ಹೈದರಾಬಾದ್:ತೆಲಂಗಾಣದ ರಾಜಧಾನಿ ಹೈದರಾಬಾದ್ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಸಮೀಕ್ಷೆಯೊಂದರ ಪ್ರಕಾರ ವಾಸಯೋಗ್ಯ ನಗರವಾಗಿ ಮತ್ತು ಕೆಲಸ ಮಾಡಲು ದೇಶದಲ್ಲೇ ಅತ್ಯುತ್ತಮ ನಗರವಾಗಿ ಹೈದರಾಬಾದ್ ಹೊರಹೊಮ್ಮಿದೆ.
ಡೆಸ್ಟಿನೇಷನ್ ಡಿಸ್ಕವರಿ ವೆಬ್ಸೈಟ್, Holidify.com. ನಡೆಸಿದ ಸಮೀಕ್ಷೆಯ ಪ್ರಕಾರ, ದೇಶದ ಒಟ್ಟು 34 ಪ್ರಮುಖ ನಗರಗಳಲ್ಲಿ ಮುತ್ತಿನ ನಗರಿ ಹೈದರಾಬಾದ್ ಅತ್ಯುತ್ತಮ ನಗರ ಎಂಬ ಖ್ಯಾತಿ ಪಡೆದಿದೆ. ವಾಸ ಮಾಡಲು ಹಾಗೂ ವೃತ್ತಿಪರ ಬದುಕಿಗೆ ಹೈದರಾಬಾದ್ ಉತ್ತಮ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ದೇಶದ ಪ್ರಮುಖ ಹಾಗೂ ದೊಡ್ಡ ನಗರಗಳಾದ ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈನಂತಹ ಪ್ರಮುಖ ನಗರಗಳನ್ನು ಹಿಂದಿಕ್ಕಿರುವ ಹೈಟೆಕ್ ಸಿಟಿ ಹೈದರಾಬಾದ್ ಅಗ್ರಸ್ಥಾನ ಪಡೆದಿದೆ.
ವಾಸ ಯೋಗ್ಯತೆ ಹಾಗೂ ಕೆಲಸದ ವಾತಾವರಣಕ್ಕೆ ಸೂಕ್ತವಾಗಿರುವ ಮಾನದಂಡಗಳ ಮೇಲೆ ಒಟ್ಟು 5 ರಲ್ಲಿ ಅಂಕ ನೀಡಲಾಗಿದ್ದು, ಇದರಲ್ಲಿ ಹೈದರಾಬಾದ್ 4.0 ಅಂಕ ಪಡೆದಿದೆ. ಇನ್ನೊಂದೆಡೆ ಹೈದರಾಬಾದ್ ದಕ್ಷಿಣ ಭಾರತದಲ್ಲಿ ನ್ಯೂಯಾರ್ಕ್ ಆಗುತ್ತಿದೆ ಎಂದು ಸಮೀಕ್ಷೆ ವ್ಯಾಖ್ಯಾನಿಸಿದೆ.
ಜೆಎಲ್ಎಲ್ ಸಿಟಿ ಮೊಮೆಂಟಮ್ ಇಂಡೆಕ್ಸ್ 2020 ರ, ವಿಶ್ವದ ಕ್ರಿಯಾತ್ಮಕ ನಗರ(ಡೈನಾಮಿಕ್ ಸಿಟಿ) ಎಂಬ ಹಿರಿಮೆಗೆ ಪಾತ್ರವಾಗಿದ್ದ ಹೈದರಾಬಾದ್ಗೆ ಇದು ಈ ವರ್ಷದ ಎರಡನೇ ಗರಿಮೆಯಾಗಿದೆ.
ಹುಸೈನ್ ಸಾಗರ್, ಸಿಕಂದರಾಬಾದ್ ಪ್ರಮುಖ ಐತಿಹಾಸಿಕ ಸ್ಥಳಗಳು, ಕೋಟೆಗಳು, ವಿಶಾಲ ಕೆರೆಗಳು, ಮಸೀದಿ, ದೇಗುಲ, ಐತಿಹಾಸಿಕ ಗೋರಿಗಳು, ರಾಮೋಜಿ ಫಿಲ್ಮ್ ಸಿಟಿ, ಬೃಹತ್ ಮಾಲ್ಗಳು, ಅಮ್ಯೂಸ್ಮೆಂಟ್ ಪಾರ್ಕ್ ಸೇರಿದಂತೆ ಹತ್ತು ಹಲವು ಪ್ರವಾಸಿ ಸ್ಥಳಗಳು ನಗರದಲ್ಲಿವೆ. ಸೈಬರ್ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲೂ ನಗರ ಬಹಳಷ್ಟು ಮುಂದಿದೆ.