ನವದೆಹಲಿ:ಅನಿಲ್ ಅಂಬಾನಿ ಯುಕೆ ನ್ಯಾಯಾಲಯದಲ್ಲಿ ಅಗತ್ಯವಿರುವಂತೆ ತನ್ನ ಎಲ್ಲಾ ಆಸ್ತಿಗಳು ಮತ್ತು ಬಾಧ್ಯತೆಗಳನ್ನು ವಿಚಾರಣೆಯಲ್ಲಿ ಪೂರ್ಣವಾಗಿ ಮತ್ತು ನ್ಯಾಯಯುತವಾಗಿ ಬಹಿರಂಗಪಡಿಸಿದ್ದು, ವೈಯಕ್ತಿಕವಾಗಿ ಭಾರತದ ಹೊರಗೆ ಯಾವುದೇ ಆಸ್ತಿಗಳನ್ನು ಹೊಂದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
8 ವರ್ಷಗಳ ಹಿಂದೆ ಅಂದರೆ 2012ರಲ್ಲಿ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ ಚೀನಾದ 3 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಂದ ಪಡೆದ ಸಾಲ ಕಾರ್ಪೋರೇಟ್ ಸಾಲವಾಗಿದ್ದು, ಅಂಬಾನಿಯ ವೈಯಕ್ತಿಕ ಸಾಲವಲ್ಲ.
ವಿಚಾರಣೆಯಲ್ಲಿ ಅಂಬಾನಿ 'ಅದ್ಧೂರಿ ಜೀವನ ಶೈಲಿಯನ್ನು' ಅನುಸರಿಸಿದ್ದನ್ನು ನಿರಾಕರಿಸಿದ್ದಾರೆ. "ವಾಸ್ತವದಲ್ಲಿ ನಾನು ಸರಳ ಅಭ್ಯಾಸಗಳನ್ನು ಹೊಂದಿರುವ ಶಿಸ್ತುಬದ್ಧ ಮತ್ತು ಆಳವಾದ ಧಾರ್ಮಿಕ ವ್ಯಕ್ತಿ" ಎಂದು ಗೌರವಯುತವಾಗಿ ಸ್ಪಷ್ಟಪಡಿಸಿದ್ದಾರೆ.
ಅಂಬಾನಿ ಉತ್ಸಾಹಭರಿತ ಕ್ರೀಡಾಪಟು ಆಗಿದ್ದು, 50 ಮ್ಯಾರಥಾನ್‌ಗಳು, ಅರ್ಧ ಮ್ಯಾರಥಾನ್‌ಗಳನ್ನು ಕ್ರಮಿಸಿದ ಓಟಗಾರ ಆಗಿದ್ದಾರೆ.
ಅಂಬಾನಿ ಸಸ್ಯಾಹಾರಿಯಾಗಿದ್ದು, ಮದ್ಯಪಾನ ಮಾಡುವುದಿಲ್ಲ. ಧೂಮಪಾನ ಸೇದುವುದಿಲ್ಲ ಮತ್ತು ಜೂಜಾಟ ಮಾಡುವುದಿಲ್ಲ. ಮುಂಬೈನಲ್ಲಿ ತನ್ನ ತಾಯಿ ಕೋಕಿಲಾಬೆನ್ ಮತ್ತು ಕುಟುಂಬದೊಂದಿಗೆ, ದಿವಂಗತ ತಂದೆ ಧೀರೂಭಾಯಿ ಅಂಬಾನಿ ಅವರು ಮಾಡಿದ ವ್ಯವಸ್ಥೆಯಾದ ಮುಂಬೈನ ಸೀವಿಂಡ್ ಎಂಬ ಅಪಾರ್ಟ್ಮೆಂಟ್ನಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿದ್ದಾರೆ ಎಂದು ಕಾನೂನು ಮೂಲಗಳು ತಿಳಿಸಿವೆ.
ಕಾರುಗಳು, ಕಾರ್ಪೋರೇಟ್ ಜೆಟ್‌ಗಳು, ಹೆಲಿಕಾಪ್ಟರ್ ಮತ್ತು ವಿಹಾರ ನೌಕೆಗಳ ಮಾಲೀಕತ್ವವನ್ನು ನಿರಾಕರಿಸಿದ ಅಂಬಾನಿ, ಕಂಪನಿಯು ಒದಗಿಸಿದ ಒಂದು ಕಾರನ್ನು ಮಾತ್ರ ಬಳಸುವುದಾಗಿ ತಿಳಿಸಿದ್ದಾರೆ. ಈ ಯಾವುದೇ ಸ್ವತ್ತುಗಳು ತನ್ನ ಒಡೆತನದಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಯುಕೆನಲ್ಲಿನ ಚೀನಾದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಅನುಸರಿಸುತ್ತಿರುವ ದುಬಾರಿ ದೀರ್ಘಾವಧಿಯ ದಾವೆಗಳಿಗಾಗಿ ತನ್ನ ಕಾನೂನು ವೆಚ್ಚಗಳನ್ನು ಪೂರೈಸಲು ಇತ್ತೀಚೆಗೆ ಎಲ್ಲಾ ಆಭರಣಗಳನ್ನು 9.9 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಅಂಬಾನಿ ಬಹಿರಂಗಪಡಿಸಿದರು.