ಕರ್ನಾಟಕ

karnataka

ETV Bharat / bharat

ಏಷ್ಯಾದ ಅತೀ ದೊಡ್ಡ ಕೊಳಗೇರಿಯಲ್ಲಿ ಕೊರೊನಾ ನಿಯಂತ್ರಿಸಲು "ಧಾರಾವಿ ಮಿಶನ್" ನೆರವಾಗಿದ್ದು ಹೇಗೆ? - ಏಷ್ಯಾದ ಅತೀ ದೊಡ್ಡ ಸ್ಲಂ ಧಾರವಿ

ಏಷ್ಯಾದ ಅತೀ ದೊಡ್ಡ ಕೊಳಗೇರಿ ಮುಂಬೈನ ಧಾರಾವಿ ಕಳೆದೆರಡು ತಿಂಗಳ ಹಿಂದೆ ಕೊರೊನಾ ಹಾಟ್​​ ಸ್ಪಾಟ್​ ಎನಿಸಿಕೊಂಡಿತ್ತು. ಆದರೆ, ಈಗ ಆ ಕಳಂಕವನ್ನು ಧಾರಾವಿ ಕಳೆದುಕೊಂಡಿದೆ. ಇದಕ್ಕೆ ಕಾರಣ ಧಾರಾವಿ ಮಿಶನ್ ಅಭಿಯಾನ. ಹಾಗಾದರೆ ಆ ಅಭಿಯಾನ ಹೇಗಿತ್ತು ಎಂಬುದರ ಬಗ್ಗೆ ಪ್ರಮುಖ ವ್ಯಕ್ತಿಗಳು ಈಟಿವಿ ಬಾರತದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

How 'Dharavi Mission' helped Asia's largest slum to achieve victory against Corona
ಕೊರೊನಾ ನಿಯಂತ್ರಿಸಲು "ಧಾರವಿ ಮಿಶನ್" ಹೇಗೆ ನೆರವಾಯಿತು

By

Published : Jun 28, 2020, 1:57 PM IST

ಮುಂಬೈ (ಮಹಾರಾಷ್ಟ್ರ): ಏಷ್ಯಾದ ಅತಿ ದೊಡ್ಡ ಕೊಳೆಗೇರಿ ಎಂದು ಪರಿಗಣಿಸಲ್ಪಟ್ಟಿರುವ ಧಾರಾವಿ ಈ ಹಿಂದೆ ನಗರದ ಕೊರೊನಾ ಹಾಟ್‌ಸ್ಪಾಟ್ ಎಂದು ಗುರುತಿಸಲ್ಪಟ್ಟಿತು. ಆದರೆ, ಕಳೆದ ಒಂದು ತಿಂಗಳಿನಿಂದ ಧಾರಾವಿಯಲ್ಲಿ ಪಾಸಿಟಿವ್ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿದೆ.

ಮಹಾ ನಗರಪಾಲಿಕೆ, ಪೊಲೀಸ್ ಇಲಾಖೆ, ಆರೋಗ್ಯ ಕಾರ್ಯಕರ್ತರು ಮತ್ತು ಎನ್‌ಜಿಒಗಳ ಸತತ ಶ್ರಮವೇ ಇಂದು ಧಾರಾವಿಯಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಇಲ್ಲಿ ದೈನಂದಿನ ಕೋವಿಡ್ -19 ಪ್ರಕರಣಗಳು ಮೇ ತಿಂಗಳಲ್ಲಿ ಸರಾಸರಿ 43 ಇತ್ತು. ಆದರೆ, ಜೂನ್ ಮೂರನೇ ವಾರದಲ್ಲಿ ಇದು 19 ಕ್ಕೆ ಇಳಿಮುಖವಾಗಿದೆ. ಇದಕ್ಕಾಗಿ, ಕೇಂದ್ರ ಆರೋಗ್ಯ ಸಚಿವಾಲಯವು ಮುಂಬೈ ಮಹಾನಗರ ಪಾಲಿಕೆಯನ್ನು ಶ್ಲಾಘಿಸಿದೆ. ಇದರ ಬೆನ್ನಲ್ಲೇ ಧಾರಾವಿಯಲ್ಲಿ ಸೋಂಕು ನಿಯಂತ್ರಣಕ್ಕೆ ಜಾರಿಗೆ ತಂದ ಕ್ರಮಗಳ ಕುರಿತು ಅತೀ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿರುವ ಬಗ್ಗೆ ದೆಹಲಿ ಸರ್ಕಾರ ಮಾಹಿತಿ ಕೇಳಿದೆ.

