ನವದೆಹಲಿ:ಇಂದು ಬೆಳಗ್ಗೆ 10 ಗಂಟೆಗೆ ಐದು ರಫೇಲ್ ಫೈಟರ್ ಜೆಟ್ಗಳು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿವೆ.
ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ನಡೆಯುವ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್ನ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ ಹಾಗೂ ಭಾರತದ ವಾಯುಪಡೆಯ ಉನ್ನತಾಧಿಕಾರಿಗಳು ಭಾಗವಹಿಸಲಿದ್ದಾರೆ.
ಮೊದಲ ಐದು ರಫೇಲ್ ವಿಮಾನಗಳು ಜುಲೈ 27, 2020ರಂದು ಫ್ರಾನ್ಸ್‌ನಿಂದ ಅಂಬಾಲಾದ ವಾಯುಪಡೆಯ ನಿಲ್ದಾಣಕ್ಕೆ ಬಂದಿದ್ದವು. ಇಂದಿನ ಕಾರ್ಯಕ್ರಮದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ವಾಯುಪಡೆ ಸಿಬ್ಬಂದಿ ಮುಖ್ಯಸ್ಥ ಮಾರ್ಷಲ್ ಆರ್.ಕೆ.ಎಸ್ ಭದೌರಿಯಾ, ರಕ್ಷಣಾ ಕಾರ್ಯದರ್ಶಿ ಡಾ. ಅಜಯ್ ಕುಮಾರ್, ರಕ್ಷಣಾ ಇಲಾಖೆ ಆರ್ & ಡಿ ಕಾರ್ಯದರ್ಶಿ ಡಾ. ಜಿ.ಸತೀಶ್ ರೆಡ್ಡಿ ಮತ್ತು ರಕ್ಷಣಾ ಮತ್ತು ಸಶಸ್ತ್ರ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
ಅಂಬಾಲಾದಲ್ಲಿ ರಫೇಲ್ ವಿಮಾನದ ವಿಧ್ಯುಕ್ತ ಅನಾವರಣ, ಸಾಂಪ್ರದಾಯಿಕ 'ಸರ್ವ ಧರ್ಮ ಪೂಜೆ', ರಫೇಲ್ ಮತ್ತು ತೇಜಸ್ ವಿಮಾನಗಳ ವಾಯು ಪ್ರದರ್ಶನ ನಡೆಸಲಾಗುತ್ತದೆ. ನಂತರ, ರಫೇಲ್ ವಿಮಾನಕ್ಕೆ ಸಾಂಪ್ರದಾಯಿಕ ಜಲ ಫಿರಂಗಿ ವಂದನೆ ನೀಡಲಾಗುವುದು. ರಫೇಲ್ ವಿಮಾನವನ್ನು 17 ಸ್ಕ್ವಾಡ್ರನ್‌ಗೆ ವಿಧ್ಯುಕ್ತವಾಗಿ ಸೇರ್ಪಡೆಗೊಳಿಸುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಈ ಎಲ್ಲಾ ಕಾರ್ಯಕ್ರಮಗಳ ನಂತರ ಭಾರತೀಯ ಮತ್ತು ಫ್ರೆಂಚ್ ನಿಯೋಗ ನಡುವೆ ದ್ವಿಪಕ್ಷೀಯ ಸಭೆ ನಡೆಸಲಿದೆ.