ಪುಣೆ(ಮಹಾರಾಷ್ಟ್ರ): ಪತಿರಾಯ ತನ್ನ ಪತ್ನಿ ರಿಮೋಟ್ ಕೊಡಲಿಲ್ಲ ಎಂಬ ಸಣ್ಣ ಕಾರಣಕ್ಕೆ ಆಕೆಯ ಮುಂಗೈಯನ್ನು ಬಲವಾಗಿ ಕಚ್ಚಿದ್ದಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿ ಬಂದ ವಿಚಿತ್ರ ಪ್ರಕರಣವೊಂದು ಮಹಾರಾಷ್ಟ್ರದ ಪುಣೆಯಲ್ಲಿ ಬೆಳಕಿಗೆ ಬಂದಿದೆ.
ವಿಜಯಶ್ರೀ ವಿಠೋಲ್ ಗರಾದ್ (30) ಎಂಬ ಮಹಿಳೆ ಇತ್ತೀಚೆಗೆ ತನ್ನ ಪತಿ ವಿರುದ್ಧ ದೂರು ನೀಡಲು ಇಲ್ಲಿನ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಗೆ ತೆರಳಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಈ ದಂಪತಿ ತಮ್ಮ ಮನೆಯಲ್ಲಿ ಟಾಲಿವುಡ್ ಆ್ಯಕ್ಷನ್ ಸಿನಿಮಾವೊಂದನ್ನು ವೀಕ್ಷಿಸುತ್ತಿದ್ದರು. ತುಂಬಾ ಕುತೂಹಲದಿಂದ ಟಿವಿ ನೋಡುತ್ತಿದ್ದ ಪತ್ನಿಗೆ ಚಾನಲ್ ಚೇಂಜ್ ಮಾಡಲು ಪತಿ ರಿಮೋಟ್ ಕೇಳಿದ್ದಾನೆ. ಈ ವೇಳೆ ಆಕೆ ರಿಮೋಟ್ ಕೊಡಲು ಒಪ್ಪದಿದ್ದಾಗ ಜಗಳ ಅತಿರೇಕಕ್ಕೆ ತಿರುಗಿ ಆಕೆಯ ಮುಂಗೈಗೆ ಪತಿರಾಯ ಕಚ್ಚಿದ್ದ.
ಈ ದಂಪತಿ ಮದುವೆಯಾಗಿ ಸುಮಾರು 13 ವರ್ಷ ಕಳೆದಿದ್ದು, 12 ಹಾಗೂ 9 ವರ್ಷದ ಇಬ್ಬರು ಮಕ್ಕಳು ಕೂಡ ಇದ್ದಾರೆ. ಘಟನೆ ಸಂಬಂಧ ಪತ್ನಿಯ ದೂರಿನ ಮೇರೆಗೆ ವಿಠೋಲ್ನನ್ನು ಪೊಲೀಸರು ಬಂಧಿಸಿದ್ದರು. 10 ಸಾವಿರ ರೂ. ಜಾಮೀನಿನ ಮೇಲೆ ವಿಠೋಲ್ನನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.