ನವದೆಹಲಿ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಚೀನಾದಿಂದ ಆಮದು ಮಾಡಿಕೊಂಡ ಆರ್‌ಟಿ-ಪಿಸಿಆರ್, ಆಂಟಿ ಬಾಡಿ ಪರೀಕ್ಷಾ ಕಿಟ್‌ಗಳಲ್ಲಿ ಕೋವಿಡ್-19 ಪರೀಕ್ಷೆ ನಡೆಸುವುದನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ ಎಂದು ಮೂಲಗಳು ತಿಳಿಸಿವೆ.
ಈ ಕಿಟ್‌ಗಳನ್ನು ಬಳಸಲಾಗುವುದೋ ಇಲ್ಲವೋ ಎಂದು ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆ ಎಂದು ಐಸಿಎಂಆರ್ ಅಧಿಕಾರಿಯೊಬ್ಬರು ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.
ತ್ವರಿತ ಹಾಗೂ ಹೆಚ್ಚಿನ ಸಂಖ್ಯೆಯ ಪರೀಕ್ಷೆ ನಡೆಸುತ್ತಿರುವ ಭಾರತಕ್ಕೆ ದೋಷವಿರುವ ಕೋವಿಡ್-19 ಕಿಟ್‌ಗಳು ಸಮಸ್ಯೆಯುಂಟುಮಾಡುತ್ತಿದೆ. ಚೀನಾದಿಂದ ತರಿಸಲಾದ ಕಿಟ್‌ಗಳಲ್ಲಿ ದೋಷವಿದೆ ಎಂದು ಪಶ್ಚಿಮ ಬಂಗಾಳ ಮೊದಲಿಗೆ ದೂರು ನೀಡಿತ್ತು. ಬಳಿಕ ಇತರ ಮೂರು ರಾಜ್ಯಗಳಿಂದ ಇದೇ ರೀತಿಯ ದೂರು ಸ್ವೀಕರಿಸಿದ ನಂತರ, ಎರಡು ದಿನಗಳವರೆಗೆ ಪರೀಕ್ಷೆಯನ್ನು ತಡೆಹಿಡಿಯಲು ನಿರ್ಧರಿಸಲಾಗಿದೆ.
ಚೀನೀ ಕಿಟ್‌ಗಳ ಬಗ್ಗೆ ಈ ಹಿಂದೆ ಸ್ಪೇನ್, ನೆದರ್‌ಲ್ಯಾಂಡ್ಸ್ ಸೇರಿದಂತೆ ಹಲವಾರು ದೇಶಗಳಿಂದ ಕೂಡಾ ದೂರುಗಳು ಕೇಳಿಬಂದಿತ್ತು. ಕಳೆದ ವಾರ ಚೀನಾದಿಂದ 5 ಲಕ್ಷ ಪರೀಕ್ಷಾ ಕಿಟ್‌ಗಳು ಬಂದಿವೆ. ಚೀನಾದಿಂದ ಬಂದಿರುವ ಹಾಗೂ ದೇಶೀಯವಾಗಿ ತಯಾರಿಸಿದ ಪರೀಕ್ಷಾ ಕಿಟ್‌ಗಳನ್ನು ಪರಿಶೀಲಿನೆಗೆ ಒಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.