ನವದೆಹಲಿ:ಪಶ್ಚಿಮ ಬಂಗಾಳದಲ್ಲಿ 'ಅಂಫಾನ್' ಚಂಡಮಾರುತದಿಂದ ಅಪಾರ ಪ್ರಮಾಣದಲ್ಲಿ ಹಾನಿಯಾದ ಒಂದು ವಾರದ ಬಳಿಕ, ದೇಶವು ಈಗ ಮತ್ತೊಂದು ಚಂಡಮಾರುತವನ್ನು ಎದುರಿಸುತ್ತಿದೆ. ಈ ಅಪಾಯಕಾರಿ ಸೈಕ್ಲೋನ್ ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿಯತ್ತ ಮುನ್ನುಗ್ಗುತ್ತಿದೆ.
ಪ್ರಸ್ತುತ ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಈ ಚಂಡಮಾರುತಕ್ಕೆ 'ನಿಸರ್ಗ' ಎಂದು ಹೆಸರಿಡಲಾಗಿದೆ. ನಿಸರ್ಗ ಎಂದರೆ ಪ್ರಕೃತಿ ಎಂದರ್ಥ. ಈ ಹೆಸರನ್ನು ಭಾರತದ ನೆರೆಯ ದೇಶ ಬಾಂಗ್ಲಾದೇಶ ಇಟ್ಟಿದೆ. ಕೆಲ ದೇಶಗಳು ರೂಪಿಸಿದ ಪಟ್ಟಿಯ ಆಧಾರದಲ್ಲಿ ಈ ಹೆಸರು ನೀಡಲಾಗಿದೆ.
ಮೇ 3, 2019 ರಂದು ಒಡಿಶಾದಲ್ಲಿ ಭಾರಿ ಭೂಕುಸಿತವನ್ನು ಉಂಟುಮಾಡಿದ್ದ 'ಫನಿ' ಹೆಸರನ್ನು ಕೂಡಾ ಬಾಂಗ್ಲಾದೇಶವೇ ಸೂಚಿಸಿತ್ತು. ಅತ್ಯಂತ ತೀವ್ರವಾದ ಈ ಚಂಡಮಾರುತವು ವ್ಯಾಪಕ ಹಾನಿಯನ್ನುಂಟುಮಾಡಿತ್ತು.
ಹಿಂದೂ ಮಹಾಸಾಗರದಲ್ಲಿ ಉಂಟಾದ ಚಂಡಮಾರುತಗಳ ಹೆಸರಿಡುವಿಕೆಯು 2000ದಲ್ಲಿ ಪ್ರಾರಂಭವಾಯಿತು. ಆ ಬಳಿಕ ಬಂದ ಕೆಲ ಚಂಡಮಾರುತಗಳಿಗೆ ಗಾಟಿ (ಭಾರತ ಇಟ್ಟ ಹೆಸರು), ನಿವಾರ್ (ಇರಾನ್), ಬುರೆವಿ (ಮಾಲ್ಡೀವ್ಸ್), ತೌಕ್ಟೇ (ಮ್ಯಾನ್ಮಾರ್) ಮತ್ತು ಯಾಸ್ (ಓಮನ್) ಎಂದು ಹೆಸರಿಡಲಾಗಿದೆ.
ವೈಜ್ಞಾನಿಕ ಸಮುದಾಯ ಮತ್ತು ವಿಪತ್ತು ವ್ಯವಸ್ಥಾಪಕರಿಗೆ ಉಷ್ಣವಲಯದ ಚಂಡಮಾರುತಗಳನ್ನು ಸುಲಭವಾಗಿ ಗುರುತಿಸಲು ಹಾಗೂ ಜಾಗೃತಿ ಮೂಡಿಸಲು ಹೆಸರನ್ನು ಇಡಲಾಗುತ್ತದೆ. ಅಲ್ಲದೇ ಈ ಮೂಲಕ ಎಚ್ಚರಿಕೆಗಳನ್ನು ಹೆಚ್ಚಿನ ಪ್ರಮಾಣದ ಜನರಿಗೆ ಪರಿಣಾಮಕಾರಿಯಾಗಿ ನೀಡಲು ಈ ರೀತಿ ಹೆಸರಿಡಲಾಗಿದೆ.
ವಿಶ್ವ ಹವಾಮಾನ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ ಏಷ್ಯಾ ಮತ್ತು ಪೆಸಿಫಿಕ್ ಆಯೋಗವು 2000ದಲ್ಲಿ ನಡೆದ ಇಪ್ಪತ್ತೇಳನೇ ಅಧಿವೇಶನದಲ್ಲಿ, ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿನ ಉಷ್ಣವಲಯದ ಚಂಡಮಾರುತಗಳಿಗೆ ಹೆಸರುಗಳನ್ನು ನೀಡಲು ಒಪ್ಪಿಗೆ ನೀಡಿತು.
ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್, ಮಯನ್ಮಾರ್, ಓಮನ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಥಾಯ್ಲೆಂಡ್ ಈ ಸಮಿತಿಯ ಭಾಗವಾಗಿದೆ. ನಂತರ 2018 ರಲ್ಲಿ ಇರಾನ್, ಕತಾರ್, ಸೌದಿ ಅರೇಬಿಯಾ, ಯುಎಇ ಮತ್ತು ಯೆಮೆನ್ ದೇಶಗಳು ಈ ಪಟ್ಟಿಗೆ ಸೇರಿತು.