ನವದೆಹಲಿ: ಪುಲ್ವಾಮ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಸೇನೆ ನಡೆಸಿದ ವಾಯುದಾಳಿಯಲ್ಲಿ ಸತ್ತ ಉಗ್ರರ ಸಂಖ್ಯೆ ಬಗ್ಗೆ ಮತ್ತಷ್ಟು ದಾಖಲೆ ನೀಡುವಂತೆ ಕಾಂಗ್ರೆಸ್ ಸಾಗರೋತ್ತರ ಉಸ್ತುವಾರಿ ಸ್ಯಾಮ್ ಪಿತ್ರೋಡಾ ಕೇಂದ್ರಕ್ಕೆ ಒತ್ತಾಯಿಸಿ ಟೀಕೆಗೆ ಗುರಿಯಾಗಿದ್ದರು.
ಇದೀಗ ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿರುವ ಸ್ಯಾಮ್ ಪಿತ್ರೋಡಾ, ನಾನು ಸತ್ಯವನ್ನೇ ಹೇಳಿದ್ದೇನೆ, ನಾನು ಪ್ರಶ್ನೆಯನ್ನು ಕೇಳಿದ್ದೇನೆ ಮತ್ತು ಪ್ರಶ್ನೆ ಕೇಳಲು ಅರ್ಹನಾಗಿರುತ್ತೇನೆ. ಪ್ರಶ್ನೆ ಕೇಳಿದ ಕಾರಣಕ್ಕೆ ನಾನು ರಾಷ್ಟ್ರೀಯವಾದಿ ಅಲ್ಲ ಎಂದು ಹಣೆಪಟ್ಟಿ ಕಟ್ಟಲು ಸಾಧ್ಯವಿಲ್ಲ, ನನ್ನನ್ನ ಕೇಳಲು ನೀವು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಹಿಂದೆ ಮಾತನಾಡಿದ್ದ ಸ್ಯಾಮ್ ಪಿತ್ರೋಡಾ ವಾಯುಸೇನೆ ದಾಳಿ ನಡೆಸಿದೆ ಹಾಗೂ 300 ಉಗ್ರರು ಹತರಾಗಿದ್ದಾರೆ ಎನ್ನುವುದೆಲ್ಲಾ ಸರಿ, ಆದರೆ ಈ ಕುರಿತಂತೆ ಮತ್ತಷ್ಟು ಪೂರಕ ದಾಖಲೆ ನೀಡಿ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಅಲ್ಲದೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವಾಯುದಾಳಿ ಹಾಗೂ ಸತ್ತ ಉಗ್ರರ ಸಂಖ್ಯೆ ಬಗ್ಗೆ ಬಂದ ವರದಿಗಳನ್ನು ಗಮನಿಸಿದಾಗ ಕೆಲ ಅನುಮಾನಗಳು ಮೂಡಿವೆ. ನಿಜಕ್ಕೂ ವಾಯುದಾಳಿ ನಡೆದಿದೆಯೇ..? 300 ಉಗ್ರರು ಹತ್ಯೆಯಾಗಿದ್ದಾರಾ..? ಎಂದು ಸಂಶಯ ಮೂಡಿವೆ ಎಂದಿದ್ದರು
ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಕೆಂಡಾಮಂಡಲರಾಗಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಮೋದಿ, ನಾನು ಭಾರತೀಯರಲ್ಲಿ ಕೇಳಿಕೊಳ್ಳುತ್ತಿರುವುದು ಇಷ್ಟೆ. ಈ ರೀತಿಯ ಹೇಳಿಕೆಗಳನ್ನು ನೀಡುವ ಪ್ರತಿಪಕ್ಷಗಳನ್ನು ನೀವು ಪ್ರಶ್ನಿಸಿ.130 ಕೋಟಿ ಭಾರತೀಯರು ಪಾಕ್ನ ನಡೆಯನ್ನು ಕ್ಷಮಿಸುವುದಲ್ಲ, ವಿರೋಧ ಪಕ್ಷದ ನಾಯಕರ ಹೇಳಿಕೆಗಳನ್ನು ಮರೆಯುವುದಿಲ್ಲ ಎಂಬುದನ್ನು ಒತ್ತಿ ಹೇಳಿ ಎಂದು ಟ್ವಿಟ್ಟರ್ನಲ್ಲಿ ಟಾಂಗ್ ಕೊಟ್ಟಿದ್ದರು.