ಹೈದರಾಬಾದ್: ನನ್ನ ಜನನ ಪ್ರಮಾಣಪತ್ರವೇ ಇಲ್ಲದಿರುವಾಗ ನನ್ನ ತಂದೆಯ ಜನನ ಪ್ರಮಾಣಪತ್ರ ಹೇಗೆ ನೀಡಲಿ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಏಪ್ರಿಲ್ 1ರಿಂದ ಜಾರಿಗೆ ತರಲು ಸಿದ್ಧವಾಗಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ನನ್ನಲ್ಲೂ ಆತಂಕವನ್ನುಂಟು ಮಾಡುತ್ತಿದೆ. ನಾನು ಹಳ್ಳಿಯಲ್ಲಿದ್ದ ನನ್ನ ಮನೆಯಲ್ಲಿ ಜನಿಸಿದ್ದೇನೆ. ಆಗ ಯಾವುದೇ ಆಸ್ಪತ್ರೆಗಳು ಇರಲಿಲ್ಲ. ಹಳ್ಳಿಯ ಯಾವುದೋ ಹಿರಿಯರು ಸೂಚಿಸಿದ ಜನ್ಮ ನಾಮದ ಮೇಲೆ ಹೆಸರು ಇಡುತ್ತಿದ್ದರು ಎಂದು ಕೆಸಿಆರ್ ಹೇಳಿದ್ದಾರೆ.
ನಾನು ಜನಿಸಿದಾಗ ನಮಗೆ 580 ಎಕರೆ ಭೂಮಿ ಮತ್ತು ಕಟ್ಟಡವಿತ್ತು. ನನ್ನ ಜನನ ಪ್ರಮಾಣಪತ್ರವನ್ನು ನೀಡಲು ನನಗೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ದಲಿತರು, ಬುಡಕಟ್ಟು ಜನಾಂಗದವರು ಮತ್ತು ಬಡವರು ತಮ್ಮ ಜನನ ಪ್ರಮಾಣಪತ್ರಗಳನ್ನು ಹೇಗೆ ಒದಗಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ಅತ್ಯಂತ ಕಿರಿಕಿರಿ ಉಂಟುಮಾಡುವ ವಿಷಯವೆಂದರೆ ಜಾತಿ, ಧರ್ಮವನ್ನು ಲೆಕ್ಕಿಸದೆ ಸಮಾನವಾಗಿ ಪರಿಗಣಿಸುವ ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದೆ. ನಿರ್ದಿಷ್ಟ ಧರ್ಮದ ಜನರನ್ನು ಹೊರಗಿಡುವ ಕಾನೂನನ್ನು ಯಾವುದೇ ನಾಗರಿಕ ಸಮಾಜ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
'ನಾವು ಈ ದೇಶದ ಭಾಗವಾಗಿದ್ದು, ಸುಮ್ಮನೇ ಕೂರುವವರಲ್ಲ. ನಮ್ಮ ಮಿತಿಯಲ್ಲಿ ನಾವು ಏನು ಬೇಕಾದರೂ ಮಾಡುತ್ತೇವೆ, ಯಾರಿಗೂ ಹೆದರುವುದಿಲ್ಲ' ಎಂದು ಕೆಸಿಆರ್ ಹೇಳಿದ್ದಾರೆ.