ಕರ್ನಾಟಕ

karnataka

ETV Bharat / bharat

ವಿಶೇಷ ಅಂಕಣ: ವೈರಸ್‌ ಮೊದಲೋ ಮನುಷ್ಯ ಮೊದಲೋ..?

ವೈರಸ್‌ ಕುರಿತಂತೆ ವಿಜ್ಞಾನಿಗಳ ಸಮುದಾಯ ಹಲವಾರು ಸಂದರ್ಭಗಳಲ್ಲಿ ವಿರೋಧಿ ದೃಷ್ಟಿಕೋನಗಳನ್ನು ವ್ಯಕ್ತಪಡಿಸುತ್ತ ಬಂದಿದೆ. ಪ್ರಾರಂಭದಲ್ಲಿ ವೈರಸ್‌ಗಳನ್ನು ಜೈವಿಕ ರಾಸಾಯನಿಕ ವ್ಯವಸ್ಥೆ ಎಂದು ಪರಿಗಣಿಸಲಾಗಿತ್ತು. ಮಾಲಿನ್ಯಯುಕ್ತ ಗಾಳಿಯಿಂದ ವೈರಸ್‌ಗಳು ಪ್ರಸರಣಗೊಳ್ಳುತ್ತವೆ ಎಂದು ಗ್ರೀಕರು ಮತ್ತು ರೋಮನ್ನರು ಹೇಳಿದ್ದರು.

corona updates in india
ಭಾರತದಲ್ಲಿ ಕೊರೊನಾ ಪ್ರಕರಣಗಳು

By

Published : Apr 26, 2020, 6:17 PM IST

ನವದೆಹಲಿ:ವೈರಸ್‌ಗಳಿಗೆ ತಮ್ಮದೇ ಆದ ಸ್ವಂತ ಚಯಾಪಚಯ ವ್ಯವಸ್ಥೆಯಾಗಲಿ, ಮಿದುಳಾಗಲಿ ಇಲ್ಲ. ಅವು ತಮ್ಮದೇ ಆದ ಸ್ವಂತ ಸ್ಥಿತಿಯಲ್ಲಿಯೂ ಇರಲಾರವು. ಆದರೆ, ಲಕ್ಷಗಟ್ಟಲೇ ಸಂಖ್ಯೆಯಲ್ಲಿ ವರ್ಧಿಸುತ್ತಾ ಅವು ಮಾನವರಿಗೆ ಕಂಟಕವಾಗಿ ಪರಿಣಮಿಸಬಲ್ಲವು. ಅವುಗಳ ಸಾಲಿಗೆ ಹೊಸ ಸೇರ್ಪಡೆ ಎಂದರೆ ಕೊರೊನಾ ವೈರಸ್.‌

ಜೀವ ವಿಕಾಸದ ಹಾದಿಯಲ್ಲಿ ವೈರಸ್‌ಗಳ ವಿರುದ್ಧ ಮನುಷ್ಯರು ಹೋರಾಡುತ್ತಲೇ ಬಂದಿದ್ದಾರೆ. ಬೇಟೆ ಮತ್ತು ಆಹಾರ ಸಂಗ್ರಹಣೆಯ ಜೀವನವನ್ನು ತೊರೆದು ನಮ್ಮ ಪೂರ್ವಜರು ಕೃಷಿ ಮತ್ತು ಪಶುಸಂಗೋಪನೆಯತ್ತ ವಾಲಿದಾಗ ನಾವು ಹಲವಾರು ರೋಗಕಾರಕಗಳ ಸಂಪರ್ಕಕ್ಕೆ ಬಂದೆವು. ಯಾವಾಗ ಜನ ಗುಂಪಾಗಿ ವಾಸಿಸತೊಡಗಿದರೋ ಹಾಗೂ ಜನಸಂಖ್ಯೆ ಹೆಚ್ಚುತ್ತ ಹೋಯಿತೋ, ಆಗ ಹೊಸ ರೋಗಕಾರಕಗಳು ಕಾಣಿಸಿಕೊಂಡವು. ಎಚ್‌1ಎನ್‌1, ಸಾರ್ಸ್‌, ಎಚ್‌ಐವಿ, ಕೋವಿಡ್-19; ಇವೆಲ್ಲ ಪ್ರಾಣಿಗಳಿಂದ ಮಾನವನಿಗೆ ಹರಡಿರುವ ರೋಗಗಳಾಗಿವೆ.

