ಗಾಜಿಯಾಬಾದ್:ಭಾರತ ವಾಯುಪಡೆಯು ವಿಕಸನಗೊಳ್ಳಲಿದೆ. ಎಂಥದ್ದೇ ಸಂದರ್ಭಗಳಲ್ಲಿಯೂ ಭಾರತದ ಸಾರ್ವಭೌಮತ್ವ ಮತ್ತು ಹಿತಾಸಕ್ತಿಗಳನ್ನು ಕಾಪಾಡಲು ಸದಾ ಸಿದ್ಧವಾಗಿರುತ್ತದೆ ಎಂದು ಅಂತಾರಾಷ್ಟ್ರೀಯ ಗಡಿಯಲ್ಲಿ ಚೀನಾ ತಕರಾರು ಹಾಗು ಸೇನಾ ಸನ್ನದ್ಧತೆಯ ಹಿನ್ನೆಲೆಯಲ್ಲಿ ವಾಯುಸೇನೆ ಮುಖ್ಯಸ್ಥ ಆರ್‌ಕೆಎಸ್ ಬದೌರಿಯಾ ರಾಷ್ಟ್ರಕ್ಕೆ ಭರವಸೆ ನೀಡಿದರು.
ಭಾರತದ ಸಾರ್ವಭೌಮತ್ವ, ಹಿತಾಸಕ್ತಿಗಳನ್ನು ಕಾಪಾಡಲು ಐಎಎಫ್ ಸಿದ್ಧವಾಗಿದೆ: ಆರ್‌ಕೆಎಸ್ ಬದೌರಿಯಾ
"ನಾವು 89ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ, ಐಎಎಫ್ ಕೂಡಾ ಬದಲಾವಣೆಗೊಳಗಾಗುತ್ತಿದೆ. ನಾವು ಏರೋಸ್ಪೇಸ್ ಶಕ್ತಿಯನ್ನು ಬಳಸಿಕೊಂಡು ಸಮಗ್ರ ಕಾರ್ಯಾಚರಣೆಗಳನ್ನು ನಡೆಸುವ ಯುಗವನ್ನು ಪ್ರವೇಶಿಸುತ್ತಿದ್ದೇವೆ" ಎಂದು ಅವರು ಹೇಳಿದರು.
"ನಮ್ಮ ವಾಯುಪಡೆಯ ದೃಢತೆ ಮತ್ತು ಸಂಕಲ್ಪವು ಎಂತಹ ಸಂದರ್ಭದಲ್ಲೂ ಪೂರ್ಣ ಪ್ರಮಾಣದ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಐಎಎಫ್ ಮುಖ್ಯಸ್ಥರು ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಸ್ಕ್ವಾಡ್ರನ್ ಲೀಡರ್ ಶಿವಾಂಗಿ ರಾಜಾವತ್ ನೇತೃತ್ವದ ನಿಶಾನ್ ಟೋಲಿ ತಂಡ ವಾಯುನೆಲೆಯಲ್ಲಿ ಆಕರ್ಷಕ ಪಥ ಸಂಚಲನ ನಡೆಸಿತು. ಬಳಿಕ ವಾಯುಪಡೆಯ ವಿವಿಧ ಯುದ್ಧ ವಿಮಾನಗಳು ಆಗಸದಲ್ಲಿ ಮೈನವಿರೇಳಿಸುವ ಸಾಹಸಗಳನ್ನು ಮಾಡಿದವು. ಇತ್ತೀಚೆಗೆ ವಾಯುಪಡೆ ಸೇರಿದ ರಫೇಲ್ ಯುದ್ಧ ವಿಮಾನವೂ ಸಾಹಸದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಸಿಡಿಎಸ್ ಬಿಪಿನ್ ರಾವತ್, ಭೂಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಮತ್ತು ನೌಕಾ ಸೇನೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಭಾಗವಹಿಸಿದ್ದರು.