ನವದೆಹಲಿ: ಬಜೆಟ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 'ಆಂದೋಲನ ಜೀವಿ' ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ತಮ್ಮನ್ನು ತಾವು ಹೆಮ್ಮೆಯ 'ಆಂದೋಲನ ಜೀವಿ' ಎಂದು ಕರೆದುಕೊಂಡಿದ್ದಾರೆ. ಜೊತೆಗೆ ನನ್ನ ಪ್ರಕಾರ ಸರ್ವಶ್ರೇಷ್ಠ 'ಆಂದೋಲನ ಜೀವಿ' ಎಂದರೆ ಅದು ಮಹಾತ್ಮ ಗಾಂಧಿ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಚಿದಂಬರಂ ಪ್ರಧಾನಿ ಮೋದಿ ಅವರಿಗೆ ಟಾಂಗ್ ನೀಡಿದ್ದಾರೆ.
ಶ್ರಮ್ ಜೀವಿ" ಮತ್ತು "ಬುದ್ಧಿ ಜೀವಿ" ಯಂತಹ ಕೆಲವು ಪದಗಳ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ಆದರೆ, ಈ ದೇಶದಲ್ಲಿ ಕೆಲವು ಸಮಯದಿಂದ ಹೊಸ ಪದಗಳು ಅಸ್ತಿತ್ವಕ್ಕೆ ಬಂದಿರುವುದನ್ನು ನಾನು ನೋಡುತ್ತಿದ್ದೇನೆ- 'ಆಂದೋಲನ್ ಜೀವಿ. ಪ್ರತಿಭಟನೆ ಇರುವಲ್ಲೆಲ್ಲಾ ಈ ಆಂದೋಲನ ಜೀವಿ ಗುರುತಿಸಬಹುದು, ಅದು ವಕೀಲರು, ವಿದ್ಯಾರ್ಥಿಗಳು ಅಥವಾ ಕಾರ್ಮಿಕರ ಆಂದೋಲನವಾಗಿರಬಹುದು, ಕೆಲವೊಮ್ಮೆ ಅದು ಮುಂಚೂಣಿಯಲ್ಲಿರಬಹುದು ಮತ್ತು ಕೆಲವೊಮ್ಮೆ ತೆರೆಮರೆಯಲ್ಲಿರಬಹುದು, ಅವರು ಪ್ರತಿಭಟನೆಗಳಿಲ್ಲದೇ ಬದುಕಲಾರರು. ನಾವು ಅಂತಹ ಜನರನ್ನು ಗುರುತಿಸಬೇಕು ಮತ್ತು ಅವರಿಂದ ರಾಷ್ಟ್ರವನ್ನು ರಕ್ಷಿಸಬೇಕು. ಅವರು ಪರಾವಲಂಬಿಗಳು ಎಂದು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಹೇಳುವ ವೇಳೆ ಪಿಎಂ ಮೋದಿ ಹೇಳಿದ್ದರು.