ರಮೇಶ್ ನಂಗ್ರೆ, ಹಿರಿಯ ಪೊಲೀಸ್ ಅಧಿಕಾರಿ

ಧಾರಾವಿ ಜನರು ಹೆಚ್ಚಾಗಿ ಇಕ್ಕಟ್ಟಿನ ಜಾಗಗಳಲ್ಲಿ ವಾಸಿಸುತ್ತಾರೆ. ಹೆಚ್ಚು ಜನನಿಬಿಡ ಪ್ರದೇಶವಾದ್ದರಿಂದ ಜನರು ರಸ್ತೆಗಳಲ್ಲಿ ಹೆಚ್ಛಾಗಿ ಓಡಾಡುತ್ತಾರೆ. ಒಂದು ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ಪ್ರದೇಶದಲ್ಲಿ ಜನರನ್ನು ಮನೆಯೊಳಗೇ ಇರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳುವುದು ಸವಾಲಿನ ಕೆಲಸ. ಆರಂಭದ ದಿನಗಳಲ್ಲಿ ಜನರು ಮುಂದೆ ಬಂದು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಹೆದರುತ್ತಿದ್ದರು. ಆದ್ದರಿಂದ ಮಹಾನಗರ ಪಾಲಿಕೆ ಕುಟುಂಬ ವೈದ್ಯರಾದ ಖಾಸಗಿ ವೈದ್ಯರ ಮೂಲಕ ಜನರನ್ನು ತಲುಪುವ ನಿರ್ಧಾರಕ್ಕೆ ಬಂತು. ಈ ವೈದ್ಯರು ಕಡಿಮೆ ಶುಲ್ಕ ವಿಧಿಸಿ ಜನರ ವಿಶ್ವಾಸ ಗಳಿಸಿ ಅವರೊಂದಿಗೆ ನಿಕಟ ಸಂಪರ್ಕವನ್ನು ಬೆಳೆಸಿಕೊಂಡರು. ಇದೀಗ ಕೋವಿಡ್​ ಪರೀಕ್ಷೆಗೆ ಕ್ಲಿನಿಕ್ ಸ್ಥಾಪಿಸಿ ವೈದ್ಯರು ಶಂಕಿತ ರೋಗಿಗಳನ್ನು ಪರೀಕ್ಷೆ ನಡೆಸುತ್ತಿದ್ದಾರೆ. ಜೊತೆಗೆ ಅವರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ಕುರಿತು ಈಟಿವಿ ಭಾರತ​ ಜೊತೆ ಮಾತನಾಡಿದ ಭಾರತೀಯ ವೈದ್ಯಕೀಯ ಪರಿಷತ್ತಿನ ಅಧಿಕಾರಿ ಡಾ. ಅನಿಲ್ ಪಚ್ನೆಕರ್, ಧಾರಾವಿಯಲ್ಲಿ ಸೋಂಕು ನಿಯಂತ್ರಣಕ್ಕೆ ಜಾರಿಗೆ ತಂದ 'ಧಾರಾವಿ ಮಿಶನ್' ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಡಾ.ಅನಿಲ್ ಪಚ್ನೆಕರ್, ವೈದ್ಯ