ವೈರಸ್‌ ಕುರಿತಂತೆ ವಿಜ್ಞಾನಿಗಳ ಸಮುದಾಯ ಹಲವಾರು ಸಂದರ್ಭಗಳಲ್ಲಿ ವಿರೋಧಿ ದೃಷ್ಟಿಕೋನಗಳನ್ನು ವ್ಯಕ್ತಪಡಿಸುತ್ತ ಬಂದಿದೆ. ಪ್ರಾರಂಭದಲ್ಲಿ ವೈರಸ್‌ಗಳನ್ನು ಜೈವಿಕ ರಾಸಾಯನಿಕ ವ್ಯವಸ್ಥೆ ಎಂದು ಪರಿಗಣಿಸಲಾಗಿತ್ತು. ಮಾಲಿನ್ಯಯುಕ್ತ ಗಾಳಿಯಿಂದ ವೈರಸ್‌ಗಳು ಪ್ರಸರಣಗೊಳ್ಳುತ್ತವೆ ಎಂದು ಗ್ರೀಕರು ಮತ್ತು ರೋಮನ್ನರು ಹೇಳಿದ್ದರು. 18ನೇ ಶತಮಾನದಲ್ಲಿ, ಹಳದಿ ಜ್ವರಕ್ಕೆ (ಒಂದು ವಿಧದ ಸೊಳ್ಳೆಯಿಂದ ಹರಡುವ ವೈರಸ್‌ ಸೋಂಕು) ಕೊಳೆಯುತ್ತಿರುವ ಕಾಫಿ ಬೀಜಗಳೇ ಕಾರಣ ಎಂದು ದೂರಲಾಗಿತ್ತು.

17 ನೇ ಶತಮಾನದಲ್ಲಿ ಸೂಕ್ಷ್ಮದರ್ಶಕ ಯಂತ್ರದ ಆವಿಷ್ಕಾರದ ನಂತರ, ವಿಜ್ಞಾನಿಗಳು ಸೂಕ್ಷ್ಮಜೀವಿಗಳ ಅಧ್ಯಯನವನ್ನು ಪ್ರಾರಂಭಿಸಿದರು. ಬ್ಯಾಕ್ಟೀರಿಯಾಗಳು ಮೊದಲು ಕಂಡು ಹಿಡಿಯಲ್ಪಟ್ಟವು. ೧೯ನೇ ಶತಮಾನದ ಕೊನೆಯ ಭಾಗದಲ್ಲಿ, ರೇಬಿಸ್‌ನಂತಹ ಕಾಯಿಲೆಗಳಿಗೆ ಬ್ಯಾಕ್ಟೀರಿಯಾಗಳಿಗಿಂತ ಚಿಕ್ಕದಾದ ಸೂಕ್ಷ್ಮಜೀವಿಗಳು ಕಾರಣವಾಗುತ್ತವೆ ಎಂಬುದು ಗೊತ್ತಾಯಿತು. ಸಸ್ಯಶಾಸ್ತ್ರಜ್ಞ ಹಾಗೂ ವೈರಾಣುಶಾಸ್ತ್ರದ ಜನಕರಲ್ಲಿ ಒಬ್ಬನಾಗಿರುವ ರಷ್ಯದ ದ್ಮಿತ್ರಿ ಇವಾನೊವ್‌ಸ್ಕಿ 1892ರಲ್ಲಿ ಮೊದಲ ಬಾರಿ ವೈರಸ್ಸನ್ನು ಕಂಡು ಹಿಡಿದ. ಅದಕ್ಕೆ ಟೊಬ್ಯಾಕೊ ಮೊಸಾಯಿಕ್‌ ವೈರಸ್‌ ಎಂದು ಹೆಸರಿಡಲಾಯಿತು. ಸ್ಫಟಿಕೀಕರಣ ತಂತ್ರಜ್ಞಾನದ ಮೂಲಕ ವೆಂಡೆಲ್‌ ಎಂ. ಸ್ಟ್ಯಾನ್ಲಿ ಎಂಬ ವಿಜ್ಞಾನಿಯು ಟಿಎಂವಿ ಕುಟುಂಬದ ವೈರಸ್‌ಗಳನ್ನು 1935ರಲ್ಲಿ ಸಂಶೋಧಿಸಿದ.1940ರಲ್ಲಿ ಎಲೆಕ್ಟ್ರಾನ್‌ ಸೂಕ್ಷ್ಮದರ್ಶಕ ಯಂತ್ರವನ್ನು ಕಂಡು ಹಿಡಿದ ನಂತರ, ವೈರಸ್‌ಗಳನ್ನು ಸ್ಪಷ್ಟವಾಗಿ ಅಧ್ಯಯನಕ್ಕೆ ಒಳಪಡಿಸುವುದು ಸಾಧ್ಯವಾಗಿದೆ.

