ನವದೆಹಲಿ:ಮಹಾಮಳೆಗೆ ಕೇರಳದ ಇಡುಕ್ಕಿಯಲ್ಲಿ ಭೀಕರ ಭೂಕುಸಿತ ಉಂಟಾಗಿ, 10 ಮಂದಿ ಸಾವನ್ನಪ್ಪಿದ್ದು, 57ಕ್ಕೂ ಹೆಚ್ಚು ಜನರು ಅವಶೇಷಗಳಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ಈಗಾಗಲೇ ಭರದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇಡುಕ್ಕಿಯ ರಾಜಮಾಲದ ಪೆಟ್ಟಿಮುಡಿಯಲ್ಲಿ ಈ ಭೀಕರ ಭೂಕುಸಿತ ಉಂಟಾಗಿದ್ದು, ಸ್ಥಳದಲ್ಲಿ ಎನ್ಡಿಆರ್ಎಫ್, ಅರಣ್ಯ ಇಲಾಖೆ ಹಾಗೂ ಪೊಲೀಸರ ಇಲಾಖೆ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.
ಕೇರಳದ ಪೆಟ್ಟಿಮುಡಿಯಲ್ಲಿ ಭೂ ಕುಸಿತ : 7 ಮೃತ ದೇಹಗಳು ಪತ್ತೆ
ಈ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಸಾವನ್ನಪ್ಪಿದವರ ಕುಟುಂಬಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಜತೆಗೆ ಗಾಯಗೊಂಡವರಿಗೆ 50 ಸಾವಿರ ರೂ. ನೀಡುವುದಾಗಿ ಹೇಳಿದ್ದಾರೆ.
ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಾಣ ಕಳೆದುಕೊಂಡಿರುವ ವ್ಯಕ್ತಿಗಳ ಕುಟುಂಬಸ್ಥರಿಗೆ ದೇವರು ಸಾವಿನ ನೋವು ಭರಿಸುವ ಶಕ್ತಿ ನೀಡಲಿ. ಗಾಯಗೊಂಡವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಜತೆಗೆ ಘಟನೆ ನಿಜಕ್ಕೂ ನೋವು ತರಿಸಿದೆ ಎಂದಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಾಯುಸೇನೆಗೆ ಹೆಲಿಕಾಪ್ಟರ್ ನಿಯೋಜನೆ ಮಾಡುವಂತೆ ಕೇಳಿಕೊಂಡಿರುವೆ. 15 ಅಂಬ್ಯಲೆನ್ಸ್ ಘಟನಾ ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ ಎಂದಿದ್ದಾರೆ.