ನವದೆಹಲಿ: ಈಶಾನ್ಯ ದೆಹಲಿಯ ಗಲಭೆ ಪೀಡಿತ ಚಂದ್ ಬಾಗ್ ಪ್ರದೇಶದಲ್ಲಿ ಗುಪ್ತಚರ ಇಲಾಖೆ ಅಧಿಕಾರಿ ಅಂಕಿತ್ ಶರ್ಮಾ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿ ಈಶಾನ್ಯ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಹಿಂಸಾಚಾರ ಭುಗಿಲೆದ್ದಿತ್ತು. ಈ ಪ್ರದೇಶದಲ್ಲೆ ಮೃತದೇಹ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಚಂದ್ ಬಾಗ್‌ನಲ್ಲಿ ವಾಸವಾಗಿದ್ದ ಅಂಕಿತ್ ಶರ್ಮಾ ಕಲ್ಲು ತೂರಾಟದ ವೇಳೆ ಬಲಿಯಾಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಗುರು ತೇಜ್ ಬಹದ್ದೂರ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಗುಪ್ತಚರ ಇಲಾಖೆ ಅಧಿಕಾರಿ ಮೃತದೇಹ ಪತ್ತೆಯಾದ ಘಟನೆ ಬಗ್ಗೆ ದೆಹಲಿ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಇದು ತುಂಬಾ ದುರದೃಷ್ಟಕರ ಎಂದಿದೆ. ಅಲ್ಲದೆ ಸಂತ್ರಸ್ತರನ್ನು ಮತ್ತು ಅವರ ಕುಟುಂಬಗಳನ್ನು ವೈಯಕ್ತಿಕವಾಗಿ ಭೇಟಿಯಾಗುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳಿಗೆ ತಿಳಿಸಿದೆ.