ನವದೆಹಲಿ: ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ರೈತರು ಆರಂಭಿಸಿರುವ 'ದೆಹಲಿ ಚಲೋ ಚಳವಳಿ' 19 ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಇಂದು ಒಂದು ದಿನದ ಮಟ್ಟಿಗೆ ಪ್ರತಿಭಟನಾ ನಿರತ ರೈತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಸಿಂಘು ಗಡಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ಗುರ್ನಮ್ ಸಿಂಗ್ ಚಾದುನಿ, ಇಂದು ಬೆಳಗ್ಗೆ 8 ರಿಂದ ಆರಂಭಿಸಿರುವ ಉಪವಾಸ ಸತ್ಯಾಗ್ರಹ ಸಂಜೆ 5 ರವರೆಗೆ ನಡೆಯಲಿದೆ. ರೈತ ಮುಖಂಡರು ಆಯಾ ಸ್ಥಳಗಳಲ್ಲಿ ಉಪವಾಸ ಸತ್ಯಾಗ್ರಹ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ಇಂದು ಒಂದು ದಿನದ ಉಪವಾಸವನ್ನು ಮಾಡುವುದಾಗಿ ತಿಳಿಸಿದ್ದಾರೆ. ಮತ್ತು ಕೇಂದ್ರ ರೈತ ವಿರೋಧಿ ನೂತನ ಕೃಷಿ ಕಾಯ್ದೆಯನ್ನ ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.
ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿ ಹಾಗೂ ಹರಿಯಾಣ-ರಾಜಸ್ಥಾನ ಗಡಿಯಲ್ಲಿ ಪೊಲೀಸರು ಪ್ರತಿಭಟನಾಕಾರರಿಗೆ ತಡೆವೊಡ್ಡಿದ ಹಿನ್ನೆಲೆ ಈ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಈ ನಡುವೆ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ನರೇಂದ್ರ ತೋಮರ್ ಅವರೊಂದಿಗೆ ಭಾನುವಾರ ತಡರಾತ್ರಿ ನಡೆದ ಸಭೆಯ ನಂತರ ಪ್ರತಿಭಟನಾಕಾರ ರೈತರ ಗುಂಪೊಂದು ನೋಯ್ಡಾ-ದೆಹಲಿ ರಸ್ತೆಯಲ್ಲಿ ಪ್ರತಿಭಟನೆ ಕೈಬಿಟ್ಟಿದ್ದು, ಇದಕ್ಕೆ ಗುರ್ನಮ್ ಸಿಂಗ್ ಚಾದುನಿ ಕಿಡಿಕಾರಿದ್ದಾರೆ. ಪ್ರತಿಭಟನೆಯನ್ನು ಕೊನೆಗೊಳಿಸುವ ಮತ್ತು ಸರ್ಕಾರ ಅಂಗೀಕರಿಸಿದ ಕಾನೂನುಗಳ ಪರವಾಗಿರುವುದಾಗಿ ಹೇಳುವ ಕೆಲವು ಗುಂಪುಗಳಿವೆ, ಅಂತಹ ಗುಂಪುಗಳು ನಮ್ಮೊಂದಿಗಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇವೆ. ಈ ಗುಂಪುಗಳು ನಮ್ಮ ಪ್ರತಿಭಟನೆಯನ್ನು ಹಾಳುಮಾಡಲು ಸಂಚು ಹೂಡಿದ್ದಾರೆ. ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಹಳಿ ತಪ್ಪಿಸಲು ಸರ್ಕಾರ ಸಹ ಸಂಚು ರೂಪಿಸುತ್ತಿದೆ "ಎಂದು ಚಾದುನಿ ಆರೋಪಿಸಿದ್ದಾರೆ.
ಇತ್ತ ಕೇಂದ್ರ ಸರ್ಕಾರವು ರೈತರ ಪ್ರತಿಭಟನೆ ನಿಲ್ಲಿಸಲು ಹೆಚ್ಚು ಪರಿಣಾಮಕಾರಿಯಾದ ಮಾರ್ಗಗಳನ್ನು ಹುಡುಕುತ್ತಿದೆ. ಅದಕ್ಕಾಗಿ ಭಾನುವಾರ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಕೇಂದ್ರ ಸಚಿವ ಸೋಮ್ ಪ್ರಕಾಶ್ ಅವರು ಪಂಜಾಬ್‌ನ ಬಿಜೆಪಿ ಮುಖಂಡರೊಂದಿಗೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು.
ರೈತರೊಂದಿಗೆ ಮುಂದಿನ ಸುತ್ತಿನ ಮಾತುಕತೆ ಕುರಿತು ಕೇಂದ್ರ ಸಚಿವ ಕೈಲಾಶ್ ಚೌಧರಿ ಪ್ರತಿಕ್ರಿಯಿಸಿದ್ದು, ಶೀಘ್ರದಲ್ಲೇ ಸಭೆ ಕರೆಯಲಾಗುವುದು. ನಾವು ಚರ್ಚೆಗೆ ಸಿದ್ಧರಿದ್ದೇವೆ. ಆದರೆ ದಿನಾಂಕವನ್ನು ಅಂತಿಮಗೊಳಿಸಲಾಗಿಲ್ಲ" ಎಂದು ತಿಳಿಸಿದ್ದಾರೆ. ಮುಂದಿನ ಸಭೆಯಲ್ಲಿ, ಸಮಸ್ಯೆಯನ್ನು ಪರಿಹರಿಸುವ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ಅವರು ತಿಳಿಸಿದ್ದಾರೆ.