ಶ್ರೀನಗರ:ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ ರಾಹುಲ್ ಗಾಂಧಿ ನೇತೃತ್ವದ ನಿಯೋಗ ಇಂದು ಕಣಿವೆ ನಾಡಿನ ಪ್ರವಾಸ ಕೈಗೊಂಡಿತ್ತು. ಆದರೆ ಶ್ರೀನಗರಕ್ಕೆ ಅವರು ತೆರಳುತ್ತಿದ್ದಂತೆ ಅವರನ್ನ ವಾಪಸ್ ಕಳುಹಿಸಲಾಗಿದೆ.
ಜಮ್ಮು-ಕಾಶ್ಮೀರದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚೆ ಮಾಡಲು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ 11 ವಿಪಕ್ಷ ನಾಯಕರು ಕಾಶ್ಮೀರಕ್ಕೆ ಆಗಮಿಸಿದ್ದರು. ಈ ನಿಯೋಗದಲ್ಲಿ ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ, ಕೆ.ಸಿ.ವೇಣುಗೋಪಾಲ್, ಸಿಪಿಐನ ಡಿ.ರಾಜಾ, ಸಿಪಿಐ(ಎಂ)ನ ಸೀತಾರಾಮ್ ಯಚೂರಿ, ಡಿಎಂಕೆಯ ತಿರುಚಿ ಶಿವಾ, ಆರ್‍ಜೆಡಿಯ ಮನೀಜ್ ಝಾ, ಟಿಎಂಸಿಯ ದಿನೇಶ್ ತ್ರಿವೇದಿ, ಎನ್‍ಸಿಪಿಯ ಮಜೀದ್ ಮೆನನ್ ಹಾಗೂ ಜೆಡಿಎಸ್‍ನ ಕುಪೇಂದ್ರ ರೆಡ್ಡಿ ಇದ್ದರು.
ಅಧಿಕಾರಿಗಳ ಬಳಿ ರಾಹುಲ್ ಮನವಿ ಆದರೆ ಇವರನ್ನ ಶ್ರೀನಗರ ವಿಮಾನ ನಿಲ್ದಾಣದಿಂದಲೇ ವಾಪಸ್ ಕಳುಹಿಸುತ್ತಿದ್ದ ವೇಳೆ ರಾಹುಲ್ ಗಾಂಧಿ ಅಲ್ಲಿನ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿದ್ದರೆ, ನಮ್ಮನ್ನು ಯಾಕೆಒಳಗೆ ಬಿಡುತ್ತಿಲ್ಲ. ಒಂದು ವೇಳೆ ಸೆಕ್ಷನ್ 144 ಜಾರಿಗೊಳಿಸಿದ್ದರೆ ನಾನೊಬ್ಬನೇ ಹೋಗಿ ನೋಡಿಕೊಂಡು ಬರುವೆ ಎಂದು ಹೇಳಿದ್ದಾರೆ. ಆದ್ರೆ ಇದಕ್ಕೆ ಅಧಿಕಾರಿಗಳು ಸೊಪ್ಪು ಹಾಕದೆ ವಾಪಸ್ ಹೋಗುವಂತೆ ಹೇಳಿದ್ದಾರೆ.
ಇದರ ಮಧ್ಯೆ ಜಮ್ಮು-ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು, ಯಾವುದೇ ಕಾರಣಕ್ಕೂ ಜಮ್ಮು ಕಾಶ್ಮೀರ ಕಣಿವೆಯಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಬೇಡಿ. ದಯವಿಟ್ಟು ಇಲ್ಲಿಂದ ವಾಪಸ್ ಹೋಗಿ ಎಂದು ಮನವಿ ಮಾಡಿಕೊಂಡಿದ್ದರು.
ರಾಹುಲ್ ಬಳಿ ಅಳಲು ತೊಡಿಕೊಂಡ ಮಹಿಳೆ!
ರಾಹುಲ್ ಗಾಂಧಿ ಜಮ್ಮು-ಕಾಶ್ಮೀರಕ್ಕಾಗಿ ವಿಮಾನ ಹತ್ತಿದ್ದ ವೇಳೆ ಮಹಿಳೆಯೊಬ್ಬರು ಅವರ ಮುಂದೆ ತಮ್ಮ ಅಳಲು ತೊಡಿಕೊಂಡಿದ್ದಾರೆ. ನನ್ನ ಸಹೋದರ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ 10 ದಿನಗಳಿಂದ ಆತನನ್ನು ಭೇಟಿ ಮಾಡಲು ನನಗೆ ಅವಕಾಶ ನೀಡುತ್ತಿಲ್ಲ. ನನಗೆ ಅಲ್ಲಿಗೆ ತೆರಳಲು ಯಾರು ಅನುಕೂಲ ಮಾಡಿಕೊಡುತ್ತಿಲ್ಲ ಎಂದು ಹೇಳಿದ್ದಾರೆ. ಇನ್ನು ಈ ಕುರಿತು ಸುದ್ದಿ ಪ್ರಸಾರ ಮಾಡಿರುವ ಖಾಸಗಿ ಸುದ್ದಿವಾಹಿನಿಯು ಮಹಿಳೆ ಇಷ್ಟೊಂದು ಕೇಳಿಕೊಳ್ಳುತ್ತಿದ್ದರೂ ರಾಹುಲ್ ಮಾತ್ರ ಅವರಿಗೆ ಯಾವುದೇ ರೀತಿಯಲ್ಲೂ ಸಮಾಧಾನ ಮಾಡಿಲ್ಲ ಎಂದು ವಿಶ್ಲೇಷಿಸಿದೆ.