ನವದೆಹಲಿ: ರಾಷ್ಟ್ರದ ಸಮಸ್ಯೆಗಳನ್ನು ಬಿಟ್ಟು ಪ್ರಧಾನಿ ತಮ್ಮ ವರ್ಚಸ್ಸನ್ನು ಉಳಿಸಿಕೊಳ್ಳುವುದಕ್ಕೆ ತಮ್ಮ ಶೇಕಡಾ ನೂರರಷ್ಟು ಗಮನ ಕೇಂದ್ರೀಕರಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಭಾರತ ಚೀನಾದೊಂದಿಗ ಹೇಗೆ ವರ್ತಿಸಬೇಕು..? ಎಂಬ ಕುರಿತು ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ ಅವರು '' ಕೆಲವು ಸಂಸ್ಥೆಗಳು ಪ್ರಧಾನಿಯ ವರ್ಚಸ್ಸನ್ನು ಹೆಚ್ಚು ಮಾಡುವ ಕಾರ್ಯದಲ್ಲಿ ನಿರತವಾಗಿವೆ. ರಾಷ್ಟ್ರದ ವರ್ಚಸ್ಸನ್ನು ಒಬ್ಬ ಮನುಷ್ಯನ ವರ್ಚಸ್ಸು ಎಂಬಂತೆ ಬಿಂಬಿಸಲಾತ್ತಿದೆ'' ಎಂದು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಳೆದ ತಿಂಗಳು ನಡೆದ ಕ್ರೂರ ಗಾಲ್ವಾನ್ ಕಣಿವೆಯಲ್ಲಿ ಭಾರತ, ಚೀನಾ ಸಂಘರ್ಷದ ನಂತರ ಆದ ಬೆಳವಣಿಗೆಗಳ ಬಗ್ಗೆ ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದಾರೆ. ದೇಶ ಚೀನಾದಷ್ಟೇ ಬಲಗೊಂಡರೇ ಮಾತ್ರ ಅವರನ್ನು ಮಣಿಸಬಹುದು ಅಥವಾ ಅವರೊಂದಿಗೆ ಯಶಸ್ವಿಯಾಗಿ ವರ್ತಿಸಬಹುದು ಎಂದಿರುವ ರಾಹುಲ್ ಚೀನಾದೊಂದಿಗಿನ ಪರಿಸ್ಥಿತಿ ನಿಭಾಯಿಸಲು ಒಂದು ಅಂತಾರಾಷ್ಟ್ರೀಯ ದೃಷ್ಟಿ ಬೇಕು. ದೇಶ ಜಾಗತಿಕ ದೃಷ್ಟಿಯನ್ನು ಹೊಂದಬೇಕು ಎಂದು ಈ ವೇಳೆ ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ಆಂತರಿಕ ಸಂಘರ್ಷ ಹೆಚ್ಚಾಗುತ್ತಿದ್ದು, ಓರ್ವ ಭಾರತೀಯನ ಜೊತೆ ಮತ್ತೋರ್ವ ಭಾರತೀಯ ಹೋರಾಡುತ್ತಿದ್ದಾನೆ. ಅದೆಲ್ಲವನ್ನೂ ಬಿಟ್ಟು ಪ್ರಧಾನಿಯನ್ನು ಪ್ರಶ್ನಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಇದು ರಾಹುಲ್ ಗಾಂಧಿಯ ಸರಣಿಯ ವಿಡಿಯೋಗಳ ಭಾಗವಾಗಿದ್ದು, ಇದಕ್ಕೂ ಮೊದಲು ಆರ್ಥಿಕ ಪರಿಣಿತರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ವಿಡಿಯೋ ಸಂವಾದ ಮಾಡುತ್ತಿದ್ದರು. ಈ ವಿಡಿಯೋ ಜುಲೈ 17 ಹಾಗೂ ಜುಲೈ 20ರ ವಿಡಿಯೋ ಸರಣಿಯ ಮುಂದುವರೆದ ಭಾಗವಾಗಿದೆ.