ವೈರಸ್‌ಗಳು ನ್ಯೂಕ್ಲಿಯಿಕ್‌ ಆಮ್ಲದ ವಂಶವಾಹಿ ವಸ್ತು ಹಾಗೂ ಅದನ್ನು ಆವರಿಸಿರುವ ಪ್ರೋಟೀನ್‌ ಕವಚವನ್ನು ಮುಖ್ಯ ರಚನೆಯಾಗಿ ಹೊಂದಿರುತ್ತವೆ. ಇವು ಬ್ಯಾಕ್ಟೀರಿಯಾಗಳಿಗಿಂತ ೧೦೦ರಿಂದ ೧೦೦೦ ಪಟ್ಟು ಚಿಕ್ಕವು. ಅವುಗಳ ಸರಾಸರಿ ಅಗಲ ೨೦ರಿಂದ ೪೦೦ ನ್ಯಾನೊ ಮೀಟರ್‌ ಮಾತ್ರ. ತಮ್ಮ ಉಳಿವಿಗಾಗಿ ಅವು ಸಸ್ಯಗಳು, ಪ್ರಾಣಿಗಳು ಮತ್ತು ಮನುಷ್ಯರನ್ನು ಅವಲಂಬಿಸಿವೆ. ಎಲ್ಲಕ್ಕಿಂತ ಹೆಚ್ಚಾಗಿ, ಆಶ್ರಿತ ಜೀವಿಯ ದೇಹದ ಆಚೆಗೆ ಅವು ಸ್ವತಂತ್ರವಾಗಿ ಬದುಕಲಾರವು. ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವ ಯಾವುದೇ ಚಯಾಪಚಯ ವ್ಯವಸ್ಥೆಯನ್ನು ಅವು ಹೊಂದಿಲ್ಲದಿರುವುದರಿಂದ ಬಹಳಷ್ಟು ವಿಜ್ಞಾನಿಗಳು ಅವನ್ನು ಜೀವಂತ ಸೂಕ್ಷ್ಮಜೀವಿಗಳೆಂದು ಪರಿಗಣಿಸುವುದಿಲ್ಲ. ಆದರೆ, ಡಿಎನ್‌ಎ ಅಥವಾ ಆರ್‌ಎನ್‌ಎಗಳನ್ನು ವಂಶವಾಹಿ ವಸ್ತುಗಳಾಗಿ ಹೊಂದಿರುವುದರಿಂದ ಅವನ್ನು ಪ್ರತ್ಯೇಕ ರೀತಿಯ ಜೀವಿಗಳೆಂದು ಪರಿಗಣಿಸಲಾಗಿದೆ.

ಸೂಕ್ತ ಆಶ್ರಿತ ಜೀವಿಯನ್ನು ಹುಡುಕಲು ಸುಲಭವಾಗುವಂತೆ, ವೈರಸ್‌ಗಳ ಹೊರಭಾಗದಲ್ಲಿ ಸ್ವೀಕೃತಗಳಿವೆ. ಸೂಕ್ತ ಆಶ್ರಿತ ಜೀವಿ ಸಿಕ್ಕ ಕೂಡಲೇ ಈ ಸ್ವೀಕೃತಗಳ ಮೂಲಕ ಅದಕ್ಕೆ ಅಂಟಿಕೊಳ್ಳುವ ವೈರಸ್‌ಗಳು ಆಶ್ರಿತ ಜೀವಕೋಶಗಳನ್ನು ಕಬಳಿಸುತ್ತವೆ. ಅತ್ಯಂತ ಕ್ಷಿಪ್ರವಾಗಿ ದ್ವಿಗುಣಗೊಳ್ಳುತ್ತ ಆಶ್ರಿತ ಜೀವಕೋಶಗಳನ್ನು ನಾಶ ಮಾಡುತ್ತವೆ. ಇದರಿಂದಾಗಿ ದೇಹದ ಇತರ ಭಾಗಗಳಿಗೂ ಸೋಂಕು ಬಲುಬೇಗ ಹರಡಿ, ಆಶ್ರಿತ ಜೀವಿಯು ಕಾಯಿಲೆಪೀಡಿತವಾಗಲು ಕಾರಣವಾಗುತ್ತವೆ.

