ನವದೆಹಲಿ:ರಾಜೀವ್ ಗಾಂಧಿ ಪ್ರತಿಷ್ಠಾನದ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮಾಡಿದ್ದ ಆರೋಪಕ್ಕೆ ಇದೀಗ ಮಾಜಿ ಹಣಕಾಸು ಸಚಿವ ಚಿದಂಬರಂ ತಿರುಗೇಟು ನೀಡಿದ್ದಾರೆ.ಆರ್ಜಿಎಫ್ಗೆ ನೀಡಿರುವ 20 ಲಕ್ಷ ರೂ. ಹಿಂತಿರುಗಿಸಿದ್ರೆ ಭಾರತದ ಭೂಪ್ರದೇಶದಿಂದ ಚೀನಾ ತನ್ನ ಸೇನೆಯನ್ನ ಹಿಂಪಡೆದುಕೊಳ್ಳುವುದೇ ಹಾಗೂ ಯಥಾಸ್ಥಿತಿ ಕಾಪಾಡಲಿದೆಯೇ? ಎಂದು ಅವರು ಎಂದಿದ್ದಾರೆ.
2005ರಲ್ಲಿ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸರ್ಕಾರ 20 ಲಕ್ಷ ರೂ. ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ರಾಜೀವ್ ಗಾಂಧಿ ಫೌಂಡೇಶನ್ಗೆ ವರ್ಗಾವಣೆ ಮಾಡಿತು ಎಂದು ನಡ್ಡಾ ಆರೋಪ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಈ ರೀತಿಯಾಗಿ ಟ್ವೀಟ್ ಮಾಡಿದ್ದು, ಬಿಜೆಪಿ ಆರೋಪದಲ್ಲಿ ಅರ್ಧ ಸತ್ಯವಿದೆ ಎಂದಿದ್ದಾರೆ.
ಚೀನಾ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಭರವಸೆ ನೀಡುವರೇ? ಎಂದು ಪ್ರಶ್ನೆ ಮಾಡಿರುವ ಕಾಂಗ್ರೆಸ್ ಮುಖಂಡ, ಜೆ.ಪಿ ನಡ್ಡಾ ಅರ್ಧ ಸತ್ಯ ಮಾತ್ರ ಹೇಳಿದ್ದು, ಸತ್ಯವನ್ನ ತಿರುಚಿ ಸುಳ್ಳು ಹೇಳುವ ಕೆಲಸ ಮಾಡಿದ್ದಾರೆ. ವಾಸ್ತವ ಸಂಗತಿ ಬಹಿರಂಗಪಡಿಸಿ ಎಂದಿದ್ದಾರೆ.
ಭಾರತದ ಭೂಪ್ರದೇಶವನ್ನ ಚೀನಾ ಆಕ್ರಮಿಸಿಕೊಂಡಿದೆ ಎಂಬ ಪ್ರಶ್ನೆಗೆ ಬಿಜೆಪಿ ಅಧ್ಯಕ್ಷರು ಮೊದಲು ಉತ್ತರ ನೀಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಅಂದು ಪಡೆದುಕೊಂಡಿದ್ದ ಹಣವನ್ನ ಅಂಡಮಾನ್ & ನಿಕೊಬಾರ್ ಸುನಾಮಿ ಪರಿಹಾರಕ್ಕಾಗಿ ಬಳಸಿಕೊಳ್ಳಲಾಗಿತ್ತು. ಈ ವಾಸ್ತವ ತಿಳಿದುಕೊಂಡು ಬಿಜೆಪಿ ಮಾತನಾಡಬೇಕು. ಚೀನಾ ಭಾರತದ ಗಡಿ ಪ್ರದೇಶದೊಳಗೆ ಆಕ್ರಮಣ ಮಾಡುತ್ತಿರುವ ಬಗ್ಗೆ ಗಮನಹರಿಸಿ ಎಂದು ತಿರುಗೇಟು ನೀಡಿದ್ದಾರೆ.
15 ವರ್ಷಗಳ ಹಿಂದಿನ ವಿಷಯ ಈಗ ತೆಗೆದು ಮಾತನಾಡುವ ಅವಶ್ಯಕತೆ ಏನಿದೆ. ಅದು ಮುಗಿದು ಹೋಗಿರುವ ಅಧ್ಯಾಯ. ಒಂದು ವೇಳೆ 20 ಲಕ್ಷ ರೂ ವಾಪಸ್ ಮಾಡಿದರೆ ಚೀನಾ ಈಗಾಗಲೇ ಅತಿಕ್ರಮಣ ಮಾಡಿಕೊಂಡಿರುವ ನಮ್ಮ ಭೂಪ್ರದೇಶ ಬಿಟ್ಟುಕೊಡಲಿದ್ದಾರೆ ಎಂದು ಮೋದಿ ಭರವಸೆ ನೀಡುವರೇ ಎಂದು ಕೇಳಿದ್ದಾರೆ.