ವಿಶಾಖಪಟ್ಟಣ:ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಪದೇ ಪದೆ ಅಗ್ನಿ ಅವಘಡಗಳು ಸಂಭವಿಸುತ್ತಲೇ ಇವೆ. ಪರವಾಡಾ ಪ್ರದೇಶದಲ್ಲಿನ ಔಷಧ ಘಟಕವೊಂದರಲ್ಲಿ (ಫಾರ್ಮಸಿ) ಸೋಮವಾರ ರಾತ್ರಿ ಸ್ಫೋಟ ಸಂಭವಿಸಿದ ಹಿನ್ನೆಲೆ, ಭಾರಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಔಷಧ ಘಟಕದ ಉದ್ಯೋಗಿಯೊಬ್ಬರು ಮೃತಪಟ್ಟಿದ್ದಾರೆ. ಇನ್ನೊಬ್ಬ ಉದ್ಯೋಗಿಗೆ ಗಾಯವಾಗಿದೆ.
ವಿಶಾಖಪಟ್ಟಣದಲ್ಲಿ ಮತ್ತೊಂದು ಅಗ್ನಿ ಅವಘಡ ರಾಮ್ಕಿ ಗ್ರೂಪ್ ಒಡೆತನದ ದ್ರಾವಕಗಳ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ. ಫಾರ್ಮಸಿಯಲ್ಲಿ ಮೊದಲು ಭಾರಿ ಸ್ಫೋಟ ಸಂಭವಿಸಿದ್ದು, ಬಳಿಕ ಬೆಂಕಿ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಯು ಪರವಾಡಾ ಪ್ರದೇಶದ ನಿವಾಸಿಗಳಲ್ಲಿ ಭೀತಿಯನ್ನು ಉಂಟುಮಾಡಿತು. ಕೆಲ ತಿಂಗಳ ಹಿಂದೆ ಎಲ್ಜಿ ಪಾಲಿಮರ್ ಸ್ಥಾವರದಲ್ಲಿ ಅನಿಲ ಸೋರಿಕೆ ದುರಂತ ಸಂಭವಿಸಿತ್ತು.
ಸೋಮವಾರ ರಾತ್ರಿ 10.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಅದಕ್ಕೂ ಮುನ್ನ ಕನಿಷ್ಠ 15 ಬಾರಿ ಸ್ಫೋಟ ಸಂಭವಿಸಿರುವುದು ಕೇಳಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಬೆಂಕಿ ಹಿನ್ನೆಲೆ ಮುಗಿಲೆತ್ತರಕ್ಕೆ ದಟ್ಟ ಹೊಗೆ ಆವರಿಸಿದ್ದಲ್ಲದೆ, ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಿಂದಲೂ ಅದು ಗೋಚರಿಸುತ್ತಿತ್ತು.
ವಿಶಾಖಪಟ್ಟಣಂದಲ್ಲಿ ಮತ್ತೊಂದು ಅಗ್ನಿ ಅವಘಡ ಕಳೆದ ತಿಂಗಳು, ಫಾರ್ಮಾ ಸಿಟಿಯ ಕಂಪನಿಯೊಂದರಲ್ಲಿ ನಡೆದ ಅನಿಲ ಸೋರಿಕೆ ಘಟನೆಯಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿದ್ದರು. ಅಲ್ಲದೆ ಕೆಲ ತಿಂಗಳ ಹಿಂದೆ ಎಲ್ಜಿ ಪಾಲಿಮರ್ ಸ್ಥಾವರದಲ್ಲಿ ನಡೆದ ಅನಿಲ ಸೋರಿಕೆ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ್ದರಲ್ಲದೆ 1000ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರು.
.