ಶ್ರೀನಗರ:ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಬಿಹಾರ ಮೂಲದ ಐಎಎಸ್ ಅಧಿಕಾರಿಯೊಬ್ಬರು ರಾಜ್ಯದ ಪ್ರಥಮ ನಿವಾಸಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ಸ್ಥಳೀಯರಲ್ಲದ ವ್ಯಕ್ತಿಯೊಬ್ಬರು ಜಮ್ಮು ಕಾಶ್ಮೀರದ ನಿವಾಸಿ ಪ್ರಮಾಣ ಪತ್ರ (ಡೊಮಿಸೈಲ್ ಸರ್ಟಿಫಿಕೇಟ್) ಪಡೆಯುತ್ತಿರುವುದು ಇದೇ ಪ್ರಥಮ ಬಾರಿಯಾಗಿದೆ. ಹೊರರಾಜ್ಯದವರಿಗೆ ಜಮ್ಮು ಕಾಶ್ಮೀರ ರಾಜ್ಯದ ನಾಗರಿಕತೆ ನಿರಾಕರಿಸುವ ಶಾಶ್ವತ ನಾಗರಿಕತೆ ಕಾಯ್ದೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ಇತ್ತೀಚೆಗೆ ತೆಗೆದು ಹಾಕಿ ಐತಿಹಾಸಿಕ ನಿರ್ಣಯ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಬಿಹಾರ ಮೂಲದ ಐಎಎಸ್ ಅಧಿಕಾರಿಯಾಗಿರುವ ನವೀನ್ ಕುಮಾರ ಚೌಧರಿ ಇವರು ಸದ್ಯ ಕಾಶ್ಮೀರ ಸರ್ಕಾರದ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಜಮ್ಮು ಕಾಶ್ಮೀರದ ನಿವಾಸಿ ಪ್ರಮಾಣ ಪತ್ರ ಪಡೆದ ಪ್ರಥಮ ವ್ಯಕ್ತಿ ಇವರಾಗಿದ್ದು, ಕಾಶ್ಮೀರದಲ್ಲಿ ಭೂಮಿ ಖರೀದಿಸುವ ಹಾಗೂ ಆಸ್ತಿ ಹೊಂದುವ ಮುಂತಾದ ಎಲ್ಲ ಹಕ್ಕುಗಳು ಈಗ ಇವರದಾಗಿವೆ.