ಹೈದರಾಬಾದ್:ಕಟ್ಟಿಕೊಂಡ ಹೆಂಡತಿ ಹಲ್ಲು ವಕ್ರವಕ್ರವಾಗಿದೆ ಎಂದು ಸಬೂಬು ಹೇಳಿದ ಪತಿಯೊಬ್ಬ ಕೇವಲ ಐದೇ ತಿಂಗಳಲ್ಲಿ ಆಕೆಗೆ ತಲಾಖ್ ನೀಡಿರುವ ಘಟನೆ ಹೈದರಾಬಾದ್ನ ಕುಶೈಗುಡಾದಲ್ಲಿ ನಡೆದಿದೆ.
ಮುಸ್ತಾಫಾ ಎಂಬಾತ ಜೂನ್ 27, 2019ರಲ್ಲಿ ರುಕ್ಸಾನ್ ಬೇಗಂ ಎಂಬಾಕೆಯನ್ನು ಮದುವೆಯಾಗಿದ್ದಾನೆ. ಇದಾದ ಬಳಿಕ ಪ್ರತಿದಿನ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಗಂಡ, ನಿನ್ನ ಹಲ್ಲು ವಕ್ರವಾಗಿರುವ ಕಾರಣ ಸಂಸಾರ ನಡೆಸಲು ಸಾಧ್ಯವಿಲ್ಲ ಎಂದು ತ್ರಿವಳಿ ತಲಾಖ್ ನೀಡಿದ್ದಾನೆ. ಇದರಿಂದ ಮನನೊಂದಿರುವ ಮಹಿಳೆ ಇದೀಗ ಪೊಲೀಸರಿಗೆ ದೂರು ನೀಡಿದ್ದಾಳೆ.
ಮದುವೆಯಾದ ಬಳಿಕ ಪ್ರತಿದಿನ ಗಂಡನ ಮನೆಯವರು ವರದಕ್ಷಿಣೆ ತರುವಂತೆ ಚಿತ್ರಹಿಂಸೆ ನೀಡುತ್ತಿದ್ದರು. ಆದರೆ ನನ್ನ ತವರು ಮನೆಯವರು ಈಗಾಗಲೇ ಹೇಳಿದಷ್ಟು ಹಣ, ಒಡವೆ ಕೊಟ್ಟಿದ್ದಾರೆ. ಹೀಗಿದ್ರೂ ಸುಮ್ಮನಾಗದಕ್ಕೆ ತವರು ಮನೆಯಿಂದ ಬೈಕ್ ಸಹ ತೆಗೆದುಕೊಂಡು ಬಂದಿದ್ದಾರೆ ಎಂದು ಪತ್ನಿ ರುಕ್ಸಾನ ಬೇಗಂ ಅಳಲು ತೋಡಿಕೊಂಡಿದ್ದಾರೆ.
ಅಕ್ಟೋಬರ್ 26ರಂದು ಭಾರತೀಯ ದಂಡ ಸಂಹಿತೆ (ಐಪಿಸಿ) ಕಾಯ್ದೆಯ ಸೆಕ್ಷನ್ 498 ಎ, ವರದಕ್ಷಿಣೆ ಕಾಯ್ದೆ ಮತ್ತು ತ್ರಿವಳಿ ತಲಾಖ್ ತಡೆ ಕಾಯ್ದೆಯ ವಿವಿಧ ಕಲಂಗಳಡಿ ಪೊಲೀಸರು ಆರೋಪಿ ಮುಸ್ತಾಫಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸರ್ಕಲ್ ಇನ್ಸ್ಪೆಕ್ಟರ್ ಕೆ ಚಂದ್ರಶೇಖರ್ ಮಾತನಾಡಿದ್ದು, ರುಕ್ಸಾನ್ ನೀಡಿರುವ ಹೇಳಿಕೆ ಆಧಾರದ ಮೇಲೆ ತಾವು ದೂರು ದಾಖಲಿಸಿದ್ದೇವೆ. ಆರೋಪಿಯ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.