ನವದೆಹಲಿ:ಅನಾರೋಗ್ಯದಿಂದ ಬಳಲುತ್ತಿದ್ದ ಭಾರತದ 13ನೇ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ 84ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ದೆಹಲಿಯ ಆರ್ಮಿ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಮೆದುಳು ಶಸ್ತ್ರಚಿಕಿತ್ಸೆಗೊಳಗಾಗಿದ್ದ ಅವರು ಇಂದು ಸಂಜೆ ನಿಧನರಾಗಿದ್ದಾಗಿ ಪುತ್ರ ಅಭಿಜಿತ್ ಮುಖರ್ಜಿ ಟ್ವೀಟ್ ಮಾಡಿ ಮಾಹಿತಿ ನೀಡುತ್ತಿದ್ದಂತೆ ಅನೇಕರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: ಟ್ರಬಲ್ ಶೂಟರ್ ಪ್ರಣಬ್ ಮುಖರ್ಜಿ ಜೀವನ ಮತ್ತು ಸಾಧನೆ: ಒಂದು ಕಿರುನೋಟ
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಣಬ್ ಮುಖರ್ಜಿ ನಿಧನಕ್ಕೆ ಕಂಬನಿ ಮಿಡಿದಿದ್ದು, ವಿಶೇಷವಾದ ಟ್ವೀಟ್ ಮಾಡಿ ಅವರ ಮಾರ್ಗದರ್ಶನ ನೆನೆದಿದ್ದಾರೆ.
2014ರಲ್ಲಿ ನಾನು ದೆಹಲಿಗೆ ಹೊಸಬನಾಗಿದ್ದೆ. ಮೊದಲ ದಿನದಿಂದಲೂ ಶ್ರೀ ಪ್ರಣಬ್ ಮುಖರ್ಜಿ ಅವರ ಮಾರ್ಗದರ್ಶನ, ಬೆಂಬಲ ಮತ್ತು ಆಶೀರ್ವಾದದಿಂದ ನಾನು ಆಶೀರ್ವದಿಸಲ್ಪಟ್ಟಿದ್ದೇನೆ. ಅವರೊಂದಿಗಿನ ನನ್ನ ಮಾತು ಯಾವಾಗಲೂ ಪ್ರೀತಿಸುತ್ತೇನೆ. ಅವರ ಕುಟುಂಬ, ಸ್ನೇಹಿತರು, ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ನಿಧನದ ನೋವಿನ ಧೈರ್ಯ ತುಂಬುವ ಶಕ್ತಿ ದೇವರು ಕರುಣಿಸಲಿ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುಂಚಿತವಾಗಿ ಟ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ದೇಶದ ಅಭಿವೃದ್ಧಿ ಪಂಥದಲ್ಲಿ ಪ್ರಣಬ್ ಮುಖರ್ಜಿ ಅವರು ಅಳಿಸಲಾಗದ ಗುರುತು ಬಿಟ್ಟು ಹೋಗಿದ್ದಾರೆ. ಅವರೊಬ್ಬ ಶ್ರೇಷ್ಠ ವಿದ್ವಾಂಸ, ಉನ್ನತ ರಾಜಕಾರಣಿ. ಅವರ ರಾಜಕೀಯ ಪಯಣವನ್ನು ಸಮಾಜದ ಎಲ್ಲಾ ವರ್ಗದವರು ಮೆಚ್ಚಿದ್ದಾರೆ ಎಂದು ಹೇಳಿದ್ದರು.