ವೈರಸ್‌ಗಳು ಒಂದು ಕಡೆಯಿಂದ ಇನ್ನೊಂದು ಕಡೆ ಚಲಿಸಲಾರವು. ಹೀಗಿದ್ದರೂ, ಆಶ್ರಿತ ಜೀವಿಯಿಂದ ಹೊರಹಾಕಲ್ಪಟ್ಟ ಅವು ಗಾಳಿಯಲ್ಲಿ ಕೆಲ ಕಾಲ ಇರಬಲ್ಲವು. ನೀರಿನಲ್ಲಿ ಸಹ ಅವು ಬದುಕುಳಿಯಬಲ್ಲವು. ಕೈ ಕುಲುಕುವುದು, ಸೀನುವುದು ಅಥವಾ ಕೆಮ್ಮುವುದರ ಮೂಲಕ ಅವು ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಲ್ಲವು. ತಂಪು ಅಥವಾ ಒಣ ಹವೆಯಲ್ಲಿ ದೀರ್ಘಕಾಲ ಬದುಕುಳಿಯಬಲ್ಲವು. ಎಬೊಲಾ ವೈರಸ್ಸು ಸೋಂಕಿತ ವ್ಯಕ್ತಿಗಳ ರಕ್ತ, ಮಲ ಅಥವಾ ಕಫದ ಮೂಲಕ ಹರಡಿತ್ತು. ಡೆಂಗೆ, ಝಿಕಾ, ಚಿಕೂನ್‌ಗುನ್ಯ ಮತ್ತು ಪಶ್ಚಿಮ ನೈಲ್‌ ವೈರಸ್‌ಗಳು ಸೊಳ್ಳೆಗಳಿಂದ ಹರಡುತ್ತವೆ.

ವೈರಸ್‌ಗಳು ಅತ್ಯಂತ ವೇಗವಾಗಿ ವಿಕಾಸವಾಗುತ್ತವೆ. ಆಶ್ರಿತ ಜೀವಕೋಶದಲ್ಲಿ ವೈರಸ್‌ನ ವಂಶವಾಹಿ ವಸ್ತು ಪ್ರವೇಶ ಮಾಡಿದಾಗ, ಕೆಲವೇ ಗಂಟೆಗಳ ಅವಧಿಯಲ್ಲಿ ಅದು ದ್ವಿಗುಣಗೊಳ್ಳುತ್ತವೆ. ಈ ಮಹತ್ವದ ಪ್ರಕ್ರಿಯೆಗೆ ಅವು ಆಶ್ರಿತ ಜೀವಕೋಶಗಳನ್ನೇ ಅವಲಂಬಿಸಿರುತ್ತವೆ. ಕ್ಷಿಪ್ರ ವಿದಳನದ ಮೂಲಕ ಅವು ಆಶ್ರಿತ ದೇಹದಲ್ಲಿರುವ ಲಸಿಕೆಗಳು, ಔಷಧಿಗಳು ಹಾಗೂ ರೋಗನಿರೋಧಕ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳುತ್ತವೆ. ಪುರನತ್ಪತ್ತಿ ಶಕ್ತಿಯನ್ನು ಕಳೆದುಕೊಂಡ ಅಳಿದುಳಿದ ಜೀವಕೋಶಗಳ ಭಾಗಗಳು ಸಹ ವೈರಸ್‌ಗಳಾಗಿ ಬದಲಾಗುತ್ತಿರಬಹುದು ಎಂದೂ ಕೆಲವು ತಜ್ಞರು ನಂಬುತ್ತಾರೆ. ಇನ್ನು ಕೆಲವರ ಪ್ರಕಾರ, ಈ ಭೂಮಿಯ ಮೇಲೆ ನೆಲೆಸಿದ ಮೊದಲ ಜೀವಿಗಳ ಪೈಕಿ ವೈರಸ್‌ಗಳು ಕೂಡಾ ಸೇರಿವೆ.

