ನವದೆಹಲಿ:ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ವೇದಿಕೆ ಹಂಚಿಕೊಳ್ಳುತ್ತಿದ್ದು, ಇಂಧನ ಕಂಪನಿಗಳ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಇದು ಭಾರತದ ಪಾಲಿಗೆ ಮಹತ್ವದ್ದಾಗಿದ್ದು, ಭಾರತ-ಪಾಕ್ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸಲು ವೇದಿಕೆಯೂ ಆಗಲಿದೆ.
ಪ್ರಧಾನಿ ಅವರು ಸಾಮಾನ್ಯ ಸಭೆಯ ವೇಳೆ ಪಾಕ್ ಪ್ರತಿನಿಧಿಗಳ ಜೊತೆ ಕನಿಷ್ಠ 20 ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಮೋದಿ ಅವರ ಒಂದು ವಾರದ ಅಮೇರಿಕ ಹ್ಯೂಸ್ಟನ್ ಪ್ರವಾಸದಲ್ಲಿ ಚರ್ಚಿಸಲು ಅಗತ್ಯವಿರುವ ಅಜೆಂಡಾಗಳ ಪಟ್ಟಿ ಈಗಾಗಲೇ ಸಿದ್ಧವಾಗಿದೆ. ಅಮೇರಿಕಕ್ಕೆ ನಾಲ್ಕನೇ ಭಾರಿ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ಅವರು ವಿಶ್ವದ ಇಂಧನ ತವರು ಎಂದು ಕರೆಯಲಾದ ಹ್ಯೂಸ್ಟನ್ಗೆ ತಲುಪಿದ ಕೂಡಲೇ ಎಕ್ಸಾನ್ಮೊಬಿ, ಬಿಪಿ ಸೇರಿದಂತೆ 16 ಪ್ರಮುಖ ಇಂಧನ ಕಂಪನಿಗಳ ಸಿಇಒಗಳ ಜೊತೆ ದುಂಡು ಮೇಜಿನ ಸಭೆ ನಡೆಸಲಿದೆ. ಈ ಸಭೆ ಶನಿವಾರ ನಡೆಯಲಿದ್ದು, ಅಮೆರಿಕ-ಭಾರತ ವ್ಯಾಪಾರ ಒಪ್ಪಂದದಲ್ಲಿ ಇದು ಪ್ರಮುಖವಾಗಿದೆ.
ನಾವು ಸದ್ಯ ನಾಲ್ಕು ಬಿಲಿಯನ್ ಮೌಲ್ಯದ ತೈಲ ಹಾಗೂ ಅನಿಲವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಭಾರತವು ಇಂಧನ ಆಮದು ಮಾಡುಕೊಳ್ಳುತ್ತಿರುವ ಪ್ರಮುಖ ದೇಶ ಎಂಬುದನ್ನು ಮೋದಿ ಅವರು ಇಲ್ಲಿ ಮನವರಿಕೆ ಮಾಡಿಕೊಡುವ ಜೊತೆಗೆ, ಇಂಧನ ಕ್ಷೇತ್ರದಲ್ಲಿ ಭಾರತ ಹೂಡಿಕೆ ಮಾಡಬಹುದಾದ ಸಾಧ್ಯತೆಗಳ ಕುರಿತೂ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ತಿಳಿಸಿದ್ದಾರೆ.
'ಹೌಡಿ, ಮೋದಿ' ಕಾರ್ಯಕ್ರಮಕ್ಕೆ ಅಮೇರಿಕ ಸಜ್ಜು:
ಸೆಪ್ಟೆಂಬರ್ 22ರ ಭಾನುವಾರ ನಡೆಯಲಿರುವ 'ಹೌಡಿ, ಮೋದಿ' ಕಾರ್ಯಕ್ರಮದಲ್ಲಿ ಮೋದಿ ಅವರೊಂದಿಗೆ ಟ್ರಂಪ್ ಕಾಣಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮವು ಅಮೆರಿಕ-ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಬಹು ದೊಡ್ಡ ವೇದಿಕೆ ಎಂದು ಹೇಳಲಾಗುತ್ತಿದೆ. 50 ಸಾವಿರ ಮಂದಿ ಇಂಡೋ-ಅಮೆರಿಕನ್ಗಳು ಪಾಲ್ಗೊಳ್ಳುತ್ತಿರುವ ಈ ಕಾರ್ಯಕ್ರಮವು ದೊಡ್ಡಣ್ಣನ ನೆಲದಲ್ಲಿರುವ ಭಾರತೀಯರನ್ನು ರಾಜಕೀಯ ವೇದಿಕೆಯಡಿ ಸಂಘಟಿಸುವ ಒಂದು ಪ್ರಯತ್ನವೂ ಹೌದು. ಮೋದಿ ಅವರು ತಮ್ಮ ಎಂದಿನ ಶೈಲಿಯಲ್ಲಿ ಅಮೆರಿಕನ್ ಭಾರತೀಯರಿಗೆ ಹತ್ತಿರವಾಗಲಿದ್ದಾರೆ. ಅಮೆರಿಕದ ನೆಲದಲ್ಲಿ ಮೋದಿ ಅವರು ಪಾಲ್ಗೊಳ್ಳುತ್ತಿರುವ ಮೂರನೇ ಬಹು ದೊಡ್ಡ ಕಾರ್ಯಕ್ರಮ ಇದಾಗಿದೆ. 2014ರಲ್ಲಿ ಮ್ಯಾಡಿಸನ್ ಚೌಕ ಹಾಗೂ 2015ರಲ್ಲಿ ಸ್ಯಾನ್ ಜೋಸ್ನಲ್ಲಿ ಇಂತಹ ಕಾರ್ಯಕ್ರಮಗಳು ನಡೆದಿದ್ದವು.
