ನವದೆಹಲಿ:ಗಣರಾಜ್ಯೋತ್ಸವ ದಿನದಂದು ರೈತರು ನಡೆಸಿದ ಟ್ರ್ಯಾಕ್ಟರ್ ಱಲಿ ವೇಳೆ ನಡೆದ ಹಿಂಸಾಚಾರದಲ್ಲಿ ಸಾಕಷ್ಟು ಮಂದಿ ಪೊಲೀಸರು ಗಾಯಗೊಂಡಿದ್ದರು. ಇದೇ ಸಮಯದಲ್ಲಿ ಪ್ರತಿಭಟನಾಕಾರನೋರ್ವ ಪೊಲೀಸ್ ಮೇಲೆ ಖಡ್ಗ ಬೀಸುತ್ತಿರುವ ಫೋಟೋ ಕೂಡಾ ವೈರಲ್ ಆಗಿದ್ದು, ಕಾನ್ಸ್ಟೇಬಲ್ ಪ್ರಾಣಾಪಾಯದಿಂದ ಪಾರಾಗಿದ್ದರು.
ದೆಹಲಿಯ ಮಂಡವಾಲಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ದಯಾಚಂದ್ ಪ್ರಾಣಾಪಾಯದಿಂದ ಪಾರಾಗಿದ್ದ ಸಿಬ್ಬಂದಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿ 24ರಲ್ಲಿ ಕರ್ತವ್ಯದಲ್ಲಿದ್ದರು. ಟ್ರ್ಯಾಕ್ಟರ್ ಪರೇಡ್ಗೆ ಅವಕಾಶ ಕೊಡದ ಕಾರಣದಿಂದ ಸಾವಿರಾರು ಮಂದಿ ಪ್ರತಿಭಟನಾಕಾರರು ಪೊಲೀಸರ ಮೇಲೆ ದಾಳಿ ನಡೆಸಿದ್ದರು.
ಇದೇ ವೇಳೆ ಟರ್ಬನ್ ಧರಿಸಿ, ಖಡ್ಗಧಾರಿಯಾಗಿ ಬಂದಿದ್ದ ವೃದ್ಧ ಪ್ರತಿಭಟನಾಕಾರನೋರ್ವ ಸಬ್ ಇನ್ಸ್ಪೆಕ್ಟರ್ ದಯಾಚಂದ್ ಮೇಲೆ ಖಡ್ಗದಿಂದ ದಾಳಿ ನಡೆಸಲು ಮುಂದಾಗಿದ್ದಾನೆ. ಆಗ ದಯಾಚಂದ್ ಪಕ್ಕದಲ್ಲಿದ್ದ ಕಾನ್ಸ್ಟೇಬಲ್ ನಿತಿನ್ ಅವರು ಸಬ್ ಇನ್ಸ್ಪೆಕ್ಟರ್ನನ್ನು ಕಾಪಾಡಿದ್ದಾರೆ.