ನವದೆಹಲಿ: ಆಗಸ್ಟ್ 15 ರೊಳಗೆ ಭಾರತದ ಕೋವಿಡ್ ಲಸಿಕೆ 'ಕೊವಾಕ್ಸಿನ್' ಬಿಡುಗಡೆ ಮಾಡುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ನಿರ್ಧಾರ ಅವೈಜ್ಞಾನಿಕವಾದದ್ದು ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅಭಿಪ್ರಾಯ ಪಟ್ಟಿದ್ದಾರೆ.
ಮಹಾಭಾರತ ಯುದ್ಧ 18 ದಿನಗಳಲ್ಲಿ ಮುಗಿದಂತೆ, ಈಗ 21 ದಿನಗಳು ಕಾದು ನೋಡಿ. ದನದ ಸಗಣಿಯು ಕ್ಯಾನ್ಸರ್ ರೋಗಿಯನ್ನು ಗುಣಪಡಿಸಿದಂತೆ, ಶಸ್ತ್ರಚಿಕಿತ್ಸೆಯಲ್ಲಿ ಪವಾಡಗಳು ನಡೆಯುವಂತೆ, 'ಗೋ ಕೊರೊನಾ ಗೋ' ಎನ್ನುವಂತೆ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಇಂತಹ ಮನಸ್ಥಿತಿಗಳ ಮೂಲಕ ಯುದ್ಧಗಳನ್ನು ಗೆಲ್ಲಲು ಸಾಧ್ಯವಿಲ್ಲ. ಐಸಿಎಂಆರ್ನ ನಿರ್ಧಾರ ಅವೈಜ್ಞಾನಿಕವಾದದ್ದು ಎಂದು ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ.
ತ್ವರಿತಗತಿಯಲ್ಲಿ ಕೋವಿಡ್ ಲಸಿಕೆ 'ಕೊವಾಕ್ಸಿನ್'ನ ಕ್ಲಿನಿಕಲ್ ಪ್ರಯೋಗವನ್ನು ಕೈಗೊಂಡು, ಇದರ ಫಲಿತಾಂಶವನ್ನು ಆಗಸ್ಟ್ 15ರ ಒಳಗಾಗಿ ಬಿಡುಗಡೆ ಮಾಡುವಂತೆ ಕೋರಿ ಐಸಿಎಂಆರ್ ಡಿಜಿ ಬಲರಾಮ್ ಭಾರ್ಗವ ಅವರು ಭಾರತ್ ಬಯೋಟೆಕ್ ಮತ್ತು ವೈದ್ಯಕೀಯ ಕಾಲೇಜುಗಳ ಪ್ರಧಾನ ತನಿಖಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಇದನ್ನು ಕಪಿಲ್ ಸಿಬಲ್ ಇದೀಗ ಟೀಕಿಸಿದ್ದಾರೆ.