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತುಂಬಿದರು.
ಸಾಂಪ್ರದಾಯಿಕ ರೀತಿಯಲ್ಲಿ ಮುಖ್ಯ ಅತಿಥಿಗಳು ಜ್ಯೋತಿ ಬೆಳಗುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಉತ್ಸವಕ್ಕೆ ಖ್ಯಾತ ಗಾಯಕ ಶಂಕರ್ ಮಹದೇವನ್ ತಂಡದವರು ಮೆರುಗು ತಂದುಕೊಟ್ಟರು. ಇದೇ ವೇಳೆ, ಇತ್ತೀಚೆಗೆ ನಿಧನರಾದ ಮನೋಹರ್ ಪರಿಕ್ಕರ್ ಅವರನ್ನು ಸ್ಮರಿಸಲಾಯಿತು. ಅವರ ಜೀವನಕ್ಕೆ ಸಂಬಂಧಿಸಿದ ಕಿರುಚಿತ್ರವನ್ನು ಸಹ ಪ್ರದರ್ಶಿಸಲಾಯಿತು.
ಇದೇ ಸಂದರ್ಭದಲ್ಲಿ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು 'ಸ್ಪೆಷಲ್ ಐಕಾನ್ ಪ್ರಶಸ್ತಿ' ಸ್ವೀಕರಿಸುತ್ತಿದ್ದಂತೆ ಇಡೀ ಸಭಾಂಗಣವೇ ಎದ್ದು ನಿಂತ ಚಪ್ಪಾಳೆಯ ಕರತಾಡನ ಮೊಳಗಿತು. ಜನರೆಲ್ಲಾ ಎದ್ದು ನಿಂತು ಅಭಿನಂದಿಸಿದರು.
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಂದ ಪ್ರತಿಷ್ಠಿತ ಗೌರವ ಸ್ವೀಕರಿಸಿ ಮಾತನಾಡಿದ ರಜನಿಕಾಂತ್, ಈ ಗೌರವವನ್ನು ನಾನು ನನ್ನ ಚಿತ್ರಗಳ ನಿರ್ಮಾಪಕರಿಗೆ, ನಿರ್ದೇಶಕರಿಗೆ, ತಂತ್ರಜ್ಞರಿಗೆ ಸಲ್ಲಿಸುತ್ತೇನೆ. ಹಾಗೆಯೇ ನನ್ನ ಅಭಿಮಾನಿಗಳನ್ನು ಎಂದೂ ಮರೆಯಲಾರೆ ಎಂದರು.
ನನ್ನ ಎಲ್ಲ ಚಲನಚಿತ್ರ ಸಹೋದ್ಯೋಗಿಗಳಿಗೆ ತುಂಬಾ ಕೃತಜ್ಞನಾಗಿ ಇರುತ್ತೇನೆ, ಎಲ್ಲಕ್ಕಿಂತ ಹೆಚ್ಚಾಗಿ ನನ್ನೊಂದಿಗೆ ನಿಂತ ನಿಮಗೆ ನಾನು ಕೃತಜ್ಞನಾಗಿದ್ದೇನೆ. ನಾನು ನಿಮಗೆ ಹೆಚ್ಚು ಋಣಿಯಾಗಿದ್ದೇನೆ. ಈ ಸಾಲವನ್ನು ನಾನು ಎಂದಿಗೂ ಮರುಕಳಿಸಲು ಬಯಸುವುದಿಲ್ಲ ಎಂದು ಅಭಿಮಾನಿಗಳಿಗೆ ವಂದಿಸಿದರು.
ಎಂಟು ದಿನಗಳ ಕಾಲ ನಡೆಯುವ ಚಿತ್ರೋತ್ಸವದಲ್ಲಿ ಭಾರತವೂ ಸೇರಿದಂತೆ ಜಗತ್ತಿನ 68 ದೇಶಗಳ 200ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಚಿತ್ರೋತ್ಸವ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಮೂರು ಭಾರತೀಯ ಸಿನಿಮಾಗಳು ಸೇರಿ 15 ಸಿನಿಮಾಗಳು ನಡುವೆ ಸ್ವರ್ಣ ಮಯೂರ ಪುರಸ್ಕಾರಕ್ಕೆ ಪೈಪೋಟಿ ನಡೆಯಲಿದೆ.
ಭಾರತೀಯ ಪನೋರಮಾ ವಿಭಾಗದಲ್ಲಿ ಬಾಲಿವುಡ್ನ ನಾಲ್ಕು ಮುಖ್ಯವಾಹಿನಿ ಸಿನಿಮಾಗಳ ಜೊತೆಗೆ ಭಾರತೀಯ ಭಾಷೆಗಳ 22 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಈ ವಿಭಾಗದಲ್ಲಿ ಮಲಯಾಳಂ ಮತ್ತು ಬಂಗಾಳಿ ಸಿನಿಮಾಗಳದ್ದೇ ಸಿಂಹಪಾಲು. 6 ಮಲಯಾಳಂ, 5 ಬಂಗಾಳಿ, 4 ತಮಿಳು. ಮರಾಠಿ ಮತ್ತು ಹಿಂದಿಯ ತಲಾ ಎರಡು ಹಾಗೂ ತುಳು, ಲಡಾಕಿ, ಜಾಸ್ರಿ ಭಾಷೆಗಳ ತಲಾ ಒಂದೊಂದು ಚಿತ್ರಗಳು ಪ್ರದರ್ಶನಗೊಳ್ಳಲಿವೆ.