ಮನಾಮಾ:ತಮ್ಮ ಸ್ನೇಹಿತ ಅರುಣ್ ಜೇಟ್ಲಿ ಅವರನ್ನು ನೆನಪಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಬಹ್ರೇನ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾವುಕರಾದರು.
ಬಹ್ರೇನ್‌ನಲ್ಲಿ ಸುಮಾರು 15 ಸಾವಿರ ಭಾರತೀಯರನ್ನ ಉದ್ದೇಶಿಸಿ ಮಾತನಾಡಿದ ಮೋದಿ, ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಜೊತೆಗಿನ ಸುದೀರ್ಘ ಒಡನಾಟವನ್ನು ನೆನೆದು ಭಾವುಕರಾದರು.
ನಾನು ಕರ್ತವ್ಯಕ್ಕೆ ಬದ್ಧನಾಗಿರುವ ಮನುಷ್ಯ. ಬಹ್ರೇನ್‌ನಲ್ಲಿ ಹಬ್ಬದ ವಾತಾವರಣ ಇರುವ ಸಮಯದಲ್ಲಿ, ನನ್ನ ಹೃದಯದಲ್ಲಿ ಆಳವಾದ ದುಃಖವಿದೆ. ನಾನು ಮತ್ತು ಅರುಣ್ ಜೇಟ್ಲಿ ಸಾರ್ವಜನಿಕ ಜೀವನದಲ್ಲಿ ಒಟ್ಟಿಗೆ ಸಾಗಿ ಬಂದವರು. ಅವರೊಂದಿಗೆ ನಾನು ಎಲ್ಲ ಸಮಯದಲ್ಲೂ ಸಂಪರ್ಕದಲ್ಲಿದ್ದೆ, ಜೇಟ್ಲಿ ನಾನು ಕಷ್ಟಪಟ್ಟಿದ್ದೇನೆ, ಕನಸು ಕಂಡಿದ್ದೇನೆ ಮತ್ತು ಆ ಕನಸುಗಳನ್ನು ಪೂರೈಸಿದ್ದೇನೆ. ಭಾರತ ದೇಶದ ಮಾಜಿ ರಕ್ಷಣಾ ಮತ್ತು ಹಣಕಾಸು ಸಚಿವರಾಗಿದ್ದ ನನ್ನ ಸ್ನೇಹಿತ ಇಂದು ನಮ್ಮೆಲ್ಲರನ್ನ ಬಿಟ್ಟು ಅಗಲಿದ್ದಾನೆ ಎಂದರು.
ನಾನು ಊಹೇ ಕೂಡ ಮಾಡಿಕೊಂಡಿರಲಿಲ್ಲ. ದೇಶ ಬಿಟ್ಟು ಇಷ್ಟು ದೂರ ಬಂದಿದ್ದೇನೆ. ಇಂತಹ ಸಮಯದಲ್ಲಿ ನನ್ನ ಸ್ನೆಹಿತ ನನ್ನನ್ನ ಬಿಟ್ಟು ಹೋಗಿದ್ದಾನೆ. ಕೆಲವು ದಿನಗಳ ಹಿಂದೆ, ನಮ್ಮ ಮಾಜಿ ವಿದೇಶಾಂಗ ಸಚಿವ ಸುಷ್ಮಾ ಜಿ ಅವರನ್ನು ಕಳೆದುಕೊಂಡಿದ್ದೇವೆ. ಇಂದು ನಾನು ನನ್ನ ಸ್ನೇಹಿತ ಅರುಣ್ ನನ್ನು ಕಳೆದುಕೊಂಡಿದ್ದೇನೆ.
ಒಂದೆಡೆ ಕರ್ತವ್ಯದ ಜವಾಬ್ದಾರಿ ನನ್ನ ಬಂಧಿಸಿದೆ, ಮತ್ತೊಂದೆಡೆ ಸ್ನೇಹಿತನ ಸಾವಿನಿಂದ ದುಖಃದಲ್ಲಿದ್ದೇನೆ. ಬಹ್ರೇನ್ನಿಂದ ನನ್ನ ಸ್ನೇಹಿತನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅವರ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.