ಹೈದರಾಬಾದ್:ಮಲೇರಿಯಾ ರೋಗಿಗಳ ಚಿಕಿತ್ಸೆಗೆ ಬಳಸಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಅಮೆರಿಕದ ಕೋವಿಡ್ 19 ರೋಗಿಗಳ ಚಿಕಿತ್ಸೆಗಾಗಿ ಭಾರತವು ರಫ್ತು ಮಾಡಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋರಿರುವ ಮಧ್ಯೆಯೇ, ಈ ಔಷಧವು ಹಲವು ಅಡ್ಡ ಪರಿಣಾಮಗಳನ್ನೂ ಹೊಂದಿರುವುದು ತಿಳಿದುಬಂದಿದೆ.
ರಕ್ತದೊತ್ತಡ ಇಳಿಕೆ ಮತ್ತು ಮಾಂಸಖಂಡ ಅಥವಾ ನರ ಹಾನಿ ಮತ್ತು ಕಣ್ಣಿನ ದೃಷ್ಟಿಗೆ ಹಾನಿಯಂಥ ಅಡ್ಡ ಪರಿಣಾಮಗಳು ಕಂಡುಬರುವ ಸಾಧ್ಯತೆ ಇರುತ್ತದೆ. ಆದರೆ, ಎಚ್‌ಸಿಕ್ಯೂಗೆ ಸಂಬಂಧಿಸಿದಂತೆ ಪ್ರಮುಖ ಅಪಾಯವೆಂದರೆ, ರೆಟಿನಲ್ ಟಾಕ್ಸಿಸಿಟಿ. ಸದ್ಯದ ಮಟ್ಟಿಗೆ ರೋಗನಿರೋಧಕ ಶಕ್ತಿಯನ್ನೇ ಆಧರಿಸಿ ದಾಳಿ ಮಾಡುವ ರೋಗಗಳನ್ನು ತಡೆಯಲು ಎಚ್‌ಸಿಕ್ಯೂ ಹೊರತುಪಡಿಸಿ ಇನ್ಯಾವುದೇ ಪರಿಣಾಮಕಾರಿ ಔಷಧವಿಲ್ಲ. ಸದ್ಯ ಇದರ ಡೋಸೇಜ್ ಪ್ರಮಾಣದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿರುವುದರಿಂದ ಗೊಂದಲ ಉಂಟಾಗಿದೆ.
ಸಾಮಾನ್ಯವಾಗಿ ಉರಿಯೂತದ ರೋಗಗಳಿಗೆ ದಿನಕ್ಕೆ ಎರಡು ಬಾರಿ 200 ಮಿ.ಗ್ರಾಂ ನೀಡಲಾಗುತ್ತದೆ. ಈ ಡೋಸ್ ಕೊಡಬೇಕಾದರೆ ರೋಗಿಯು 176 ಪೌಂಡ್ ತೂಕ ಹೊಂದಿರಬೇಕು. ಆರಂಭಿಕ ವರದಿಗಳ ಪ್ರಕಾರ ಕೋವಿಡ್ 19 ರೋಗಿಗಳಿಗೆ ದಿನಕ್ಕೆ 600-800 ಮಿ.ಗ್ರಾಂ ಡೋಸೇಜ್ ಶಿಫಾರಸು ಮಾಡಲಾಗುತ್ತದೆ. ಅಂದರೆ, ಇದು ಸಾಮಾನ್ಯಕ್ಕಿಂತ 3-4 ಪಟ್ಟು ಹೆಚ್ಚಾಗಿರುತ್ತದೆ. ಇದರಿಂದ ರೆಟಿನೋಪತಿ ಕಾಣಿಸಿಕೊಳ್ಳಬಹುದಾಗಿದೆ. ಇದರ ಜೊತೆಗೆ ಕೋವಿಡ್ 19 ಹೊಂದಿರುವ ರೋಗಿಗಳಲ್ಲಿ ಇತರ ರೋಗಗಳೂ ಇರಬಹುದು.
ಸಂಶೋಧನೆಗಳ ಪ್ರಕಾರ, ಎಚ್‌ಸಿಕ್ಯೂ ತ್ಯಾಜ್ಯವು ಮೂತ್ರದ ಮೂಲಕ ಹೊರಹೋಗುವುದರಿಂದ ಕಿಡ್ನಿ ವೈಫಲ್ಯ ಹೊಂದಿರುವ ರೋಗಿಗಳಲ್ಲಿ ಇದರ ಅಡ್ಡ ಪರಿಣಾಮಗಳ ರಿಸ್ಕ್ ಹೆಚ್ಚಾಗಿದೆ. ಎಚ್‌ಸಿಕ್ಯೂ ಹೆಚ್ಚಿನ ಡೋಸ್ ಸೇವಿಸಿದಾಗ, ವಯೋ ಸಂಬಂಧಿ ಮೆಕ್ಯುಲರ್ ಡಿಜನರೇಶನ್ ಹೊಂದಿರುವ ರೋಗಿಗಳಿಗೆ ಮಾರಣಾಂತಿಕವೂ ಆಗಬಹುದು. ಲ್ಯಾಬ್ ಟೆಸ್ಟ್‌ಗಳಲ್ಲಿ ಕಂಡುಬಂದಂತೆ, ಹೈಡ್ರಾಕ್ಸಿಕ್ಲೋರೋಕ್ವಿನ್ ಸೆಲ್‌ಗಳಿಗೆ ಕೊರೊನಾವೈರಸ್ ಸೇರಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಈ ಬಗ್ಗೆ ಕಳೆದ ವಾರ ನೇಚರ್ ಮೆಡಿಸಿನ್ ನಿಯತಕಾಲಿಕದಲ್ಲಿ ವರದಿ ಮಾಡಲಾಗಿದೆ. ಆದರೆ ಈ ಔಷಧವು ಎಲ್ಲ ವ್ಯಕ್ತಿಗಳಿಗೂ ಇದೇ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ಹೇಳಲಾಗದು.