ಹೈದರಾಬಾದ್ :ತಾಯಿಯ ಒಡಲಿನಿಂದ ಜಗತ್ತಿಗೆ ಕಾಲಿಟ್ಟ ಮಗುವಿನ ಮೊದಲ ಆಹಾರವೇ ತಾಯಿಯ ಎದೆ ಹಾಲು. ಇದೊಂದು ಅದ್ಭುತ ಪ್ರಾಕೃತಿಕ ಪ್ರಕ್ರಿಯೆ. ಆದರೆ, ದುರದೃಷ್ಟಕರ ವಿಷಯವೆಂದರೆ ಕೆಲ ಸನ್ನಿವೇಶಗಳಲ್ಲಿ ಮಗುವಿಗೆ ಅಮ್ಮನ ಎದೆ ಹಾಲು ಪಡೆಯಲು ಸಾಧ್ಯವಾಗುತ್ತಿಲ್ಲ. ಅಂತಹ ಸಮಯದಲ್ಲಿ ‘ಹ್ಯೂಮನ್ ಮಿಲ್ಕ್ ಬ್ಯಾಂಕ್’ ಕಂದನ ರಕ್ಷಣೆಗೆ ಬರುತ್ತದೆ. ಈ ಕುರಿತು ಪ್ರಖ್ಯಾತ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಮುಂಬೈನ ಡಾ.ರಾಜಶ್ರೀ ಕಾಟ್ಕೆ ಈಟಿವಿ ಭಾರತದೊಂದಿಗೆ ಕೆಲವು ಅಮೂಲ್ಯ ಮಾಹಿತಿ ಹಂಚಿಕೊಂಡಿದ್ದಾರೆ.
ಮಾನವ ಎದೆ ಹಾಲು ಬ್ಯಾಂಕಿಂಗ್ ಎಂದರೇನು?:ಇದು ತಾಯಂದಿರು ಎದೆ ಹಾಲನ್ನು ದಾನ ಮಾಡುವ ಪರಿಕಲ್ಪನೆ. ಶಿಶು ಸೂತ್ರಕ್ಕೆ ಇದು ಆದ್ಯತೆಯ ಪರ್ಯಾಯವಾಗಿದೆ ಮತ್ತು ಶಿಶುವಿನ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಎದೆ ಹಾಲನ್ನು ದಾನ ಮಾಡಲು ಬಯಸುವ ತಾಯಂದಿರನ್ನು ಕೆಲವು ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ನಂತರ ಶಿಶುಗಳ ಅಗತ್ಯಕ್ಕೆ ಅನುಗುಣವಾಗಿ ಸಂಗ್ರಹಿಸಿ, ವಿತರಿಸಲಾಗುತ್ತದೆ.
ಎದೆ ಹಾಲನ್ನು ಯಾರು ದಾನ ಮಾಡಬಹುದು?:ಹೆಚ್‌ಐವಿ, ಹೆಪಟೈಟಿಸ್ ಬಿ ಮತ್ತು ಸಿಫಿಲಿಸ್‌ಗೆ ಪರೀಕ್ಷಿಸಲ್ಪಟ್ಟ ಮತ್ತು ಈ ಸೋಂಕುಗಳಿಂದ ಮುಕ್ತವಾಗಿರುವ ತಾಯಂದಿರು ತಮ್ಮ ಎದೆ ಹಾಲನ್ನು ನೀಡಬಹುದು. ಹಿಮೋಗ್ಲೋಬಿನ್ ಶೇ.10 ಗ್ರಾಂ ಅಥವಾ ಅದಕ್ಕಿಂತ ಹೆಚ್ಚು ಇರುವ ತಾಯಂದಿರು ಮತ್ತು ಯಾವುದೇ ಗಂಭೀರ ಅನಾರೋಗ್ಯವಿಲ್ಲದವರು ಹಾಲನ್ನು ದಾನ ಮಾಡಬಹುದು.
ಕ್ಯಾಮಾ ಮತ್ತು ಮುಂಬೈನ ಆಲ್ಬ್ಲೆಸ್ ಆಸ್ಪತ್ರೆಯಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್ : 2008ರಲ್ಲಿ ಇದನ್ನು ಪ್ರಾರಂಭಿಸಿದ ಸಮಯದಿಂದ, ಇದು 15,261ಕ್ಕೂ ಹೆಚ್ಚು ಶಿಶುಗಳಿಗೆ ಎದೆ ಹಾಲನ್ನು ಒದಗಿಸಲು ಸಹಾಯ ಮಾಡಿದೆ. ಅದರಲ್ಲಿ 6,000 ನವಜಾತ ತೀವ್ರ ನಿಗಾ ಘಟಕದಲ್ಲಿದ್ದ (ಎನ್‌ಐಸಿಯು) ನಿರ್ಗತಿಕ ಶಿಶುಗಳಾಗಿವೆ. ಮಾನವ ಎದೆ ಹಾಲು ಬ್ಯಾಂಕಿಂಗ್ನಿಂದ ನವಜಾತ ಶಿಶುಗಳ ಸಾವಿನ ಪ್ರಮಾಣ ಮತ್ತು ಕಾಯಿಲೆಗೆ ಒಳಗಾಗುವ ಸಾಧ್ಯತೆಗಳು ಕಡಿಮೆಯಾದವು.