ಕೆಲ ದೊಡ್ಡ ವೈರಸ್‌ಗಳು ಆಶ್ರಿತ ಜೀವಕೋಶದ ಹಂಗಿಲ್ಲದೇ ಸ್ವತಂತ್ರವಾಗಿರುತ್ತವೆ. ಇಂತಹ ವೈರಸ್‌ಗಳೇ ನಮ್ಮ ಗ್ರಹದ ಮೊದಲ ಜೀವ ಘಟಕಗಳಾಗಿರಬಹುದು ಎಂದು ಹಲವಾರು ವಿಜ್ಞಾನಿಗಳು ನಂಬುತ್ತಾರೆ. ಪ್ರಾರಂಭದ ಬಹುಕೋಶೀಯ ಅಂಗಾಂಶ ವ್ಯವಸ್ಥೆಯ ವಿಕಸನಕ್ಕೆ ಇಂತಹ ವೈರಸ್‌ಗಳೇ ಕಾರಣವಾಗಿವೆ ಎಂದು ಅವರು ಭಾವಿಸುತ್ತಾರೆ. ಮನುಷ್ಯನ ಅರ್ಧಕ್ಕೂ ಹೆಚ್ಚು ಡಿಎನ್‌ಎ ವೈರಸ್‌ಗಳಿಂದ ಬರುತ್ತದೆ. ನಮ್ಮ ಪೂರ್ವಿಕರ ವೀರ್ಯ ಮತ್ತು ಅಂಡಾಣುಗಳಿಗೆ ಅಂಟಿಕೊಳ್ಳುವ ಮೂಲಕ, ಅವು ನಮ್ಮ ಡಿಎನ್‌ಎ (ವಂಶವಾಹಿನಿ) ಭಾಗವಾಗಿವೆ. ಆದರೆ, ಬಹುತೇಕ ಪ್ರಾರಂಭಿಕ ವೈರಸ್‌ಗಳು ಈಗ ನಶಿಸಿ ಹೋಗಿವೆ.

ವೈರಸ್‌ ಎಂಬ ಶಬ್ದ ಹುಟ್ಟಿದ್ದು ಲ್ಯಾಟಿನ್‌ನ ವೈರುಲೆಂಟಸ್‌ ಶಬ್ದದ ಮೂಲಕ. ಲೋಳೆದ್ರವ ಅಥವಾ ವಿಷ ಎಂದು ಇದರ ಅರ್ಥ. 19ನೇ ಶತಮಾನದಲ್ಲಿ, ಭೀಕರ ಕಾಯಿಲೆ ತರುವ ವಸ್ತುವನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು. ಸರಳ ವೈರಸ್ಸನ್ನು ಪ್ರಯೋಗಾಲಯದಲ್ಲಿಯೇ ಸುಲಭವಾಗಿ ಸೃಷ್ಟಿಸಬಹುದು. ಜೈವಿಕ ವಸ್ತುಗಳು, ಪ್ರೋಟೀನ್‌ ಕವಚ ಮತ್ತು ಪ್ರೋಟೀನ್‌ ಕೊಕ್ಕೆಗಳನ್ನು ಸೂಕ್ತ ವಾತಾವರಣದಲ್ಲಿ ನೀರಿನಲ್ಲಿ ಕಲೆಸುವ ಮೂಲಕ ವೈರಸ್‌ ಕಣಗಳನ್ನು ಯಾರು ಬೇಕಾದರೂ ಸೃಷ್ಟಿಸಬಹುದು. ದುರದೃಷ್ಟವಶಾತ್‌, ಮನುಷ್ಯರು ವೈರಸ್‌ಗಳ ಜೊತೆಯೇ ಬದುಕಬೇಕಾದ ಅನಿವಾರ್ಯತೆಯಿದೆ.

ವೈರಸ್‌ಗಳ ಜೀವಶಾಸ್ತ್ರ ಮತ್ತು ವೈರಲ್‌ ರೋಗಗಳ ಅಧ್ಯಯನವೇ ವೈರಾಣುಶಾಸ್ತ್ರ. ಅಪಾಯಕಾರಿ ವೈರಸ್‌ಗಳಿಂದ ಮನುಷ್ಯರನ್ನು ರಕ್ಷಿಸಲು ಇದು ನೆರವಾಗುತ್ತಿದೆ. ಪೋಲಿಯೋ, ಸಿಡುಬು ಮತ್ತು ರುಬೆಲ್ಲಾದಂತಹ ಮಾರಕ ಕಾಯಿಗಳ ವಿರುದ್ಧ ಹೋರಾಡಲು ಲಸಿಕೆಗಳನ್ನು ಈ ಮೂಲಕ ಅಭಿವೃದ್ಧಿಪಡಿಸಲಾಯಿತು. ಎಲ್ಲಿಯವರೆಗೆ ಭೂಮಿಯ ಮೇಲೆ ಮನುಷ್ಯ ವಾಸವಾಗಿರುತ್ತಾನೋ, ಅಲ್ಲಿಯವರೆಗೆ ವೈರಸ್‌ಗಳ ವಿರುದ್ಧ ಆತ ಹೋರಾಡುತ್ತಲೇ ಇರಬೇಕಾಗುತ್ತದೆ ಎಂದು ಭಾವಿಸಿಕೊಳ್ಳುವುದು ಕ್ಷೇಮಕರ.

ABOUT THE AUTHOR

...view details