ಹೈದರಾಬಾದ್ : ಇಲ್ಲಿನ ಉದ್ಯಮಿಯೊಬ್ಬರ ಹತ್ಯೆಗೆ ಯತ್ನಿಸಿ, ದರೋಡೆ ಮಾಡಿದ್ದ ನಾಲ್ವರು ನೇಪಾಳಿಗಳನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 90 ಗ್ರಾಂ ಚಿನ್ನ, 1 ಲಕ್ಷ ರೂ. ನಗದು, 2 ವಾಚ್, ಮೊಬೈಲ್, ನಿದ್ದೆ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಕ್ಟೋಬರ್ 19ರಂದು ಈ ಕೃತ್ಯ ನಡೆದಿದ್ದು, ಅಕ್ಟೋಬರ್ 25ರಂದು ಲಖನೌನಲ್ಲಿ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಎಂ.ಭಾಗವತ್ ತಿಳಿಸಿದ್ದಾರೆ. ಮಧ್ಯಪ್ರದೇಶ, ಉತ್ತರಪ್ರದೇಶ ಪೊಲೀಸರು ಮತ್ತು ಎಸ್‌ಎಸ್‌ಬಿ ಅಧಿಕಾರಿಗಳ ಸಹಯೋಗದೊಂದಿಗೆ ಮಲ್ಕಂಗಿರಿ, ಐಟಿ ಸೆಲ್, ರಾಚಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ.
ಉದ್ಯಮಿ ಪ್ರದೀಪ್ ಕುಮಾರ್ ಮತ್ತು ಅವರ 70 ವರ್ಷದ ತಾಯಿ ಚಹಾದಲ್ಲಿ ನಿದ್ದೆ ಮಾತ್ರೆ ಹಾಕಿ ಕೊಲ್ಲಲು ಯತ್ನಿಸಿದ್ದಾರೆ. ಕುಮಾರ್ ಸಹಾಯಕರಾದ ಅರ್ಜುನ್ ಮತ್ತು ಅವರ ಪತ್ನಿ ಈ ದುಷ್ಕೃತ್ಯವೆಸಗಿದ್ದಾರೆ. ಅವರು ಪ್ರಜ್ಞೆ ತಪ್ಪಿದ ಬಳಿಕ ಮತ್ತಿಬ್ಬರು ಸಹಚರರೊಂದಿಗೆ ಸೇರಿ ಮನೆಯಲ್ಲಿದ್ದ 180 ಗ್ರಾಂ ಚಿನ್ನ, 400 ಗ್ರಾಂ ಬೆಳ್ಳಿ, 10 ಲಕ್ಷ ರೂಪಾಯಿ ಹಣವನ್ನ ದೋಚಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕುಮಾರ್, ರಾಚಕೊಂಡ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕನಿಷ್ಟ 15 ತಂಡಗಳನ್ನು ರಚಿಸಿದ ಪೊಲೀಸ್ ಇಲಾಖೆ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿತ್ತು. ಬಳಿಕ ಲಖನೌನಲ್ಲಿ ಆರೋಪಿಗಳನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು. ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.