ಪಠಾಣ್ಕೋಟ್:ಭಾರತೀಯ ವಾಯುಸೇನೆಯ ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಇಂದು ವಾಯುಸೇನೆಗೆ ಅಮೆರಿಕ ನಿರ್ಮಿತ ಎಂಟು ಅಪಾಚೆ ಎಹೆಚ್-64ಇ(ಐ) ಹೆಲಿಕಾಪ್ಟರ್ಗಳನ್ನು ಪಠಾಣ್ಕೋಟ್ ವಾಯುನೆಲೆಯಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ.
ವಾಯಸೇನೆ ಮುಖ್ಯಸ್ಥ ಬಿ.ಎಸ್.ಧನೋವಾ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತ್ಯಾಧುನಿಕ ಹೆಲಿಪಾಪ್ಟರ್ಗಳನ್ನು ವಾಯುಸೇನೆಗೆ ಸೇರಿಸಿಕೊಳ್ಳಲಾಯಿತು.
ಭಾರತೀಯ ವಾಯುಪಡೆಯ ತನ್ನ ಅಗತ್ಯಕ್ಕೆ ಅನುಗುಣವಾಗಿ ಈ ಹೆಲಿಕಾಪ್ಟರ್ ನಿರ್ಮಾಣ ಮಾಡಿಸಿದೆ. ಪ್ರತಿಕೂಲ ಹವಾಮಾನದಲ್ಲೂ ಈ ಹೆಲಿಕಾಪ್ಟರ್ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಯುದ್ಧದ ಹೊರತಾಗಿ ಪ್ರಾಕೃತಿಕ ವಿಕೋಪದ ವೇಳೆಯಲ್ಲಿ ಈ ಹೆಲಿಕಾಪ್ಟರ್ ಉಪಯೋಗಕ್ಕೆ ಬರಲಿದೆ.
ಅತ್ಯಾಧುನಿಕ ಅಪಾಚೆ ಹೆಲಿಕಾಪ್ಟರ್ ಖರೀದಿ ನಿಟ್ಟಿನಲ್ಲಿ 2015ರ ಸೆಪ್ಟೆಂಬರ್ನಲ್ಲಿ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಾಗಿತ್ತು. ಒಪ್ಪಂದದ ಅನ್ವಯ ಅಮೆರಿಕವು ಭಾರತಕ್ಕೆ 22 ಅಪಾಚೆ ಹೆಲಿಕಾಪ್ಟರ್ ನೀಡಬೇಕಿತ್ತು. ಮೊದಲ ಹಂತದಲ್ಲಿ ಜುಲೈ 27ರಂದು ಅಮೆರಿಕ ನಾಲ್ಕು ಹೆಲಿಕಾಪ್ಟರ್ ಭಾರತಕ್ಕೆ ಹಸ್ತಾಂತರಿಸಿತ್ತು. ಇದೀಗ ಎಂಟು ಹೆಲಿಕಾಪ್ಟರ್ ಹಸ್ತಾಂತರ ಮಾಡಿದೆ. 2020ರ ವೇಳೆ ಒಪ್ಪಂದದ ಎಲ್ಲ 22 ಹೆಲಿಕಾಪ್ಟರ್ ಭಾರತೀಯ ವಾಯುಸೇನೆ ಸೇರಲಿದೆ.