ಹೈದರಾಬಾದ್:ಗ್ಯಾಂಗ್ರೇಪ್ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳ ಎನ್ಕೌಂಟರ್ ಪ್ರಕರಣವನ್ನ ತನಿಖೆ ನಡೆಸಲು ನೇಮಕಗೊಂಡಿರುವ ಮೂವರು ಸದಸ್ಯರ ಆಯೋಗದ ಅಧಿಕಾರ ಮತ್ತು ಕರ್ತವ್ಯಗಳನ್ನ ಸುಪ್ರೀಂಕೋರ್ಟ್ ವ್ಯಾಖ್ಯಾನಿಸಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ವಿ.ಎಸ್. ಸಿರ್ಪುರ್ಕರ್ ನೇತೃತ್ವದ ಆಯೋಗ ನಾಲ್ವರ ಸಾವಿಗೆ ಕಾರಣವಾದ ಸನ್ನಿವೇಶಗಳನ್ನ ತನಿಖೆ ನಡೆಸಸಲಿದೆ. ಈ ವೇಳೆ ಯಾವುದೇ ಲೋಪ ನಡೆದಿದೆಯೇ ಎಂದು ಆಯೋಗ ಖಚಿತಪಡಿಸಿಕೊಳ್ಳುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಈ ಘಟನೆಯಲ್ಲಿ ಯಾವುದೇ ಅಧಿಕಾರಿ ಲೋಪ ಎಸಗಿರುವುದು ಕಂಡುಬಂದರೆ, ಅವರ ವಿರುದ್ಧ ಕರ್ತವ್ಯ ಲೋಪದ ಆರೋಪದ ಮೇಲೆ ಪ್ರಕರಣ ದಾಖಲಿಸುವಂತೆ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪೀಠ ತಿಳಿಸಿದೆ.
ಆಯೋಗದ ಅಧ್ಯಕ್ಷರಿಗೆ 1.5 ಲಕ್ಷ ರೂ. ಮತ್ತು ಸದಸ್ಯರಿಗೆ 1 ಲಕ್ಷ ರೂ. ಸಂಭಾವನೆಯನ್ನು ಉನ್ನತ ನ್ಯಾಯಾಲಯವು ನಿಗದಿಪಡಿಸಿದೆ. ಮೂವರು ಸದಸ್ಯರ ಆಯೋಗಕ್ಕೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ರಕ್ಷಣೆ ನೀಡಲಿದೆ ಎಂದು ನ್ಯಾಯಾಲಯ ಆದೇಶಿಸಿದೆ.
ಬಾಂಬೆ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶೆ ರೇಖಾ ಸೊಂಡೂರ್ ಬಲ್ಡೋಟಾ ಮತ್ತು ಮಾಜಿ ಸಿಬಿಐ ನಿರ್ದೇಶಕ ಡಿ.ಆರ್.ಕಾರ್ತಿಕೇಯನ್ ಅವರನ್ನ ಒಳಗೊಂಡ ಆಯೋಗವು ತನ್ನ ವರದಿಯನ್ನು ವಿಚಾರಣೆಯ ಮೊದಲ ದಿನದಿಂದ ಆರು ತಿಂಗಳಲ್ಲಿ ಅವಧಿಯಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಿದೆ.
ಪಶು ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮೊಹಮ್ಮದ್ ಆರಿಫ್, ಚಿಂತಕುಂಟ ಚೆನ್ನಕೇಶಾವುಲು, ಜೋಲು ಶಿವ ಮತ್ತು ಜೊಲ್ಲು ನವೀನ್ ಎಂಬ ನಾಲ್ವರು ಆರೋಪಿಗಳು 2019 ಡಿಸೆಂಬರ್ 6 ರಂದು ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಎನ್ಕೌಂಟರ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.