ಡಾ. ಅನಿಲ್ ಪಚ್ನೆಕರ್ ಕಳೆದ 35 ವರ್ಷಗಳಿಂದ ಧಾರವಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಅವರು ಕೊಟ್ಟ ಮಾಹಿತಿ ಪ್ರಕಾರ ಒಂದು ವಾರದಲ್ಲಿ ಸುಮಾರು 47,500 ಜನರ ಮನೆಗೆ ತೆರಳಿ ಪರೀಕ್ಷೆ ಮಾಡಲಾಗಿದೆ. ಈ ಪೈಕಿ ಸುಮಾರು 1,100 ಜನರನ್ನು ಸಾಂಸ್ಥಿಕ ಕ್ವಾರಂಟೈನ್​ಗೆ ಕಳುಹಿಸಲಾಗಿದೆ. ಇದರಲ್ಲಿ ಪಾಸಿಟಿವ್ ಬಂದ ಸುಮಾರು 150 ಜನರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಲಾಕ್‌ ಡೌನ್ ಸಮಯದಲ್ಲಿ ಧಾರಾವಿಯಲ್ಲಿ ವಾಸಿಸುತ್ತಿದ್ದ ನಾಲ್ಕು ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು ತಮ್ಮ ಊರಿಗೆ ತೆರಳಿದ್ದಾರೆ. ಇದರಿಂದ ಈ ಪ್ರದೇಶದ ಜನದಟ್ಟಣೆ ಕಡಿಮೆಯಾಯಿತು. ಹೀಗಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಬಿಎಂಸಿಗೆ ನೆರವಾಯಿತು. ಮಹಾನಗರ ಪಾಲಿಕೆಯು ಫೀವರ್​ ಕ್ಲಿನಿಕ್​ಗಳ ಸಂಖ್ಯೆಯನ್ನು ಹೆಚ್ಚಿಸಿತು. ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸುವುದು, ಸರಿಯಾದ ಕ್ವಾರಂಟೈನ್​ ವ್ಯವಸ್ಥೆ ಮಾಡುವುದು, ನಿಯಮಿತವಾಗಿ ಕೈ ತೊಳೆಯುವುದು, ಸ್ಯಾನಿಟೈಸರ್​ ಸಿಂಪಡನೆ, ಮಾಸ್ಕ್​ ಧರಿಸುವಂತೆ ಜನರನ್ನು ಪ್ರೇರೇಪಿಸುವುದು ಸೇರಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿತು. ಇದು ಸೋಂಕು ನಿಯಂತ್ರಣಕ್ಕೆ ಬರಲು ಪ್ರಮುಖ ಕಾರಣವಾಯಿತು ಎಂದು ಡಾ. ಅನಿಲ್ ಪಚ್ನೆಕರ್ ಹೇಳಿದ್ದಾರೆ.

ಬಿಎಂಸಿಯ ಉಪ ಆಯುಕ್ತ ಕಿರಣ್ ದಿಘವ್ಕರ್ ಕೊಟ್ಟ ಮಾಹಿತಿ ಪ್ರಕಾರ, ಹೆಚ್ಚಿನ ಬಿಎಂಸಿ ಮತ್ತು ಆರೋಗ್ಯ ಕಾರ್ಯಕರ್ತರನ್ನು ಮೊಬೈಲ್ ವ್ಯಾನ್​ಗಳ ಮೂಲಕ ಕೆಲಸ ಮಾಡಲು ನಿಯೋಜಿಸಲಾಯಿತು. ಇದರ ಜೊತೆಗೆ ಧಾರಾವಿಯಲ್ಲಿಯೇ ಕ್ವಾರಂಟೈನ್ ಕೇಂದ್ರ ತೆರೆಯಲಾಯಿತು. ಈ ಕಾರಣದಿಂದಾಗಿ ಜನರು ಸುರಕ್ಷಿತವೆಂದು ಭಾವಿಸಿದರು. ಕಂಟೇನ್​ಮೆಂಟ್​ ಝೋನ್​ಗಳಲ್ಲಿ ಜನರು ಮನೆಯೊಳಗೆ ಉಳಿಯುವಂತೆ ಮಾಡುವ ವಿಷಯವನ್ನೂ ಸಮರ್ಥವಾಗಿ ನಿಭಾಯಿಸಲಾಯಿತು. ಬಿಎಂಸಿ 21 ಸಾವಿರ ಆಹಾರದ ಪ್ಯಾಕೆಟ್‌ಗಳನ್ನು ವಿತರಿಸಿತು. ಇದರಿಂದಾಗಿ ಜನರು ಆಹಾರ ಸಾಮಗ್ರಿಗಳಿಗಾಗಿ ಹೊರಬರಬೇಕಾದ ಅವಶ್ಯಕತೆ ಬಂದಿಲ್ಲ. ಈ ಎಲ್ಲಾ ಕ್ರಮಗಳು ಸೋಂಕು ನಿಯಂತ್ರಣಕ್ಕೆ ಸಹಾಯಕವಾಯಿತು ಎಂದು ತಿಳಿಸಿದ್ದಾರೆ.

