ರಾಂಚಿ:ಸ್ಥಳೀಯ ಭಾಷೆಯ ಹೊರತಾಗಿಯೂ ಹಿಂದಿ ಬಳಸಲೇಬೇಕೆಂದು ನಾನೆಲ್ಲೂ ಹೇಳಿಲ್ಲ. ಜನರು ಅವರ ಮಾತೃಭಾಷೆಯ ನಂತರ ಎರಡನೇ ಭಾಷೆಯಾಗಿ ಹಿಂದಿ ಕಲಿಯಲಿ ಎಂದು ಮನವಿ ಮಾಡಿದ್ದೇನೆ ಅಷ್ಟೇ ಎಂದು ಗೃಹ ಸಚಿವ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ.
ಈ ಮೂಲಕ ಭಾರತವನ್ನು ಸಾಂಸ್ಕೃತಿಕವಾಗಿ ಹಿಂದಿಯೊಂದಿಗೆ ರಾಷ್ಟ್ರೀಯ ಭಾಷೆಯಾಗಿ ಏಕೀಕರಿಸಲು ಅವರು ಕರೆ ನೀಡಿದ ನಂತರ ಉದ್ಭವಿಸಿದ ಸಾಕಷ್ಟು ಗೊಂದಲ ಹಾಗೂ ವಿವಾದಗಳಿಗೆ ತೆರೆ ಎಳೆದರು.
ನಾನು ಹಿಂದಿ ಮಾತೃಭಾಷೆ ಅಲ್ಲದ ರಾಜ್ಯ ಗುಜರಾತ್ನಿಂದ ಬಂದಿರುವವನು. ನನ್ನ ಮಾತೃಭಾಷೆಯೂ ಹಿಂದಿ ಅಲ್ಲ. ಈ ವಿಚಾರದಲ್ಲಿ ಯಾರಾದರೂ ರಾಜಕೀಯ ಮಾಡಲು ಇಚ್ಛಿಸಿದರೆ, ಅದು ಅವರ ಇಚ್ಛೆಗೆ ಬಿಟ್ಟ ವಿಚಾರ ಎಂದು ಟಾಂಗ್ ನೀಡಿದರು.
ಈ ಮೊದಲು ಅಮಿತ್ ಶಾ, ಭಾರತವನ್ನು ಹಿಂದಿ ಭಾಷೆಯೊಂದಿಗೆ ಸಾಂಸ್ಕೃತಿಕವಾಗಿ ಏಕೀಕರಿಸುವಂತೆ ಕರೆ ನೀಡಿದ್ದರು. ಹೀಗಾಗಿ ಹಲವು ವಿರೋಧ ಪಕ್ಷದ ನಾಯಕರು ಇದನ್ನು ವಿರೋಧಿಸಿ, ಶಾ ತಮ್ಮ ಮನವಿಯನ್ನು ಮರುಪರಿಶೀಲಿಬೇಕು. ಇದು ರಾಷ್ಟ್ರೀಯ ಏಕತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ರೊಚ್ಚಿಗೆದ್ದಿದ್ದರು.
ಇದನ್ನೂ ಓದಿ : 3.14 ಲಕ್ಷ ವಿದ್ಯಾರ್ಥಿಗಳ ₹ 57.20 ಕೋಟಿ ಪರೀಕ್ಷಾ ಶುಲ್ಕ ಪಾವತಿಸಲಿದೆ ಕೇಜ್ರಿವಾಲ್ ಸರ್ಕಾರ
ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತವನ್ನು ಸಾಂಸ್ಕೃತಿಕವಾಗಿ ಏಕೀಕರಿಸಲು ಒಂದೇ ಭಾಷೆಯ ಅಗತ್ಯವಿದೆ. ಭಾಷೆಗಳಲ್ಲಿ ವೈವಿಧ್ಯತೆ ನಮ್ಮ ರಾಷ್ಟ್ರದ ಶಕ್ತಿಯಾಗಿದ್ದರೂ, ವಿದೇಶಿ ಭಾಷೆಗಳು ಮತ್ತು ಸಂಸ್ಕೃತಿ ನಮ್ಮತನವನ್ನು ಆಕ್ರಮಿಸದಂತೆ ರಾಷ್ಟ್ರೀಯ ಭಾಷೆಯೊಂದರ ಅಗತ್ಯ ನಮಗಿದೆ ಎಂದಿದ್ದರು. ಹೀಗಾಗಿ ಮುಂದಿನ ವರ್ಷದಿಂದ 'ಹಿಂದಿ ದಿವಾಸ್' ಕಾರ್ಯಕ್ರಮವು ಸಾರ್ವಜನಿಕ ಕಾರ್ಯಕ್ರಮವಾಗಿ ನಡೆಯಲಿದೆ. ಏಕೆಂದರೆ ಹಿಂದಿ ಜನರ ಭಾಷೆ ಎಂದು ಶಾ ಉದ್ಘರಿಸಿದರು.