ಅಮೆರಿಕದ ನೆಲದಲ್ಲಿ ನಡೆಯುತ್ತಿರವ ಈ ಬೃಹತ್ ಕಾರ್ಯಕ್ರಮವು ಭಾರತದ ಶಕ್ತಿಯನ್ನು ಪ್ರತಿನಿಧಿಸುತ್ತಿದೆ. ಟ್ರಂಪ್ ಅವರೇ ಈ ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವುದು ಭಾರತ ಎಷ್ಟರ ಮಟ್ಟಿಗೆ ಅಮೆರಿಕ ನೆಲದ ಮೇಲೆ ಪ್ರಭಾವ ಬೀರಿದೆ ಎನ್ನುವುದರ ಪ್ರತಿಬಿಂಬ. ಅಲ್ಲದೇ ವಿದೇಶಿ ನೆಲದಲ್ಲಿ ಭಾರತಕ್ಕೆ ಸಿಗುತ್ತಿರುವ ಗೌರವದ ಪ್ರತೀಕ ಎಂದು ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಅವರು ತಮ್ಮ ಇತ್ತೀಚಿನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮೋದಿ ಅವರು ವಿಶ್ವ ಸಂಸ್ಥೆಯ ಬೃಹತ್ ವೇದಿಕೆಯಲ್ಲಿ ಮಾತನಾಡುತ್ತಿರುವುದು ಇದು ಎರಡನೇ ಬಾರಿ. ಸೆಪ್ಟೆಂಬರ್ 23ರಂದು ನಡೆಯುತ್ತಿರುವ ಮಹಾಧಿವೇಶನದಲ್ಲಿ ಮೋದಿ ಅವರು ಹವಾಮಾನ ಬದಲಾವಣೆ ತಡೆಗೆ ಭಾರತವು ಯಾವ ರೀತಿ ಶುದ್ಧ ಇಂಧನ (ಇಂಗಾಲ ರಹಿತ) ಬಳಸುತ್ತಿದೆ ಎಂಬ ವಿಷಯ ಮಂಡಿಸಲಿದ್ದಾರೆ. ಭಾರತ ತನ್ನ ಮುಂದಿನ ಗುರಿಯನ್ನೂ ಈ ವೇದಿಕೆ ಮೇಲಿಡಲಿದ್ದು, ಅಂತಾರಾಷ್ಟ್ರೀಯ ಸಮುದಾಯವೂ ಸಹ ಕುತೂಹಲದಿಂದ ಕಾಯುತ್ತಿವೆ. ಪ್ರಧಾನಿ ಅವರು ಇದೇ ವೇದಿಕೆಯಲ್ಲಿ ಮಹತ್ವದ ಆಯುಷ್ಮಾನ್ ಭಾರತ್ ಯೋಜನೆಯನ್ನು ಭಾರತದಲ್ಲಿ ಯಾವ ರೀತಿ ಜಾರಿಗೆ ತರಲಾಗಿದೆ ಎಂಬುದನ್ನೂ ವಿವರಿಸಲಿದ್ದಾರೆ. ಅಲ್ಲದೇ ಜೋರ್ಡನ್ ರಾಜ, ಫ್ರಾನ್ಸ್ ಅಧ್ಯಕ್ಷ, ನ್ಯೂಜಿಲೆಂಡ್ ಪ್ರಧಾನಿ ಹಾಗೂ ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಜಂಟಿಯಾಗಿ ಆಯೋಜಿಸಿರುವ ಭಯೋತ್ಪಾದನೆ ವಿರುದ್ಧದ ರಚನಾತ್ಮಕ ಹೋರಾಟ ಕುರಿತೂ ಪ್ರಧಾನಿ ಅವರು ಮಾತನಾಡಲಿದ್ದಾರೆ. ಜರ್ಮನ್ ಪ್ರಧಾನಿ ಮಾರ್ಕೆಲ್, ಕೀನ್ಯಾ ಹಾಗೂ ಇಂಡೊನೇಷ್ಯಾ ಅಧ್ಯಕ್ಷರು, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೂ ಕೂಡ ಇದೇ ವೇದಿಕೆಯಲ್ಲಿ ಮಾತನಾಡಲಿದ್ದಾರೆ.