ಕಿರಣ್ ದಿಘವ್ಕರ್ , ಬಿಎಂಸಿ ಉಪ ಆಯುಕ್ತ

ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ್ ನಂಗ್ರೆ ನೀಡಿದ ಮಾಹಿತಿ ಪ್ರಕಾರ, ಕ್ರೆಡೈ-ಎಂಸಿಐ ಮತ್ತು ಭಾರತೀಯ ಜೈನ ಸಂಘಟನೆ ಸೇರಿದಂತೆ ಹಲವಾರು ಎನ್‌ಜಿಒಗಳು ಮತ್ತು ಸಂಸ್ಥೆಗಳು ಮಿಶನ್ ಧಾರಾವಿ ಆಂದೋಲನಕ್ಕೆ ಕೈ ಜೋಡಿಸಿದವು. ಸ್ಥಳೀಯ ಪೊಲೀಸರ ಪಾತ್ರವೂ ಇದರಲ್ಲಿ ಬಹಳ ನಿರ್ಣಾಯಕವಾಗಿತ್ತು. ಮೊಬೈಲ್ ವ್ಯಾನ್‌ಗಳ ಮೂಲಕ ವಿವಿಧ ಭಾಷೆಗಳಲ್ಲಿ ರೆಕಾರ್ಡ್ ಮಾಡಲಾದ ಜಾಗೃತಿ ಧ್ವನಿ ಮುದ್ರಿಕೆಯನ್ನು ಪೊಲೀಸರು ಭಿತ್ತರಿಸಿದರು. ಈ ಮೂಲಕ ಜನರ ಮನವೊಲಿಸಲಾಯಿತು. ಪೊಲೀಸ್ ಸಿಬ್ಬಂದಿಯನ್ನು ದಿನದ 24 ಗಂಟೆಯೂ ಸಜ್ಜಾಗಿಡಲಾಯಿತು ಮತ್ತು ಧಾರಾವಿಯ ಗಲ್ಲಿ ಗಲ್ಲಿಗಳಲ್ಲಿ ಪೊಲೀಸ್​ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಯಿತು.

ಹೀಗಾಗಿ ನಗರದ ಕೊರೊನಾ ಹಾಟ್​ಸ್ಪಾಟ್​ ಆಗಿದ್ದ ಧಾರಾವಿ ದಿನ ಕಳೆದಂತೆ ಬದಲಾಯಿತು. ಧಾರಾವಿಯ ಜನರ ಸಹಕಾರವು ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಯಾಕೆಂದರೆ ಸ್ಲಮ್​ ಏರಿಯಾ ಆದ್ದರಿಂದ ಸ್ಥಳಾವಕಾಶದ ಕೊರತೆಯಿಂದ ಜನ ಸಾಮಾಜಿಕ ಅಂತರ ಕಾಪಾಡದೆ ಗುಂಪಾಗಿ ವಾಸಿಸಬೇಕಾದ ಅನಿವಾರ್ಯತೆಯಿದೆ. ಒಟ್ಟಾರೆ, ಕಾರ್ಯಾಚರಣೆಯ ಸಮಯದಲ್ಲಿ 33 ಪೊಲೀಸ್​ ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದಾರೆ. ಒಬ್ಬ ಅಧಿಕಾರಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಪೊಲೀಸ್​ ಸಿಬ್ಬಂದಿ ತಮ್ಮ ಆತ್ಮಸ್ಥೈರ್ಯ ಕಳೆದುಕೊಂಡಿಲ್ಲ. ಹಗಲು ರಾತ್ರಿ ಕೆಲಸ ಮಾಡುವ ಮೂಲಕ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ABOUT THE AUTHOR

...view details