ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಅಲ್ಪಸಂಖ್ಯಾತ ಸಮುದಾಯದ ಯಾರಿಗೂ ತೊಂದರೆಯಾಗುವುದಿಲ್ಲ ಎಂಬ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಯಾರಿಗೂ ತೊಂದರೆಯಾಗುವುದಿಲ್ಲ ಎಂದರೇ ಒಂದು ಸಮುದಾಯದವರನ್ನು ಏಕೆ ಹೊರಗಿಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.
ಕೋಲ್ಕತ್ತಾದಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯಿಂದ ಒಬ್ಬ ವ್ಯಕ್ತಿಯು ಪೌರತ್ವ ಕಳೆದುಕೊಳ್ಳುವುದಿಲ್ಲ ಎಂದು ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಭರವಸೆ ನೀಡಿದರು.
ಈ ಸಂಬಂಧ ಪ್ರತಿಕ್ರಿಯಿಸಿದ ಪಿ.ಚಿದಂಬರಂ ಅವರು ಸಿಎಎಯಿಂದ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಗೃಹ ಸಚಿವರು ಹೇಳುತ್ತಾರೆ. ಇದು ನಿಜವಾಗಿದ್ದರೆ, ಸಿಎಎಯಿಂದ ಯಾರಿಗೆ ತೊಂದರೆಯಾಗಲಿದೆ ಎಂದು ಅವರು ದೇಶಕ್ಕೆ ತಿಳಿಸಬೇಕು. ಸಿಎಎಯಿಂದ ಯಾರಿಗೂ ತೊಂದರೆಯಾಗದಿದ್ದರೆ, ಪ್ರಸ್ತುತ ಇರುವಂತೆ ಇರಲಿ. ಸರ್ಕಾರ ಏಕೆ ತಿದ್ದುಪಡಿ ಮಾಡಲು ಹೊರಟಿದೆ. ಅಲ್ಲದೇ ಮುಸ್ಲಿಮರನ್ನು ಕಾಯಿದೆಯಲ್ಲಿ ಉಲ್ಲೇಖಿಸಿರುವ ಅಲ್ಪಸಂಖ್ಯಾತರ ಪಟ್ಟಿಯಿಂದ ಏಕೆ ಹೊರಗಿಡಲಾಗಿದೆ" ಎಂದು ಮಾಜಿ ಹಣಕಾಸು ಸಚಿವರು ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.
ಪ್ರತಿಪಕ್ಷಗಳು ಅಲ್ಪಸಂಖ್ಯಾತರನ್ನು ಭಯಭೀತಿಗೊಳಿಸುತ್ತಿವೆ. ಸಿಎಎ ಪೌರತ್ವ ಮಾತ್ರ ನೀಡುತ್ತದೆ, ಅದನ್ನು ತೆಗೆದುಕೊಳ್ಳುವುದಿಲ್ಲ ಎಂದು ಅಲ್ಪಸಂಖ್ಯಾತ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಭರವಸೆ ನೀಡುತ್ತೇನೆ ಎಂದು ಶಾ ಹೇಳಿದ್ದರು.