ಕಾರ್ಗಿಲ್ ಕದನದಲ್ಲಿ ದುಷ್ಟ ಪಾಕಿಸ್ತಾನ ಸೋತು ಸುಣ್ಣವಾದ ನಂತರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಕುತಂತ್ರವನ್ನು ಭಾರತವು ಎಳೆ ಎಳೆಯಾಗಿ ಬಿಚ್ಚಿಡತೊಡಗಿತು. ಭಾರತದ ಸಾರ್ವಭೌಮತೆಯ ಮೇಲೆ ಪಾಕಿಸ್ತಾನವೇ ಅತಿಕ್ರಮಣ ನಡೆಸಿ ಯುದ್ಧ ನಡೆಯಲು ಕಾರಣವಾಗಿದ್ದನ್ನು ವಿಶ್ವದ ಬಹುತೇಕ ದೇಶಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಭಾರತ ಸಂಪೂರ್ಣ ಯಶಸ್ವಿಯಾಯಿತು. ಹೀಗಾಗಿ ಆ ಒಂದು ಕಾಲಘಟ್ಟದಲ್ಲಿ ಪಾಕ್ ತನ್ನ ನೀಚ ಕೃತ್ಯದಿಂದಾಗಿ ಇಡೀ ವಿಶ್ವದಲ್ಲೇ ಒಂಟಿಯಾಗಬೇಕಾಯಿತು. ವಿಶ್ವದ ಎಲ್ಲ ರಾಷ್ಟ್ರಗಳಿಗೂ ಪಾಕಿಸ್ತಾನದ ದುಷ್ಟ ಬುದ್ಧಿಯ ಅರಿವಾಗಿತ್ತು.
ಕಾರ್ಗಿಲ್ ವಿಜಯದ ನಂತರ ಪಾಕ್ ವಿರುದ್ಧ ಭಾರತ ಕೈಗೊಂಡಿದ್ದ ರಾಜತಾಂತ್ರಿಕ ಸಮರದ ಘಟನಾವಳಿಗಳು ಇಲ್ಲಿವೆ:
* ಕಾರ್ಗಿಲ್ನಲ್ಲಿ ಪಾಕ್ ಸೇನೆ ಹಾಗೂ ಭಯೋತ್ಪಾದಕರು ಒಳಗೆ ನುಸುಳಿದ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಭಾರತ ಮಿಲಿಟರಿ ಹಾಗೂ ರಾಜತಾಂತ್ರಿಕ ಎರಡೂ ವಲಯಗಳಲ್ಲಿ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳತೊಡಗಿತು.
* ಕಾರ್ಗಿಲ್ನಲ್ಲಿ ಸಕ್ರಿಯರಾಗಿದ್ದ ಭಯೋತ್ಪಾದಕರೊಂದಿಗೆ ಪಾಕಿಸ್ತಾನ ಮಿಲಿಟರಿ ಅಧಿಕಾರಿಗಳು, ಸೈನಿಕರು ನಡೆಸಿದ ಟೆಲಿಫೋನ್ ಸಂಭಾಷಣೆಯ ರೆಕಾರ್ಡಿಂಗ್ಗಳು ಭಾರತಕ್ಕೆ ಲಭ್ಯವಾಗಿದ್ದವು. ಇವುಗಳನ್ನು ಸಮರ್ಥವಾಗಿ ಬಳಸಿಕೊಂಡ ಭಾರತ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಪಾಕಿಸ್ತಾನದ ಕುತಂತ್ರಗಳನ್ನು ಬಿಚ್ಚಿಟ್ಟಿತು. ಇದರಿಂದಾಗಿ ಪಾಕ್ ವಿಶ್ವಮಟ್ಟದಲ್ಲಿ ಭಾರಿ ಮುಜುಗರ ಅನುಭವಿಸುವಂತಾಯಿತು.
* ಕಾಶ್ಮೀರ ವಿವಾದ ಇರುವುದರಿಂದಲೇ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಹೇಳುತ್ತ ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಕರಣಗೊಳಿಸುವ ಪಾಕ್ ಸುಳ್ಳನ್ನು ಜಗತ್ತಿನಲ್ಲಿ ಯಾರೂ ನಂಬಲಿಲ್ಲ.
* ವಾಸ್ತವ ನಿಯಂತ್ರಣ ರೇಖೆಯ ಸ್ಥಿತಿಗತಿಯ ಕುರಿತು ಹಾಗೂ ಪಾಕಿಸ್ತಾನವು ಭಾರತದ ಸಾರ್ವಭೌಮತೆಯ ಮೇಲೆ ದಾಳಿ ಮಾಡಿದೆ ಎಂಬುದನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಭಾರತ ಯಶಸ್ವಿಯಾಯಿತು.
* ಯುದ್ಧ ನಡೆಯುತ್ತಿರುವಾಗ ವಿಶ್ವದ ಪ್ರಮುಖ ರಾಷ್ಟ್ರಗಳು ಮಧ್ಯ ಪ್ರವೇಶಿಸಿ ಕದನ ವಿರಾಮ ಮೂಡಿಸಲಿವೆ ಎಂದು ಪಾಕಿಸ್ತಾನ ನಂಬಿತ್ತು.