ಹೈದರಾಬಾದ್ (ತೆಲಂಗಾಣ) :ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯಲ್ಲಿ ಉದ್ಯೋಗ ನೀಡುವ ನೆಪದಲ್ಲಿ ಯುವಕರನ್ನು ವಂಚಿಸುತ್ತಿದ್ದ 23 ವರ್ಷದ ಯುವಕನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಬಾಲಪುರ ಪೊಲೀಸರು ಮಹೇಶ್ವರಂ ಗ್ರಾಮದ ಮೂಲದ ಆರೋಪಿ ಆಕುಲಾ ಪ್ರವೀಣ್ ಎಂಬಾತನನ್ನು ಬಂಧಿಸಿದ್ದಾರೆ. ಈತ ತನ್ನ ಕುಟುಂಬದೊಂದಿಗೆ ಹೈದರಾಬಾದ್‌ಗೆ ಬಂದು ನೆಲೆಸಿದ್ದ. ಬಂಧಿತನಿಂದ ಎರಡು ನಕಲಿ ಗುರುತಿನ ಚೀಟಿ ಮತ್ತು 5.44 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.
ಪ್ರವೀಣ್ ತನ್ನ ಸ್ನೇಹಿತ ವರಕಾಂಥಮ್ ಅನಿಲ್ ರೆಡ್ಡಿ ಎಂಬಾತನಿಗೆ 3.61 ಲಕ್ಷ ರೂ. ವಂಚಿಸಿದ್ದ. ಹೈದರಾಬಾದ್‌ನ ಡಿಆರ್‌ಡಿಒದ ಹಣಕಾಸು ಇಲಾಖೆಯಲ್ಲಿ ಮೇಲ್ವಿಚಾರಕ ಕೆಲಸ ನೀಡುವುದಾಗಿ ಭರವಸೆ ನೀಡಿ ಮೋಸ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತಾನು ಡಿಆರ್‌ಡಿಒ ಅಧ್ಯಕ್ಷ ಸತೀಶ್ ರೆಡ್ಡಿ ಎಂದು ತನ್ನ ಸ್ನೇಹಿತ ಅನಿಲ್ನನ್ನು ನಂಬಿಸಿದ್ದ ಪ್ರವೀಣ್, ವ್ಯಾಟ್ಸ್ ಆ್ಯಪ್ ಚಾಟಿಂಗ್ ಮೂಲಕ ಸಂಪರ್ಕದಲ್ಲಿರುತ್ತಿದ್ದ. ಸ್ನೇಹಿತ ಅನಿಲ್ ರೆಡ್ಡಿಗೆ ಒಂದು ನಕಲಿ ಐಡಿ ಹಾಗೂ ಪ್ರಾಜೆಕ್ಟ್ ವರ್ಕ್ ಕೂಡ ನೀಡಿದ್ದ.
ಹೀಗೆ ಇಬ್ಬರ ಐಡಿ, ವ್ಯಾಟ್ಸ್ ಆ್ಯಪ್ ಸ್ಟೇಟಸ್ಗಳನ್ನು ಬಳಸಿಕೊಂಡು ಇನ್ನೂ ಹಲವು ಸ್ನೇಹಿತರಿಗೆ ಡಿಆರ್‌ಡಿಒದಲ್ಲಿ ಉದ್ಯೋಗ ಕೊಡಿಸುವುವೆನೆಂದು ಪ್ರವೀಣ್ ನಂಬಿಸಿ ಮೋಸ ಮಾಡಿದ್ದಾನೆ. ಉದ್ಯೋಗ ಕೊಡಿಸುವ ನೆಪದಲ್ಲಿ ಭಾರೀ ಮೊತ್ತದ ಹಣ ಪಡೆದಿದ್ದಲ್ಲದೆ, ನಕಲಿ ಐಡಿ ಕಾರ್ಡ್ ಹಾಗೂ ಉದ್ಯೋಗ ಗಿಟ್ಟಿಸಿಕೊಂಡ ಬಗ್ಗೆ ನಕಲಿ ನೇಮಕಾತಿ ಪತ್ರಗಳನ್ನು ನೀಡಿದ್ದ.